Home ನಮ್ಮ ಜಿಲ್ಲೆ ಯಾದಗಿರಿ ಆಲಮಟ್ಟಿಗೆ ಮಾತ್ರ ಬಾಗಿನ ಸಿಮೀತ ಬೇಡ, ಬಸವಸಾಗರಕ್ಕೂ ಬಾಗಿನ ನೀಡಿ

ಆಲಮಟ್ಟಿಗೆ ಮಾತ್ರ ಬಾಗಿನ ಸಿಮೀತ ಬೇಡ, ಬಸವಸಾಗರಕ್ಕೂ ಬಾಗಿನ ನೀಡಿ

0

ರಾಘವೇಂದ್ರ ಕಾಮಟನಗಿ

ಹುಣಸಗಿ ಸಮೀಪದ ಬಸವಸಾಗರ ಜಲಾಶಯಕ್ಕೆ ಅಂದಿನ ಮುಖ್ಯಮಂತ್ರಿ ದಿ.ಆರ್.ಗುಂಡುರಾಯರ ನಂತರ ಇಲ್ಲಿವರೆಗೆ ಯಾವುದೇ ಮುಖ್ಯಮಂತ್ರಿಗಳು ಬಾಗಿನ ಅರ್ಪಿಸಿಲ್ಲ. ಈ ಬಾರಿ ಆಲಮಟ್ಟಿಗೆ ಬರುವ ಮುಖ್ಯಮಂತ್ರಿಗಳು ಬಸವಸಾಗರಕ್ಕೂ ಬಂದು ಬಾಗಿನ ಆರ್ಪಿಸಲಿ ಎನ್ನುವುದು ಇಲ್ಲಿಯ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರ ಬಹು ಆಪೇಕ್ಷೆ ಮತ್ತು ಒತ್ತಾಸೆಯೂ ಆಗಿದೆ.

ಕರ್ನಾಟಕದ ಕೃಷ್ಣ ಕೊಳ್ಳ ಎರಡು ಬಹು ದೊಡ್ಡ ಆಣೆಕಟ್ಟುಗಳಲ್ಲಿ ಲಾಲ ಬಹದ್ದೂರು ಶಾಸ್ತ್ರಿ ಜಲಾಶಯ ಒಂದು, ಇದಕ್ಕೆ ಸಮಾನಾಂತರವಾಗಿ ಇರುವುದು ಅಂದರೆ ನಾರಾಯಣಪುರ ಬಸವಸಾಗರ ಜಲಾಶಯ. ಈಗಾಗಲೇ ಆಲಮಟ್ಟಿ, ಬಸವಸಾಗರ ಅವಳಿ ಜಲಾಶಯಗಳೂ ಭರ್ತಿಯಾಗಿವೆ. ಆಲಮಟ್ಟಿಯಲ್ಲಿ ಬಾಗಿನ ಇದೆ ತಿಂಗಳೂ ನಡೆಯಲಿದೆ ಎಂದು ತಿಳಿದು ಬಂದಿದೆ. ಅದರೊಂದಿಗೆ ಈ ಬಾರಿ ಬಸವಸಾಗರ ಜಲಾಶಯಕ್ಕೂ ಮುಖ್ಯಮಂತಿಗಳಿಂದ ಬಾಗಿನ ಅರ್ಪಿಸಲಿ ಎನ್ನುವದು ಇಲ್ಲಿಯ ಜನತೆಯ ಆಶಯವಾಗಿದೆ.

ನಾರಾಯಣಪುರ ಎಡ, ಬಲ, ಮುಖ್ಯ ಕಾಲುವೆಗಳಿಂದ ಹಾಗೂ ಹಲವು ಏತ ನೀರಾವರಿ ಯೋಜನೆಗಳ ಮುಖಾಂತರ 6 ಲಕ್ಷ ಹೆಕ್ಟರ್‌ಗೂ ಹೆಚ್ಚು, ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಆದರೆ ಬಸವಸಾಗರ ಜಲಾಶಯಕ್ಕೆ ಇಲ್ಲಿವರೆಗೆ ಆಡಳಿತ ನಡೆಸಿದ ಸರ್ಕಾರಗಳು ಇಬ್ಬಗೆಯ ನೀತಿ ತಾಳಿದೆ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ಬಾಗಿನ ಅರ್ಪಿಸುವುದು ಇಲ್ಲಿ ಸೇವೆ ಸಲ್ಲಿಸಿದ ಅನೇಕ ಇಂಜನಿಯರುಗಳನ್ನು ಸನ್ಮಾನಿಸುವುದು ಕೂಡಾ ಅವಶ್ಯವಾಗಿದೆ.

ಬಸವಸಾಗರ ಜಲಾಶಯ ರಾಯಚೂರು, ಕೊಪ್ಪಳ, ಯಾದಗಿರಿ, ಕಲಬುರಗಿ, ವಿಜಯಪುರ ಜಿಲ್ಲೆಗಳ ರೈತ ಜಮೀನುಗಳಿಗೆ ನೀರುಣಿಸುವ ಜೀವಸೆಲೆಯಾಗಿದೆ. ಸರ್ಕಾರದಿಂದ ನಡೆಯುವ ಬಾಗಿನ ಅರ್ಪಣೆ ಅನೇಕ ವರ್ಷಗಳಿಂದ ಕೇವಲ ಆಲಮಟ್ಟಿ ಜಲಾಶಯಕ್ಕೆ ಮಾತ್ರ ಮುಖ್ಯಮಂತ್ರಿ ಬರುವ ಪರಿಪಾಠವಾಗಿದೆ. ಜೈ ಜವಾನ, ಜೈ ಕಿಸಾನ ಖ್ಯಾತಿಯ ಅಂದಿನ ನೆಚ್ಚಿನ ಪ್ರಧಾನಿ ಲಾಲಬಹದ್ದೂರು ಶಾಸ್ತ್ರಿ ಅವರು ಅಡಿಗಲ್ಲು ನಾರಾಯಣಪುರಕ್ಕೂ ನೇರವೇರಿಸಿದ್ದು ಸ್ಮರಿಸಬಹುದು.

1982ರಲ್ಲಿ ಮುಖ್ಯಮಂತ್ರಿ ಆರ್.ಗುಂಡುರಾವ ಅವರು ಮೊದಲ ಬಾಗಿನ ಅರ್ಪಿಸಿ ರೈತರ ಜಮೀನಿಗೆ ನೀರು ಹರಿಸಿದ್ದು ಸ್ಮರಿಸಬಹುದು. ಅದಾದ ನಂತರ ಬೇರೆ, ಬೇರೆ ಸಂದರ್ಭಗಳಲ್ಲಿ ರಾಜ್ಯದ ಮುಖ್ಯಮಂತ್ರಿಗಳೂ, ಕೇಂದ್ರ ಜಲ ಸಂಪನ್ಮೂಲ ಮಂತ್ರಿಗಳು, ರಾಜ್ಯ ನೀರಾವರಿ ಸಚಿವರು ನಾರಾಯಣಪುರಕ್ಕೆ ಭೇಟಿ ನೀಡಿರುವುದುಂಟು. ಆದರೆ ಬಸವ ಸಾಗರ ಜಲಾಶಯಕ್ಕೆ ಇಲ್ಲಿವರೆಗೆ ಆರ್. ಗುಂಡುರಾಯರ ಹೊರತುಪಡಿಸಿದರೆ ಯಾವ ಸಿಎಂ ಬಾಗಿನ ಅರ್ಪಿಸಿಲ್ಲ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಜನತೆಯ ಆಶಯ ಈಡೇರಿಸುವಲ್ಲಿ ಮುಂದಾಗುವುದೇ?.

NO COMMENTS

LEAVE A REPLY

Please enter your comment!
Please enter your name here

Exit mobile version