ಸಂಬಂಧಗಳೆಂದರೆ ಕೇವಲ ರಕ್ತಸಂಬಂಧಕ್ಕೆ ಮಾತ್ರ ಸೀಮಿತವಲ್ಲ ಎನ್ನುವುದಕ್ಕೆ ನಟಿ ಮೇಘನಾ ರಾಜ್ ಮತ್ತು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಬಾಂಧವ್ಯವೇ ಸಾಕ್ಷಿ. ʻಉದಯʼ ಟಿವಿಯ ʻಧ್ರುವ ದಸರಾʼ ಕಾರ್ಯಕ್ರಮದಲ್ಲಿ ಮೇಘನಾ ರಾಜ್ ಅವರ ಅನಿರೀಕ್ಷಿತ ಪ್ರವೇಶ ಧ್ರುವ ಸರ್ಜಾಗೆ ಆಶ್ಚರ್ಯ ತಂದಿತು. ಈ ವೇದಿಕೆಯಲ್ಲಿ ಇಬ್ಬರೂ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು, ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮೇಘನಾ ರಾಜ್, “ನಾನು ಒಬ್ಬಳೇ ಮಗಳಾಗಿ ಬೆಳೆದವಳು. ನನಗೆ ಅಣ್ಣ ಅಥವಾ ತಮ್ಮ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಯಾವಾಗಲೂ ಅನ್ನಿಸುತ್ತಿತ್ತು. ಆದರೆ, ಸಂಬಂಧಗಳು ಹುಟ್ಟಿನಿಂದಲೇ ಬರಬೇಕೆಂದಿಲ್ಲ. ದೇವರು ಕೆಲವು ಅನಿರೀಕ್ಷಿತ ವ್ಯಕ್ತಿಗಳನ್ನು ನಮ್ಮ ಜೀವನಕ್ಕೆ ಕಳುಹಿಸುತ್ತಾನೆ. ಧ್ರುವ ನನಗೆ ದೇವರು ಕೊಟ್ಟ ತಮ್ಮ” ಎಂದು ಭಾವುಕರಾಗಿ ನುಡಿದರು. ಅವರ ಈ ಮಾತುಗಳು ಧ್ರುವನೊಂದಿಗಿನ ಅವರ ಬಾಂಧವ್ಯದ ಆಳವನ್ನು ಬಿಂಬಿಸಿದವು.
ಅತ್ತಿಗೆಯ ಬಗ್ಗೆ ಧ್ರುವ ಸರ್ಜಾ ಅವರ ಮಾತುಗಳೂ ಅಷ್ಟೇ ಮನಮಿಡಿಯುವಂತಿದ್ದವು. “ನಾನು ಯಾವಾಗಲೂ ಹೇಳುವಂತೆ, ಮೇಘನಾ ತುಂಬಾ ಬಲಶಾಲಿ. ನಾನು ಮತ್ತು ಅಣ್ಣ (ಚಿರಂಜೀವಿ ಸರ್ಜಾ) ಬೋರ್ಡಿಂಗ್‌ನಲ್ಲೇ ಬೆಳೆದವರು. ಅಣ್ಣನ ಬಗ್ಗೆ ನನಗೆ ಅತೀವ ಅಭಿಮಾನವಿತ್ತು. ಅಣ್ಣನ ಮದುವೆಯಾದಾಗ, ನನ್ನ ಅಣ್ಣ ನನ್ನೊಂದಿಗೆ ಸಮಯ ಕಳೆಯುತ್ತಿಲ್ಲ ಎಂದು ಕೊಂಚ ಬೇಸರವಾಗುತ್ತಿತ್ತು. ಆಗ ಅಣ್ಣ ನನ್ನನ್ನು ಕರೆದು, ‘ಇವರು ನಿನ್ನ ಅತ್ತಿಗೆ’ ಎಂದು ಪರಿಚಯಿಸಿದ್ದರು” ಎಂದು ನೆನಪಿಸಿಕೊಂಡರು.
ಧ್ರುವ ಮುಂದುವರೆದು, “ಒಂದು ದಿನ ಅಣ್ಣ ನನ್ನನ್ನು ಕರೆದು, ‘ನಿನ್ನ ತಲೆಯಲ್ಲಿ ಏನು ನಡೆಯುತ್ತಿದೆ ಎಂದು ನನಗೆ ಗೊತ್ತು. ಹಾಗೇನೂ ಇಲ್ಲ, ನಾನು ಎಲ್ಲರಿಗೂ ಸಮಯ ನೀಡುತ್ತೇನೆ’ ಎಂದು ಸಮಾಧಾನಪಡಿಸಿದರು.
ನಮ್ಮ ತಾಯಿ ಮತ್ತು ಅಣ್ಣ ಮೇಘನಾರನ್ನು ಪರಿಚಯಿಸಿದ್ದು ಹೀಗೆ: ‘ಇವರು ನಿನ್ನ ಅತ್ತಿಗೆ. ಅತ್ತಿಗೆ ಅಂದರೆ ಎರಡನೇ ತಾಯಿ ಇದ್ದಂತೆ, ನಿನ್ನ ಎರಡನೇ ತಾಯಿ ಇವರು.’ ತಾಯಿ ಎಂದು ಕರೆಯಲು ಆಗುವುದಿಲ್ಲವಲ್ಲ, ಅದಕ್ಕೆ ಸಿಲ್ ಎಂದು ಕರೆಯುತ್ತೇನೆ. ಅವರು ಯಾವಾಗಲೂ ನನಗೆ ತುಂಬಾ ಬೆಂಬಲ ನೀಡುತ್ತಾರೆ” ಎಂದು ಹೇಳಿದರು. ಧ್ರುವ ಸರ್ಜಾ ಈ ಮಾತುಗಳು ಅತ್ತಿಗೆಯ ಮೇಲಿನ ಅವರ ಗೌರವ ಮತ್ತು ಪ್ರೀತಿಯನ್ನು ಸ್ಪಷ್ಟಪಡಿಸಿದವು.