ಹೊಸ ಏರ್‌ಪೋರ್ಟ್ ತಮಿಳುನಾಡು ಸರ್ಕಾರ ಈಚೆಗೆ ಹೊಸೂರಿನಲ್ಲಿ ವಿಮಾನ ನಿಲ್ದಾಣಕ್ಕೆ ಸ್ಥಳ ಗುರುತಿಸಿದ ಬೆನ್ನಲ್ಲೇ ಈ ಪ್ರದೇಶದಲ್ಲಿನ ಭೂಮಿಗೆ ಭಾರಿ ಬೇಡಿಕೆ ಬಂದಿದ್ದು ರಿಯಲ್ ಎಸ್ಟೇಟ್ ವ್ಯವಹಾರವೂ ಗಗನಕ್ಕೇರಿದೆ.
ವಿಮಾನ ನಿಲ್ದಾಣಕ್ಕೆ ಗುರುತಿಸಿದ ಸ್ಥಳದ 10 ಕಿ.ಮೀ. ದೂರದವರೆಗೆ ಭೂಮಿಗೆ ಬಂಗಾರದ ಬೆಲೆ ಬಂದಿದೆ. ಪ್ರತಿದಿನ ಆ ಕಡೆ ತಮಿಳುನಾಡು-ಈ ಕಡೆಯ ಕರ್ನಾಟಕದ ರಿಯಲ್ ಎಸ್ಟೇಟ್ ಉದ್ದಿಮೆದಾರರು ಹೊಸೂರಿನತ್ತ ದಾಂಗುಡಿ ಇಡುತ್ತಿದ್ದಾರೆ. ಅದರಲ್ಲೂ ಬೆಂಗಳೂರಿನವರು ಅಲ್ಲಿ ಭೂಮಿ ಕೊಂಡುಕೊಳ್ಳಲು ತಡಕಾಡುತ್ತಿದ್ದಾರೆ.
ವಿಮಾನ ನಿಲ್ದಾಣದ ಬಳಿಯ ಮಾಲೂರು ರಸ್ತೆ, ಹೊಸೂರು ರಸ್ತೆ, ಸರ್ಜಾಪುರ-ಎಲೆಕ್ಟ್ರಾನಿಕ್ ಸಿಟಿ-ಅತ್ತಿಬೆಲೆಯಲ್ಲಿನ ಜನರು ಅಲ್ಲಿ ನಿವೇಶನ ಕೊಂಡುಕೊಳ್ಳಲು ಎಡತಾಕುತ್ತಿದ್ದಾರೆ. ಆ ಭಾಗದಲ್ಲಿ ಹೆಚ್ಚು ಐಟಿ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ.
ಆ ಸಿಬ್ಬಂದಿ ಪೈಕಿ ಬಹುತೇಕರು ಬೇರೆ ರಾಜ್ಯದವರು, ಅವರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕಿಂತ ಹೊಸೂರು ವಿಮಾನ ನಿಲ್ದಾಣ ಹತ್ತಿರವಾಗುತ್ತದೆ. ಹೀಗಾಗಿ ಈ ಭಾಗದಲ್ಲಿಯೇ ನಿವೇಶನ ಕೊಂಡುಕೊಳ್ಳಲು ಯತ್ನಿಸುತ್ತಿದ್ದಾರೆ.
ಈ ಹಿಂದೆ ದೇವನಹಳ್ಳಿಯಲ್ಲಿ ವಿಮಾನ ನಿಲ್ದಾಣದ ಘೋಷಣೆ ನಂತರ ಉತ್ತರ ಬೆಂಗಳೂರಿನಲ್ಲಿ ಆದ ಬೆಳವಣಿಗೆಯಂತೆಯೇ ಹೊಸೂರಿನಲ್ಲಿ ಆಗುತ್ತಿದೆ. ಈ ಯೋಜನೆಯು ಇನ್ನೂ ಯೋಜನಾ ಹಂತದಲ್ಲಿದ್ದರೂ ಸ್ಥಳೀಯ ರಿಯಲ್ ಎಸ್ಟೇಟ್ ಮಾರುಕಟ್ಟೆಗೆ ಉತ್ತೇಜನ ನೀಡಿದೆ. ಇದು ವಾಣಿಜ್ಯ ಮತ್ತು ವಸತಿ ಪ್ಲಾಟ್‌ಗಳ ಬೇಡಿಕೆಗೆ ಕಾರಣವಾಗಿದೆ.
ಹೆಚ್ಚಿನ ಬೇಡಿಕೆಯು ಪ್ರಸ್ತಾಪಿತ ಈಗಾಗಲೇ ಬಹುತೇಕ ಜನರು ಕೈಗೆಟುಕುವ ಮತ್ತು ರೇರಾ-ಅನುಮೋದಿತ ಆಸ್ತಿಗಳು, 2-3 ಬಿಎಚ್‌ಕೆ ಅಪಾರ್ಟ್ ಮೆಂಟ್‌ಗಳು ಮತ್ತು ಮೂಲ ಸೌಲಭ್ಯ ಹೊಂದಿರುವ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಈ ಸ್ಥಳವು ತಮಿಳುನಾಡು ಹಾಗೂ ಕರ್ನಾಟಕ ಗಡಿ ಭಾಗದಲ್ಲಿದ್ದು, ತಮಿಳುನಾಡಿಗೆ ಕೆಲವೇ ಅಂತರವನ್ನು ಹೊಂದಿದೆ.
ಉತ್ತರ ಬೆಂಗಳೂರಿಗೆ ಹೋಲಿಸಿದರೆ, ಹೊಸೂರು ಕೇವಲ ಕಡಿಮೆ ಬೆಲೆಯ ಬಗ್ಗೆ ಮಾತ್ರವಲ್ಲ. ಬಲವಾದ ಬೆಲೆಯ ಏರಿಕೆಯ ಸಾಮರ್ಥ್ಯವನ್ನು ಹೊಂದಿದೆ. ಇದು ಸರ್ಜಾಪುರದ ಸಾಮೀಪ್ಯ ಮತ್ತು ಕೈಗಾರಿಕಾ ಪ್ರಾಬಲ್ಯದ ಎರಡು ಅನುಕೂಲಗಳಿಂದ ಉತ್ತೇಜಿಸಲ್ಪಟ್ಟಿದೆ.
ಚಿಕ್ಕಬಳ್ಳಾಪುರಕ್ಕೆ ಹೋಲಿಸಿದರೆ, ಹೊಸೂರು ಹೆಚ್ಚು ವೈವಿಧ್ಯಮಯ ಪರಿಸರ ವ್ಯವಸ್ಥೆಯನ್ನು ನೀಡುತ್ತದೆ ಹೀಗಾಗಿ ಈ ಭಾಗದಲ್ಲಿ ಭೂಮಿಯ ದರ ಕೈಗೆ ಎಟಕದಂತೆ ಆಗಿದೆ. ಹೊಸೂ ರು ಬೆಂಗಳೂರಿನ ಐಟಿ ಹಬ್‌ಗಳಿಗೆ ಸಾಮೀಪ್ಯವಾಗಿದೆ. ಇದು ಪೂರ್ವ ಅಥವಾ ಉತ್ತರ ಬೆಂಗಳೂರಿಗಿಂತ ಕಡಿಮೆ ದರಗಳಲ್ಲಿ ಪ್ರವೇಶಿಸಲು ಅವಕಾಶ ನೀಡುತ್ತದೆ.
ತಮಿಳುನಾಡಿನ ಉತ್ತಮ ರಸ್ತೆ ಮತ್ತು ಸಂಪರ್ಕ ಮೂಲಸೌಕರ್ಯದಿಂದ ಆದರ ಅನುಕೂಲವು ಹೆಚ್ಚಾಗಿದ್ದರಿಂದ ಈ ಪ್ರದೇಶಕ್ಕೆ ಹೆಚ್ಚಿನ ಬೇಡಿಕೆ ಬರಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಸರ್ಜಾಪುರ-ಅತ್ತಿಬೆಲೆ ಕಾರಿಡಾರ್ ನಿಂದ ಕೇವಲ 20-30 ಕಿ.ಮೀ ದೂರದ ಆಯಕಟ್ಟಿನ ಸ್ಥಳದಲ್ಲಿರುವ ವಿಮಾನ ನಿಲ್ದಾಣವು ಪ್ರಾದೇಶಿಕ ವಾಯು ಸಂಪರ್ಕವನ್ನು ಗಮನಾರ್ಹವಾಗಿ ಸುಧಾರಿಸುವ ನಿರೀಕ್ಷೆಯಿದೆ.
ಭೂಮಿ ಕೊಡಲು ರೈತರ ನಕಾರ: ಆ ಭಾಗದ ರೈತರು ಮಾತ್ರ ಭೂಮಿ ಕೊಡಲು ಇನ್ನೂ ಒಪ್ಪುತ್ತಿಲ್ಲ. ಕೆಲವೊಬ್ಬರು ಒಪ್ಪಿದರೂ ಉದ್ಯಮಿಗಳು ದರ ಕೆಡಿಸುತ್ತಿದ್ದಾರೆ ಎಂಬ ಆರೋಪವನ್ನೂ ಮಾಡಲಾಗುತ್ತಿದೆ. ಪ್ರತಿದಿನ ಬೆಂಗಳೂರು, ತಮಿಳುನಾಡು ಕಡೆಯಿಂದ ರಿಯಲ್ ಎಸ್ಟೇಟ್‌ನವರು ಆಗಮಿಸುತ್ತಿದ್ದಾರೆ. ಆದರೆ ನಾವು ಇದು ವರೆಗೂ ಭೂಮಿ ಕೊಡುವ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಆ ಭಾಗದ ರೈತರು ಹೇಳುತ್ತಿದ್ದಾರೆ.
ವಿಮಾನ ನಿಲ್ದಾಣ ಘೋಷಣೆ ಆದಾಗಿನಿಂದ ಅಲ್ಲಿನ ಭೂಮಿಯ ದರ ಮೂರುಪಟ್ಟು ಹೆಚ್ಚಾಗಿದೆ ಎಂದು ರಿಯಲ್ ಎಸ್ಟೇಟ್ ಉದ್ದಿಮೆದಾರರು ಹೇಳುತ್ತಿದ್ದಾರೆ. ಆದರೂ ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಿದರು ಹೆಚ್ಚಿನ ಲಾಭ ಬರುತ್ತದೆ ಎಂದು ಉದ್ಯಮಿಗಳು ಆ ಬೆಲೆಗೆ ಕೊಂಡುಕೊಳ್ಳಲು ಮುಂದಾಗುತ್ತಿದ್ದಾರೆ.