ಕಿಚ್ಚ ಸುದೀಪ್ ಅಕ್ಕನ ಮಗ ಸಂಚಿತ್ ಸಂಜೀವ್ ಅಭಿನಯದ ಚೊಚ್ಚಲ ಮ್ಯಾಂಗೋ ಪಚ್ಚ ಸಿನಿಮಾದ ಟೀಸರ್ ಇತ್ತೀಚೆಗೆ ರಿಲೀಸ್ ಆಗಿತ್ತು. ಇದೀಗ ಮತ್ತೊಂದು ಸುದ್ದಿ ಚಿತ್ರತಂಡದಿಂದ ಹೊರಬಿದ್ದಿದೆ. ಸರೆಗಮ ಆಡಿಯೋ ಸಂಸ್ಥೆ ಈ ಚಿತ್ರದ ಆಡಿಯೋ ರೈಟ್ಸ್ ಖರೀದಿಸಿದ್ದು, ಭರ್ಜರಿ ಬೆಲೆಗೆ ಬಿಕರಿಯಾಗಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಒಂದು ಕೋಟಿ ರೂ. ಗಿಂತ ಅಧಿಕ ಬೆಲೆಗೆ ಆಡಿಯೋ ಕೊಂಡುಕೊಂಡಿದೆಯಂತೆ. ಮ್ಯಾಂಗೋ ಪಚ್ಚ ಮೈಸೂರು ಭಾಗದ ಕಥೆ. ಈ ದಸರಾ ಸಂಭ್ರಮದಲ್ಲೇ ಮೈಸೂರು ಭಾಗದ ಕಥೆಯ ಝಲಕ್ ಅನಾವರಣಗೊಳಿಸಲಾಗಿದೆ.
ಅಂದಹಾಗೆ ಮ್ಯಾಂಗೋ ಪಚ್ಚ ವಿವೇಕ ನಿರ್ದೇಶನದ ಚೊಚ್ಚಲ ಸಿನಿಮಾ. 2001 ರಿಂದ 2011ರ ಅವಧಿಯಲ್ಲಿ ಮೈಸೂರಿನಲ್ಲಿ ನಡೆದ ಪ್ರಮುಖ ಘಟನೆಗಳು ಈ ಸಿನಿಮಾದಲ್ಲಿದೆ ಎಂಬುದು ಪ್ರಾಥಮಿಕ ಮಾಹಿತಿ. ಮ್ಯಾಂಗೋ ಪಚ್ಚ ಚಿತ್ರಕ್ಕೆ ಕೆಆರ್‌ಜಿ ಸ್ಟೂಡಿಯೋಸ್ ಹಾಗೂ ಕಿಚ್ಚ ಸುದೀಪ್ ಪತ್ನಿ ಒಡೆತನದ ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ಜಂಟಿಯಾಗಿ ಬಂಡವಾಳ ಹೂಡಿದೆ.
ಸಂಚಿತ್ ಮೊದಲ ಸಿನಿಮಾಗೆ ನಾಯಕಿಯಾಗಿ ನಟಿ ಕಾಜಲ್ ಕುಂದರ್ ಇದ್ದಾರೆ. ಮಯೂರ್ ಪಟೇಲ್, ವಿಜಯ ರಾಘವೇಂದ್ರ ಅವರ ಅಕ್ಕನ ಮಗ ಜೇಯ್, ಹಂಸ ಸೇರಿದಂತೆ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿದೆ. ಚರಣ್ ರಾಜ್ ಸಂಗೀತ ಸಂಯೋಜನೆ, ಶೇಖರ್ ಚಂದ್ರ ಛಾಯಾಗ್ರಹಣವಿದೆ.
