Home ನಮ್ಮ ಜಿಲ್ಲೆ Namma Metro Yellow Line: ಮೊದಲ ದಿನವೇ ರೈಲು ಭರ್ತಿ, ಸೆಲ್ಫಿ ಕ್ಲಿಕ್ಕಿಸಿ ಸಂಭ್ರಮ

Namma Metro Yellow Line: ಮೊದಲ ದಿನವೇ ರೈಲು ಭರ್ತಿ, ಸೆಲ್ಫಿ ಕ್ಲಿಕ್ಕಿಸಿ ಸಂಭ್ರಮ

0

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ್ದ ಬೆಂಗಳೂರು ನಗರದ ಹಳದಿ ನಮ್ಮ ಮೆಟ್ರೋ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗಿದೆ. ಆರ್.ವಿ.ರಸ್ತೆ-ಬೊಮ್ಮಸಂದ್ರ ನಡುವಿನ 19.15 ಕಿ.ಮೀ. ಉದ್ದದ ಮಾರ್ಗದಲ್ಲಿ ಒಟ್ಟು 16 ನಿಲ್ದಾಣಗಳಿವೆ. ಮೊದಲ ದಿನವೇ ಹೆಚ್ಚಿನ ಪ್ರಯಾಣಿಕರು ಆಗಮಿಸುತ್ತಿದ್ದು, ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿದ್ದಾರೆ.

ಸೋಮವಾರ ಬೆಳಗ್ಗೆ 6.30ಕ್ಕೆ ಆರ್.ವಿ.ರಸ್ತೆ-ಬೊಮ್ಮಸಂದ್ರ ಹಳದಿ ಮಾರ್ಗದಲ್ಲಿ ರೈಲುಗಳ ಸಂಚಾರ ಆರಂಭವಾಗಿದೆ. ಬಿಎಂಆರ್‌ಸಿಎಲ್ ಮಾಹಿತಿ ಪ್ರಕಾರ 25 ನಿಮಿಷಗಳ ಅಂತರದಲ್ಲಿ 3 ರೈಲುಗಳು ಈ ಮಾರ್ಗದಲ್ಲಿ ಸಂಚಾರ ನಡೆಸುತ್ತಿವೆ.

ದಿನದ ಮೊದಲ ರೈಲಿನಲ್ಲಿಯೇ ಹಲವು ಪ್ರಯಾಣಿಕರು ಸಂಚಾರವನ್ನು ನಡೆಸಿದರು. ಆರ್‌.ವಿ.ರಸ್ತೆಯಿಂದ ಬೇಗ ಎಲೆಕ್ಟ್ರಾನಿಕ್ ಸಿಟಿ ತಲುಪಿದೆ ಎಂದು ಟೆಕ್ಕಿಯೊಬ್ಬರು ಎಕ್ಸ್‌ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ನಗರದಲ್ಲಿ ಮಳೆ ಬರುವ ವಾತಾವರಣ ಇರುವ ಕಾರಣ ಹೆಚ್ಚಿನ ಜನರು ಇಂದು ಕಾದು ಮೆಟ್ರೋ ಬಳಕೆ ಮಾಡಿದ್ದಾರೆ. ರೈಲು ನಿಲ್ದಾಣದ ಫೋಟೋ, ವಿಡಿಯೋ, ಸೆಲ್ಫಿಗಳನ್ನು ಹಾಕುತ್ತಿದ್ದಾರೆ. ಮೊದಲ ದಿನವೇ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.

ಹಳದಿ ಮಾರ್ಗದಲ್ಲಿ ಸೋಮವಾರದಿಂದ ಶನಿವಾರದ ತನಕ ಎಲ್ಲಾ ದಿನಗಳಲ್ಲಿ ಆರ್.ವಿ.ರಸ್ತೆ-ಬೊಮ್ಮಸಂದ್ರ ಮೆಟ್ರೋ ನಿಲ್ದಾಣಗಳಿಂದ ಬೆಳಗ್ಗೆ 6.30ಕ್ಕೆ ರೈಲು ಸಂಚಾರ ಪ್ರಾರಂಭ. ಭಾನುವಾರ ಬೆಳಗ್ಗೆ 6.30 ಬದಲಾಗಿ 7ಕ್ಕೆ ರೈಲು ಹೊರಡಲಿದೆ.

ಪ್ರತಿದಿನ ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರ ನಿಲ್ದಾಣದಿಂದ ಕೊನೆಯ ರೈಲು ರಾತ್ರಿ 10.42ಕ್ಕೆ ಮತ್ತು ಆರ್.ವಿ.ರೋಡ್ ನಿಲ್ದಾಣದಿಂದ ಕೊನೆಯ ರೈಲು ರಾತ್ರಿ 11.55ಕ್ಕೆ ಹೊರಡಲಿದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ. ನಗರದ ಬಹು ನಿರೀಕ್ಷಿತ ರೈಲು ಮಾರ್ಗ ಉದ್ಘಾಟನೆಗೊಂಡಿದ್ದು, ಟೆಕ್ಕಿಗಳಿಗೆ ಸಂತಸವಾಗಿದೆ.

ಬೇಗ ತಲುಪಿದ ಜನರು: ಆರ್.ವಿ.ರಸ್ತೆ-ಸಿಲ್ಕ್ ಬೋರ್ಡ್ 9/10 ನಿಮಿಷ, ಆರ್‌.ವಿ.ರೋಡ್-ಬೊಮ್ಮನಹಳ್ಳಿ 12 ನಿಮಿಷ, ಆರ್‌.ವಿ.ರಸ್ತೆ-ಕೂಡ್ಲು ಗೇಟ್ 16 ನಿಮಿಷ, ಆರ್‌.ವಿ.ರಸ್ತೆ-ಸಿಂಗಸಂದ್ರ 18 ನಿಮಿಷದಲ್ಲಿ ಸಂಚಾರ ನಡೆಸಿದೆ ಎಂದು ಎಕ್ಸ್ ಖಾತೆಯಲ್ಲಿ ಒಬ್ಬರು ಪೋಸ್ಟ್ ಹಾಕಿದ್ದಾರೆ.

ಪ್ರತಿದಿನ ಅದರಲ್ಲೂ ಸೋಮವಾರ ಸಿಲ್ಕ್ ಬೋರ್ಡ್ ಟ್ರಾಫಿಕ್‌ನಲ್ಲಿ ಸಿಲುಕಿ ಪರದಾಟ ನಡೆಸುತ್ತಿದ್ದ ಜನರು ಇಂದು ಸುಲಭವಾಗಿ ಕಚೇರಿಗೆ ತೆರಳಿದ್ದಾರೆ. ನಮ್ಮ ಮೆಟ್ರೋ ಹಳದಿ ಮಾರ್ಗ ಲೋಕಾರ್ಪಣೆ ಮಾಡಿದ್ದಕ್ಕೆ ಜನರು ಧನ್ಯವಾದ ಸಲ್ಲಿಸುತ್ತಿದ್ದಾರೆ.

ಈ ಮಾರ್ಗದಲ್ಲಿ ಆರ್.ವಿ.ರಸ್ತೆ, ರಾಗಿಗುಡ್ಡ, ಜಯದೇವ, ಬಿಟಿಎಂ ಲೇಔಟ್, ಸೆಂಟ್ರಲ್ ಸಿಲ್ಕ್ ಬೋರ್ಡ್, ಬೊಮ್ಮನಹಳ್ಳಿ, ಹೊಂಗಸಂದ್ರ, ಕುಡ್ಲುಗೇಟ್, ಸಿಂಗಸಂದ್ರ, ಹೊಸ ರಸ್ತೆ, ಬೆರಟೇನ ಅಗ್ರಹಾರ, ಎಲೆಕ್ಟ್ರಾನಿಕ್ ಸಿಟಿ, ಕೋನಪ್ಪನ ಅಗ್ರಹಾರ ಇನ್ಫೋಸಿಸ್, ಹುಸ್ಕೂರ್ ರಸ್ತೆ, ಬಯೋಕಾನ್ ಹೆಬ್ಬಗೋಡಿ, ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರ ಸೇರಿ 16 ನಿಲ್ದಾಣಗಳಿವೆ.

ದರಪಟ್ಟಿ ನೋಡಿ
* ಆರ್.ವಿ.ರಸ್ತೆ-ರಾಗಿಗುಡ್ಡ 10 ರೂ.
*ಆರ್.ವಿ.ರಸ್ತೆ-ಜಯದೇವ ಆಸ್ಪತ್ರೆ 10 ರೂ.
* ಆರ್.ವಿ.ರಸ್ತೆ-ಬಿಟಿಎಂ ಲೇಔಟ್ 20 ರೂ.
* ಆರ್.ವಿ.ರಸ್ತೆ-ಸೆಂಟ್ರಲ್ ಸಿಲ್ಕ್ ಬೋರ್ಡ್ 20 ರೂ.
* ಆರ್.ವಿ.ರಸ್ತೆ-ಬೊಮ್ಮನಹಳ್ಳಿ 30 ರೂ.
* ಆರ್.ವಿ.ರಸ್ತೆ-ಕೂಡ್ಲು ಗೇಟ್ 40 ರೂ.
* ಆರ್.ವಿ.ರಸ್ತೆ-ಸಿಂಗಸಂದ್ರ 50 ರೂ.
* ಆರ್.ವಿ.ರಸ್ತೆ-ಎಲೆಕ್ಟ್ರಾನಿಕ್ ಸಿಟಿ 60 ರೂ.
* ಆರ್.ವಿ.ರಸ್ತೆ-ಬೊಮ್ಮಸಂದ್ರ 60 ರೂ.
* ಸೆಂಟ್ರಲ್ ಸಿಲ್ಕ್ ಬೋರ್ಡ್-ಬೊಮ್ಮಸಂದ್ರ 60 ರೂ.

NO COMMENTS

LEAVE A REPLY

Please enter your comment!
Please enter your name here

Exit mobile version