ದಾಂಡೇಲಿ: ಕಾಳಿ ಜಲ ವಿದ್ಯುತ್ ಯೋಜನೆಯ ಸೂಪಾ ಜಲಾಶಯ ಭರ್ತಿಯಾಗುತ್ತಿರುವುದರಿಂದ ಸ್ಥಳೀಯ ಶಾಸಕ, ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ.ದೇಶಪಾಂಡೆ ಇಂದು (ಸೋಮವಾರ) ಜಲಾಶಯಕ್ಕೆ ಪೂಜೆ ಸಲ್ಲಿಸಿ ಬಾಗೀನ ಅರ್ಪಿಸಿದರು. ಸತತ ಮಳೆಯಿಂದಾಗಿ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.
ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿದ್ದು ಜಲಾಶಯ ಗರಿಷ್ಠ ಮಟ್ಟ ತಲುಪಲಿದೆ. ಈಗಾಗಲೇ ಜಲಾಶಯದ ಕೆಳ ಪ್ರದೇಶದಲ್ಲಿರುವ ಗ್ರಾಮಸ್ಥರಿಗೆ ಕರ್ನಾಟಕ ರಾಜ್ಯ ವಿದ್ಯುತ್ ನಿಗಮದ ಅಧಿಕಾರಿಗಳು ಮೂರನೇ ಕೊನೆಯ ಎಚ್ಚರಿಕೆ ನೋಟಿಸು ನೀಡಿದ್ದು ಸುರಕ್ಷಿತ ಸ್ಥಳಕ್ಕೆ ಜಾನುವಾರು, ಸಾಮಾನು ಕುಟುಂಬ ಸಮೇತ ತೆರಳುವಂತೆ ಸೂಚನೆ ನೀಡಿದ್ದು ಯಾವುದೇ ಸಂದರ್ಭದಲ್ಲಿ ಡ್ಯಾಂ ನ ಸುರಕ್ಷತೆಯ ದೃಷ್ಠಿಯಿಂದ ನೀರನ್ನು ಹೊರ ಬಿಡಲಾಗುವದೆಂದು ಎಚ್ಚರಿಸಿದ್ದಾರೆ.
ಸೂಪಾ ಜಲಾಶಯದ ನೀರಿನ ಗರಿಷ್ಠ ಮಟ್ಟ 564 ಮೀಟರ್ ಇದ್ದು ಇಂದಿನ ನೀರಿನ ಮಟ್ಟ 559.60 ಮೀಟರ್ ಇದೆ. ಗರಿಷ್ಟ ಮಟ್ಟ ತಲುಪಲು ಇನ್ನೂ 4.40 ಮೀಟರ್ ನೀರಿನ ಅವಶ್ಯಕತೆ ಇದ್ದು, ನೀರಿನ ಒಳ ಹರಿವು13413. 17 ಇದ್ದು, ಹೊರ ಹರಿವು 3330.55 ಇದೆ. ಜಲಾನಯನ ಪ್ರದೇಶದಲ್ಲಿ 10 ಮಿ.ಮೀ.ಮಳೆಯಾಗಿದೆ.
ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ವಿದ್ಯುತ್ ನಿಗಮದ ಅಧಿಕಾರಿಗಳು, ಜೋಯಡಾ ಕಾಂಗ್ರೆಸ್ ಮುಖಂಡರಾದ ಸದಾನಂದ ದಬಗಾರ, ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿ, ಮುಖಂಡರಾದ ಕೀರ್ತಿ ಗಾಂವಕರ, ಅನಿಲ ದಂಡಗಲ್ ಮತ್ತಿತರರು ಪಾಲ್ಗೊಂಡಿದ್ದರು.