ಮೈಸೂರು: ನಮ್ಮ ಕುಟುಂಬದ ಬಗ್ಗೆ ಯಾರಾದರೂ ಏನಾದರೂ ಇಲ್ಲದಿರುವುದನ್ನ ಹೇಳಿದರೆ ನಂಬಬೇಡಿ ಎಂದು ಭಾರತಿ ವಿಷ್ಣುವರ್ಧನ್ ಮನವಿ ಮಾಡಿದರು.
ವಿಷ್ಣುವರ್ಧನ್ ಜನ್ಮ ದಿನಾಚರಣೆ ಕಾರ್ಯಕ್ರಮಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ, ಯಾರೆ ಆಗಲಿ ಏನಾದರೂ ಮಾತನಾಡಿದರೆ ನಮ್ಮ ಮನಸ್ಸಿಗೆ ತುಂಬಾ ಕಷ್ಟವಾಗುತ್ತದೆ. ಕುಟುಂಬದ ಬಗ್ಗೆ ಯಾರು ಏನೇ ಮಾತನಾಡಿದರು ಅದರ ಬಗ್ಗೆ ತಲೆಕಡಿಸಿಕೊಳ್ಳಬೇಡಿ. ಯಾರೋ ಏನೋ ಹೇಳಿದರೂ ಅಂಥ ತಪ್ಪಾಗಿ ತಿಳಿದುಕೊಳ್ಳಬೇಡಿ. ನೇರವಾಗಿ ನಮ್ಮ ಮನೆಗೆ ಬಂದು ಸಮಾಲೋಚನೆ ನಡೆಸಿ ಸರಿಪಡಿಸಿಕೊಳ್ಳಿ ಎಂದು ಹೇಳಿದರು.
ವಿಷ್ಣುವರ್ಧನ್ ಇಲ್ಲೇ ನಮ್ಮೆಲ್ಲರ ಜೊತೆಯಲ್ಲೇ ಇದ್ದಾರೆ. ಎಲ್ಲರೂ ಒಳ್ಳೆಯ ಕೆಲಸಗಳನ್ನ ಮಾಡಬೇಕು. ಅಭಿಮಾನಿಗಳು ಬುದ್ಧಿವಂತರು ಹಾಗೂ ವಿದ್ಯಾವಂತರು. ನಿಮ್ಮ ಪ್ರೀತಿ ಹೀಗೆಯೇ ಮುಂದುವರೆಯಬೇಕು. ನಮ್ಮ ಯಜಮಾನರ ಮೊಮ್ಮಗ ಜೇಷ್ಠವರ್ಧನ್ ಬಂದಿದ್ದಾನೆ. ಅವನಿಗೆ ನಿಮ್ಮ ಪ್ರೀತಿ ಸದಾ ಇರಬೇಕು. ಕರ್ನಾಟಕ ಸರ್ಕಾರ ಕರ್ನಾಟಕ ರತ್ನ ಕೊಟ್ಟಿದೆ. ಸರ್ಕಾರಕ್ಕೆ ಧನ್ಯವಾದ ತಿಳಿಸುತ್ತೇನೆ. ನಿಮ್ಮ ಸಂತೋಷವೇ ನಮ್ಮ ಸಂತೋಷ. ಯಾರ ಮೇಲೂ ದ್ವೇಷ ಸಾಧಿಸಲು ಹೋಗಬೇಡಿ ಎಂದರು.
ಸ್ಮಾರಕ ನಾವೇ ನಿರ್ಮಿಸುತ್ತೇವೆ: ಸರ್ಕಾರ 10 ಗುಂಟೆ ಜಾಗ ಕೊಟ್ಟರೆ ನಾವೇ ಸ್ಮಾರಕ ನಿರ್ಮಾಣ ಮಾಡುತ್ತೇವೆ ಎಂದು ಅನಿರುದ್ಧ ವಿಷ್ಣುವರ್ಧನ್ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿರುವ ಅವರು, ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣು ಸ್ಮಾರಕ ನಿರ್ಮಾಣ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಮಂಟಪವನ್ನು ಹಿಂದೆ ಭಾರತಿಯವರೇ ನಿರ್ಮಾಣ ಮಾಡಿದ್ದರು. ಇತ್ತೀಚಿಗೆ ಆ ಮಂಟಪ ತೆರೆವು ಮಾಡಲಾಗಿದೆ ಎಂದರು.
ಬಾಲಣ್ಣ ಕುಟುಂಬಕ್ಕೂ ಮನವಿ ಮಾಡಿದ್ದೇವು, ಆದರೆ ಸದ್ಯ ಸರ್ಕಾರ ಜಾಗವನ್ನು ವಶಪಡಿಸಿಕೊಂಡಿದೆ. ಈಗ ಜಾಗ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಸರ್ಕಾರ ಮೈಸೂರಿನಲ್ಲಿ 16 ಕೋಟಿ ವೆಚ್ಚದಲ್ಲಿ ಸ್ಮಾರಕ ನಿರ್ಮಾಣ ಮಾಡಿದೆ ಎಂದರು.