Home ನಮ್ಮ ಜಿಲ್ಲೆ ಉತ್ತರ ಕನ್ನಡ ಉತ್ತರ ಕನ್ನಡ: ಭರ್ತಿಯಾಗುತ್ತಿರುವ ಸೂಪಾ ಜಲಾಶಯ, ನದಿ ಪಾತ್ರದ ಜನರಿಗೆ ಎಚ್ಚರಿಕೆ

ಉತ್ತರ ಕನ್ನಡ: ಭರ್ತಿಯಾಗುತ್ತಿರುವ ಸೂಪಾ ಜಲಾಶಯ, ನದಿ ಪಾತ್ರದ ಜನರಿಗೆ ಎಚ್ಚರಿಕೆ

0

ದಾಂಡೇಲಿ: ಕಾಳಿನದಿಯಲ್ಲಿನ ಸೂಪಾ ಜಲಾಶಯ ಭರ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಗಣೇಶಗುಡಿಯ ಕರ್ನಾಟಕ ರಾಜ್ಯ ವಿದ್ಯುತ್ ನಿಗಮದ ಕಾರ್ಯ ನಿರ್ವಾಹಕ ಅಭಿಯಂತರರು ಪ್ರವಾಹದ ಎರಡನೇ ಮುನ್ನೆಚ್ಚರಿಕೆ ಸೂಚನೆ ನೀಡಿದ್ದಾರೆ.

ಕಾಳಿನದಿ ಯೋಜನೆ ಒಂದನೇ ಹಂತ ಸೂಪಾ ಅಣೆಕಟ್ಟೆಯ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆ ಬೀಳುತ್ತಿದ್ದು, ಜಲಾಶಯಕ್ಕೆ ಹೇರಳವಾಗಿ ನೀರು ಹರಿದು ಬರುತ್ತಿರುವುದರಿಂದ ಜಲಾಶಯದ ನೀರಿನಮಟ್ಟ ಸತತವಾಗಿ ಏರುತ್ತಿದೆ. ಸೂಪಾ ಜಲಾಶಯದ ಗರಿಷ್ಠ ಮಟ್ಟವು 564.00 ಮೀಟರ್ ಆಗಿದ್ದು, ಜಲಾಶಯದ ನೀರಿನ ಸಂಗ್ರಹಣಾ ಸಾಮರ್ಥ್ಯವು 147.55 ಟಿ.ಎಂ.ಸಿ. ಆಗಿರುತ್ತದೆ. ಜಲಾಶಯದ ಬುಧವಾರದ ನೀರಿನ ಮಟ್ಟವು ಬೆಳಿಗ್ಗೆ 8 ಗಂಟೆಗೆ 555.75 ಮೀಟರ್‌ಗಳಾಗಿದೆ. ಮತ್ತು 114.275 ಟಿ.ಎಂ.ಸಿ. ಸಂಗ್ರಹಣವಾಗಿರುತ್ತದೆ.

ಇದು ಜಲಾಶಯದ ಒಟ್ಟು ಸಾಮರ್ಥ್ಯದ ಶೇ. 77.45 ಆಗಿರುತ್ತದೆ. ಬುಧವಾರ ಸೂಪಾ ಜಲಾಶಯದ ಒಳಹರಿವು ಸುಮಾರು 49,002 ಕ್ಯೂಸೆಕ್ ಆಗಿರುತ್ತದೆ. ಇದೆ ರೀತಿಯಲ್ಲಿ ಜಲಾಶಯಕ್ಕೆ ನೀರಿನ ಒಳಹರಿವು ಮುಂದುವರಿದಲ್ಲಿ ಜಲಾಶಯವು ಗರಿಷ್ಠ ಮಟ್ಟ ತಲುಪುವ ಸಾಧ್ಯತೆ ಇರುತ್ತದೆ. ಆದ್ದರಿಂದ ಅಣೆಕಟ್ಟು ಸುರಕ್ಷತಾ ದೃಷ್ಟಿಯಿಂದ ಹೆಚ್ಚುವರಿಯಾದ ಜಲಾಶಯದ ನೀರನ್ನು ಯಾವುದೇ ಸಮಯದಲ್ಲಿ ಹೊರಬಿಡಲಾಗುವುದು ಎಂದು ತಿಳಿಸಿದ್ದಾರೆ.

ಅಣೆಕಟ್ಟೆಯ ಕೆಳದಂಡೆಯಲ್ಲಿ ಹಾಗೂ ನದಿಯ ಪಾತ್ರದುದ್ದಕ್ಕೂ ವಾಸಿಸುತ್ತಿರುವ ಸಾರ್ವಜನಿಕರು ತಮ್ಮ ಜನ ಹಾಗೂ ಜಾನುವಾರು ಇತ್ಯಾದಿಗಳೊಂದಿಗೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳ್ಳಬೇಕೆಂದು ತಿಳಿಸಲಾಗಿದೆ. ಸೂಪಾ ಅಣೆಕಟ್ಟೆಯ ಕೆಳಭಾಗದ ನದಿಪಾತ್ರದಲ್ಲಿ ದೋಣಿ ಸಂಚಾರ, ಮೀನುಗಾರಿಕೆ, ಜಲಸಾಹಸ ಕ್ರೀಡಾ ಚಟುವಟಿಕೆಗಳನ್ನು ಮತ್ತು ಇತರೆ ಚಟುವಟಿಕೆಗಳನ್ನು ಮಳೆಗಾಲ ಮುಗಿಯುವವರೆಗೂ ನಡೆಸದಂತೆ ಮುನ್ನೆಚ್ಚರಿಕೆಯಾಗಿ ತಿಳಿಸಲಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version