Home ನಮ್ಮ ಜಿಲ್ಲೆ ಯಾದಗಿರಿ ಯಾದಗಿರಿ: ಪ್ರವಾಹ ಲೆಕ್ಕಿಸದೇ ತೆಪ್ಪೋತ್ಸವ ಮಾಡಿದ ಗ್ರಾಮಸ್ಥರು

ಯಾದಗಿರಿ: ಪ್ರವಾಹ ಲೆಕ್ಕಿಸದೇ ತೆಪ್ಪೋತ್ಸವ ಮಾಡಿದ ಗ್ರಾಮಸ್ಥರು

0

ಯಾದಗಿರಿ: ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ದೇವರಗಡ್ಡಿ ಗ್ರಾಮದಲ್ಲಿ ಅಪರೂಪದ ಧಾರ್ಮಿಕ ಶ್ರದ್ಧೆಯ ದೃಶ್ಯ ನಡೆದಿದೆ. ಭೋರ್ಗರೆಯುತ್ತಾ ಉಕ್ಕಿ ಹರಿಯುತ್ತಿರುವ ಕೃಷ್ಣಾ ನದಿಯನ್ನು ಲೆಕ್ಕಿಸದೇ, ಭಕ್ತರು ಗದ್ದೆಮ್ಮ ದೇವಿಯ ತೆಪ್ಪೋತ್ಸವವನ್ನು ವಿಜೃಂಭಣೆಯಿಂದ ನೆರವೇರಿಸಿದ್ದಾರೆ.
ಶ್ರಾವಣ ಮಾಸದ ಕೊನೆಯ ಮಂಗಳವಾರದಂದು ವಿಶೇಷವಾಗಿ ಆಯೋಜಿಸಲಾದ ಈ ಉತ್ಸವಕ್ಕೆ ಗ್ರಾಮದ ನೂರಾರು ಮಂದಿ ಭಕ್ತರು ಸೇರಿಕೊಂಡಿದ್ದರು.

ಗೆದ್ದಮ್ಮ ದೇವಿಯ ತೆಪ್ಪದ ಉತ್ಸವ: ದೇವಿಯ ಮೂರ್ತಿಯನ್ನು ಕುಡಿಸಿಕೊಂಡು, ಭಕ್ತರು ಘೋಷಣೆಗಳ ನಡುವೆ ಕೃಷ್ಣಾ ನದಿಯ ತೀರಕ್ಕೆ ಪಾದಯಾತ್ರೆ ಮಾಡಿದರು. ಬಳಿಕ ನದಿ ತೀರದಲ್ಲೇ ದೇವಿಗೆ ಸಾಂಪ್ರದಾಯಿಕ ರೀತಿಯಲ್ಲಿ ಪೂಜೆ, ಕೈಂಕರ್ಯ ಮತ್ತು ಹೂವಿನ ಅಲಂಕಾರ ನೆರವೇರಿಸಲಾಯಿತು. ನಂತರ ಅಲಂಕೃತ ತೆಪ್ಪವನ್ನು ಸಿದ್ಧಪಡಿಸಿ, ಅದರ ಮೇಲೆ ಮಡಿಕೆ ಇಟ್ಟು ನದಿಯೊಳಗೆ ಭಕ್ತರು ಸಾಗಿಸಿದರು.

ಪ್ರವಾಹವನ್ನು ಲೆಕ್ಕಿಸದೇ ದೇವರ ಕಾರ್ಯ: ನದಿಯ ಪ್ರವಾಹದ ವೇಗ ಹಾಗೂ ನದಿ ಭೋರ್ಗರೆಯುತ್ತಿದ್ದರೂ, ನದಿಯ ಅರ್ಧ ಭಾಗದಲ್ಲಿ ತೆರಳಿ ತೆಪ್ಪವನ್ನು ಅರ್ಪಣೆಗೈದಿದ್ದಾರೆ. ಭಕ್ತರ ಶ್ರದ್ಧಾ-ಭಾವನೆ ಮತ್ತು ಸಾಹಸವು ಅಲ್ಲಿದ್ದ ಪ್ರತಿಯೊಬ್ಬರಿಗೂ ಅಚ್ಚರಿ ಹುಟ್ಟಿಸಿತು. ಗ್ರಾಮಸ್ಥರ ಪ್ರಕಾರ, “ಗದ್ದೆಮ್ಮ ದೇವಿಯ ತೆಪ್ಪೋತ್ಸವವು ನಮ್ಮ ಊರಿನ ಪುರಾತನ ಸಂಪ್ರದಾಯ. ಎಷ್ಟು ಪ್ರವಾಹವಾದರೂ ಈ ಉತ್ಸವವನ್ನು ನಿಲ್ಲಿಸುವುದಿಲ್ಲ” ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ವಿಡಿಯೋ: ಇದರಿಂದ ದೇವರಗಡ್ಡಿ ಗ್ರಾಮ ಮತ್ತೊಮ್ಮೆ ತನ್ನ ಧಾರ್ಮಿಕ ಪರಂಪರೆಯನ್ನು ನೆನಪಿಗೆ ತಂದಿದೆ. ಉಕ್ಕಿ ಹರಿಯುತ್ತಿರುವ ಕೃಷ್ಣಾ ನದಿಯಲ್ಲಿ ತಪ್ಪೋತ್ಸವ ನಡೆಸಿದ ದೃಶ್ಯವನ್ನು ಕೆಲವರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ತೆಪ್ಪವನ್ನು ಅರ್ಪಿಸುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಭಕ್ತರ ಧೈರ್ಯ ಮತ್ತು ದೇವರ ಮೇಲೆ ಇರುವ ಅಚಲ ನಂಬಿಕೆಯನ್ನು ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ.

ಜಲಾಶಯಗಳು ಭರ್ತಿ, ಹೆಚ್ಚಿದ ಒಳ ಹರಿವು: ನೆರೆ ಮಹಾರಾಷ್ಟ್ರದಲ್ಲಿ ಹೆಚ್ಚಿನ ಮಳೆ ಆಗುತ್ತಿರುವುದಿಂದ ನಾರಾಯಣಪುರ ಜಲಾಯಶಯದಿಂದ 2 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಹರಿ ಬಿಡಲಾಗಿದೆ. ಇದರಿಂದ ನದಿ ಪಾತ್ರದ ಗ್ರಾಮಗಳಿಗೆ ಪ್ರವಾಹದ ಭೀತಿ ಉಂಟಾಗಿದೆ. ನಾರಾಯಣಪುರ ಬಸವ ಸಾಗರ ಜಲಾಶಯದ ಒಳಹರಿವು ಹೆಚ್ಚಾಗಿ ಕೃಷ್ಣಾ ನದಿಗೆ 30 ಕ್ರೆಸ್ಟ್‌ಗೇಟ್‌ಗಳಿಂದ ನೀರು ಹರಿಸುತ್ತಿರುವುದರಿಂದ ನದಿ ಪಾತ್ರದ ಗ್ರಾಮಗಳಿಗೆ ಮುನ್ನಚೆರಿಕೆ ನೀಡಲಾಗಿದೆ.

ರಸ್ತೆ ಸಂಚಾರ ಸ್ಥಗಿತ: ಶಹಾಪುರ-ದೇವದುರ್ಗ ರಾಜ್ಯ ಹೆದ್ದಾರಿಯ ರಸ್ತೆ ಸಂಚಾರವನ್ನು ಮುಂಜಾಗ್ರತಾ ಕ್ರಮವಾಗಿ ಸ್ಥಗಿತಗೊಳಿಸಲಾಗಿದೆ. ಶಹಾಪುರ ಠಾಣೆಯ ಪೊಲೀಸ್ ಸಿಬ್ಬಂದಿಯನ್ನು ಬಂದೋಬಸ್ತಿಗೆ ನಿಯೋಜಿಸಲಾಗಿದೆ. ರಾಯಚೂರು ಹಾಗೂ ದೇವದುರ್ಗಕ್ಕೆ ಹೋಗಿ ಬರಲು ಸುರಪುರ ತಾಲ್ಲೂಕಿನ ತಿಂಥಣಿ ಸೇತುವೆ ಬಳಸಲಾಗುತ್ತಿದೆ. ಶಹಾಪುರ ತಾಲ್ಲೂಕಿನ ಕೊಳ್ಳೂರ(ಎಂ) ಗ್ರಾಮದ ನದಿ ಸೇತುವೆ ಗುರುವಾರ ಮುಳುಗಡೆಯಾಗಿದೆ. ಪಗಲಾಪುರ-ಕೋಯಿಲೂರ ನಡುವಿನ ಹಳ್ಳದ ತಾತ್ಕಾಲಿಕ ರಸ್ತೆ ಕೊಚ್ಚಿ ಹೋಗಿದೆ ಎನ್ನಲಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version