Home ಸಿನಿ ಮಿಲ್ಸ್ ಕೋರ್ಟ್‌ ಕೊಟ್ಟರೂ ಜೈಲು ಕೊಡಲಿಲ್ಲ: ಹಾಸಿಗೆ, ದಿಂಬಿಗಾಗಿ ದರ್ಶನ್‌ ಮತ್ತೆ ಕೋರ್ಟ್‌ಗೆ

ಕೋರ್ಟ್‌ ಕೊಟ್ಟರೂ ಜೈಲು ಕೊಡಲಿಲ್ಲ: ಹಾಸಿಗೆ, ದಿಂಬಿಗಾಗಿ ದರ್ಶನ್‌ ಮತ್ತೆ ಕೋರ್ಟ್‌ಗೆ

0

ಸುಪ್ರೀಂಕೋರ್ಟ್‌ ಜಾಮೀನು ರದ್ದುಗೊಳಿಸಿದ ಬಳಿಕ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿರುವ ಅಭಿಮಾನಿಗಳ ಪಾಲಿನ ‘ದಾಸ’ ದರ್ಶನ್ ಇನ್ನಿಲ್ಲದ ಸಂಕಷ್ಟ ಎದುರಿಸುತ್ತಿದ್ದಾರೆ. ಹಾಸಿಗೆ, ದಿಂಬು ಬೇಕೆಂದು ಅವರು ಕೋರ್ಟ್ ಮೊರೆ ಹೋಗಿದ್ದರು.

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ2 ಆರೋಪಿ ದರ್ಶನ್ ಈಗ ಪುನಃ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಪರಪ್ಪನ ಅಗ್ರಹಾರದಲ್ಲಿ ವಿಚಾರಣಾಧೀನ ಕೈದಿಯಾಗಿರುವ ನಟ ಹಾಸಿಗೆ, ದಿಂಬು ಕೊಟ್ಟಿಲ್ಲ ಅಂತ ಅರ್ಜಿ ಹಾಕಿದ್ದಾರೆ.

ಪಕ್ಕದ ಸೆಲ್‌ನಲ್ಲಿರುವ ಪಾಕಿಸ್ತಾನಿ ಆರೋಪಿಗಳಿಗೆ ಕೇರಂ, ಚೆಸ್ ಕೊಡುತ್ತಾರೆ. ಆದರೆ ನಮಗೆ ದಿಂಬು, ಹಾಸಿಗೆ ಕೊಡುತ್ತಿಲ್ಲ ಎಂದು ದರ್ಶನ್ ಪರ ವಕೀಲರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ಬೆಂಗಳೂರು ನಗರದ 57ನೇ ಸಿಸಿಎಚ್ ನ್ಯಾಯಾಲಯದಲ್ಲಿ ಬುಧವಾರ ದರ್ಶನ್ ಪರ ವಕೀಲರು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಯಿತು. ವಾದ ಮಂಡಿಸಿದ ದರ್ಶನ್ ಪರ ವಕೀಲರು ಕೋರ್ಟ್ ಆದೇಶ ನೀಡಿದ್ದರೂ ಹಾಸಿಗೆ, ದಿಂಬು ಕೊಡುತ್ತಿಲ್ಲ. ಕಂಬಳಿ, ಚಾಪೆ, ನೀಡಲಾಗಿದೆ ಎಂದು ಸರ್ಕಾರದ ವಕೀಲರು ಹೇಳುತ್ತಿದ್ದಾರೆ ಎಂದು ವಾದಿಸಿದರು.

ಪ್ರಾಸಿಕ್ಯೂಟರ್ ವಾದ: ಜೈಲಿನ ನಿಯಮದಂತೆ ನೀಡಬೇಕಾದ ಕಂಬಳಿ, ಬ್ಲಾಂಕೆಟ್, ಲೋಟ, ತಟ್ಟೆ ನೀಡಿದ್ದಾರೆ. ಬೆಳಗ್ಗೆ 1 ಗಂಟೆ, ಸಂಜೆ 1 ಗಂಟೆ ಜೈಲು ಆವರಣದಲ್ಲಿ ವಾಕಿಂಗ್ ಮಾಡಲು ದರ್ಶನ್‌ಗೆ ಅವಕಾಶ ನೀಡಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ದರ್ಶನ್ ವಕೀಲರು ಆಕ್ಷೇಪವನ್ನು ವ್ಯಕ್ತಪಡಿಸಿ, ಕೋರ್ಟ್ ಆದೇಶ ನೀಡಿದ್ದರೂ ಹಾಸಿಗೆ, ದಿಂಬು ನೀಡುತ್ತಿಲ್ಲ, ಕೇಳಿದ್ದನ್ನು ಕೊಡುತ್ತಿಲ್ಲ. ಕೇವಲ ಕಂಬಳಿ, ಚಾಪೆ ಮಾತ್ರ ನೀಡಿ, ನನ್ನನ್ನು ಕ್ವಾರಂಟೈನ್‌ನಲ್ಲಿ ಇರಿಸಿದ್ದಾರೆ. ಆದರೆ ನಾವು ಕೇಳಿದ್ದನ್ನು ಕೊಡುತ್ತಿಲ್ಲ, ಕ್ವಾರಂಟೈನ್ ಸೆಲ್ ಅಲ್ಲಿ ಒಂದು ತಿಂಗಳಿಂದ ಇರಿಸಿದ್ದಾರೆ. ದರ್ಶನ್ ಜೈಲಿನಲ್ಲಿ ಪಡಬಾರದ ಹಿಂಸೆ ಪಡುತ್ತಿದ್ದಾರೆ ಎಂದು ವಾದಿಸಿದರು.

ಸರ್ಕಾರದ ಪರ ವಕೀಲ ಸಚಿನ್ ಪ್ರತಿವಾದದಲ್ಲಿ, ಜೈಲು ಮ್ಯಾನುಯಲ್ ಹೊರತುಪಡಿಸಿ ಹೆಚ್ಚಿನ ಸೌಲಭ್ಯ ಕೊಟ್ಟಿಲ್ಲ. ಕಂಬಳಿ, ಬ್ಲಾಂಕೆಟ್, ಲೋಟ, ತಟ್ಟೆ ನೀಡಲಾಗಿದೆ. ಮ್ಯಾನ್ಯುಯಲ್ ಪ್ರಕಾರವೇ ಎಲ್ಲವನ್ನೂ ನೀಡಲಾಗುತ್ತಿದೆ. ಕ್ವಾರಂಟೈನ್ ಅನ್ನೋದು ಇಲ್ಲ ಎಂದು ಹೇಳಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಸೆ.19ಕ್ಕೆ ಆದೇಶವನ್ನು ಕಾಯ್ದಿರಿಸಿತು.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮೊದಲ ಬಾರಿ ಬಂಧನವಾಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ದರ್ಶನ್‌ಗೆ ಐಷಾರಾಮಿ ವ್ಯವಸ್ಥೆ ಮಾಡಲಾಗಿತ್ತು. ಸುಪ್ರೀಂಕೋರ್ಟ್ ಜಾಮೀನು ರದ್ದು ಮಾಡುವಾಗ ಇದನ್ನು ಗಂಭೀರವಾಗಿ ಪರಿಗಣಿಸಿ ಜೈಲಿನ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿತ್ತು. ಆದರೆ ಬೆನ್ನು ನೋವಿನ ಕಾರಣ ನೀಡಿ ದರ್ಶನ್ ಹಾಸಿಗೆ, ದಿಂಬು ಕೇಳಿದ್ದರು.

ಜೈಲಿನ ನಿಯಮವನ್ನು ದರ್ಶನ್ ಪಾಲಿಸಬೇಕು, ನಿಯಮ ಉಲ್ಲಂಘನೆ ಮಾಡಿದರೆ ಬೇರೆ ಜೈಲಿಗೆ ಸ್ಥಳಾಂತರ ಮಾಡುವ ಕುರಿತು ಅಧಿಕಾರಿಗಳು ತೀರ್ಮಾನ ಮಾಡಬಹುದು ಎಂದು ಕೋರ್ಟ್ ಹೇಳಿತ್ತು. ಕೋರ್ಟ್ ಒಪ್ಪಿಗೆ ನೀಡಿದರೂ ಹಾಸಿಗೆ, ದಿಂಬು ಕೊಡುತ್ತಿಲ್ಲ ಇದು ನ್ಯಾಯಾಂಗ ನಿಂದನೆ ಎಂದು ದರ್ಶನ್ ಕೋರ್ಟ್ ಮೊರೆ ಹೋಗಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version