ಮೈಸೂರು: ಬಿಜೆಪಿ ಧರ್ಮಸ್ಥಳ ಯಾತ್ರೆ ರಾಜಕೀಯಕ್ಕಾಗಿ ಮಾಡುತ್ತಿದೆ. ಆದರೆ ಯಾವುದೇ ರಾಜಕೀಯ ಲಾಭ ಸಿಗಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಮೈಸೂರಿನ ಸಿದ್ದರಾಮನ ಹುಂಡಿಯಲ್ಲಿ ಸೋಮವಾರ ಪಬ್ಲಿಕ್ ಶಾಲೆ ಪ್ರಾರಂಭೋತ್ಸವ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಎಸ್‌ಐಟಿ ಆದಾಗ ಯಾಕೆ ಬಿಜೆಪಿ ಅವರು ಯಾತ್ರೆ ಮಾಡಲಿಲ್ಲ. ಇದು ಡೋಂಗಿ ತನ ಅಲ್ವಾ? ಬಿಜೆಪಿ ರಾಜಕೀಯವಾಗಿ ಯಾತ್ರೆ ಮಾಡುತ್ತಿದೆ. ಮಾಡಲಿ ಬಿಡಿ. ಇದರಿಂದ ರಾಜಕೀಯ ಲಾಭ ಸಿಗಲ್ಲ ಎಂದರು.
ಬಿಜೆಪಿಯಿಂದ ಚಾಮುಂಡಿ ಚಲೋ ಮಾಡುವ ಬಗ್ಗೆ ಪ್ರತಿಕ್ರಿಯಿಸಿ, ಹಿಂದುತ್ವ ಗಟ್ಟಿ ಆಗುತ್ತೆ ಎಂದು ಬಿಜೆಪಿ ಈ ಯಾತ್ರೆಗಳನ್ನು ಮಾಡಲು ಉದ್ದೇಶಿಸಿದೆ. ಇವರಿಂದ ಹಿಂದೂತ್ವ ಗಟ್ಟಿಯಾಗಲ್ಲ. ನಾನು ಕೂಡ ಹಿಂದೂ. ನಾವೆಲ್ಲರೂ ಕೂಡ ಹಿಂದೂ. ನಾನು ನಮ್ಮ ಊರಲ್ಲಿ ರಾಮ ಮಂದಿರ ಕಟ್ಟಿಸಿದ್ದೇನೆ. ಹಿಂದೂಗಳು ಎಂದರೆ ಸುಳ್ಳು ಹೇಳುವುದು, ಅಪಪ್ರಚಾರ, ಮಾಡುವುದಲ್ಲ. ಮನುಷ್ಯತ್ವ ಇರುವವರು ಹಿಂದೂಗಳು. ಅಮಾನವೀಯ ನಡವಳಿಕೆ ತೋರುವವರು ಹಿಂದೂಗಳಲ್ಲ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಅವರು ದಸರಾದಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಅವರ ಮನೆನೂ ರಾಜಕೀಯಕ್ಕೆ ಬೇಕಾದರೆ ಬಳಸಿ ಕೊಳ್ಳುತ್ತಾರೆ. ಸುಳ್ಳು ಹೇಳುವುದು ಬಿಟ್ಟು ಬಿಜೆಪಿಗೆ ಏನೂ ಗೊತ್ತು? ಬಿಜೆಪಿ ಹೋರಾಟದಿಂದ ದಸರಾ ಮೇಲೆ ಕೆಟ್ಟ ಪರಿಣಾಮ ಬೀರಲ್ಲ. ಹಿಂದೂಗಳೆಲ್ಲಾ ಬಿಜೆಪಿ ಜೊತೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಚಾಮುಂಡಿ ಬೆಟ್ಟ ಹಿಂದೂಗಳದಲ್ಲ ಎಂಬ ಡಿಕೆ ಶಿವಕುಮಾರ್ ಹೇಳಿಕೆಗೆ ಸಿಎಂ ಪ್ರತಿಕ್ರಿಯಿಸಿ, ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿನೇ ಇರಬಹುದು. ಈಗ ವಿಚಾರ ಇರುವುದು ದಸರಾ. ಚಾಮುಂಡಿ ಬೆಟ್ಟದ್ದು ಅಲ್ಲ. ದಸರಾ ನಾಡಹಬ್ಬ. ನಾಡಹಬ್ಬ ಎಲ್ಲರಿಗೂ ಸೇರಿದ್ದು. ಡಿಕೆ ಶಿವಕುಮಾರ್ ಹೇಳಿದ್ದು ನನಗೆ ಗೊತ್ತಿಲ್ಲ. ದಸರಾ ವಿಚಾರ ಬಗ್ಗೆ ಮಾತ್ರ ಈಗ ಚರ್ಚೆಯಲ್ಲಿ ಇದೆ. ಚಾಮುಂಡಿ ಬೆಟ್ಟದ್ದು ಅಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಿದ್ದರಾಮನ ಹುಂಡಿ ನನ್ನ ಸ್ವಗ್ರಾಮ. ನಾನು ಐದರಿಂದ ಏಳು ತರಗತಿಯಲ್ಲಿ ಓದಿದ ಶಾಲೆಗೆ ಹೊಸ ಕಟ್ಟಡ ಕಟ್ಟಿಸಿದ್ದೇನೆ.ಈ ಊರಿಗೆ ಪ್ರಾಥಮಿಕ ಶಾಲೆ, ಹೈಸ್ಕೂಲ್, ಪಿಯು ಕಾಲೇಜ್ ಆಗಿದೆ. ವಿದ್ಯಾರ್ಥಿಗಳು ಸಿಗಲ್ಲ ಅಂತಾ ಡಿಗ್ರಿ ಕಾಲೇಜ್ ಮಾತ್ರ ಮಾಡಿಲ್ಲ. ಎಲ್ಲಾ ರೀತಿಯ ವೈದ್ಯಕೀಯ ಸೇವೆ ಕಲ್ಪಿಸಿದ್ದೇನೆ. ಊರಿನ ಋಣ ಯಾವಾಗಲೂ ಇದ್ದೇ ಇರುತ್ತದೆ. ಅದು ಯಾವಾಗಲೂ ಮುಗಿಯದ ಋಣ ಎಂದು ಹೇಳಿದರು.