ಕನಕಪುರ: ಇಂದಿಗೂ ನಾನು ಮುಖ್ಯಮಂತ್ರಿ ಹುದ್ದೆ ಕೇಳಿಲ್ಲ, ರಾಹುಲ್‌ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಯ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.
ಟಿಎಪಿಸಿಎಂಎಸ್ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಯಕತ್ವ ಬದಲಾವಣೆ ನಮ್ಮ ಐದಾರು ಜನರ ನಡುವಿನ ಗುಟ್ಟಿನ ವಿಚಾರ. ಇದನ್ನು ನಾನು ಬಹಿರಂಗ ಮಾಡುವುದಿಲ್ಲ ಎಂದರು. ನಮ್ಮ ಪಕ್ಷದಲ್ಲಿ ನಡೆದಿರುವ ಹಲವು ಚರ್ಚೆಗಳನ್ನು ಮಾಧ್ಯಮದವರೇ ಸೃಷ್ಟಿಸಿ ಪ್ರಚಾರ ಮಾಡುತ್ತಿದ್ದಾರೆ. ಶಾಸಕರು, ಸಚಿವರು ನನ್ನನ್ನು ಸಿಎಂ ಮಾಡಲು ತೆರಳಿದ್ದಾರೆಂದು ಸುದ್ದಿ ಬಿತ್ತರಿಸಿದ್ದೀರಿ.
ಅವರವರ ಕೆಲಸಕ್ಕೆ ದೆಹಲಿಗೆ ತೆರಳಿದ್ದಾರೆ ಎಂದರು.
ಆತ್ಮಸಾಕ್ಷಿಗೆ ತಕ್ಕಂತೆ ಕೆಲಸ: ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಆಗಿರುವ ಚರ್ಚೆ ನನಗೆ ಗೊತ್ತಿಲ್ಲ. ಈ ಬಗ್ಗೆ ನಾನೇನು ಮಾತನಾಡುವುದಿಲ್ಲ. ನಾನು ನನ್ನ ಆತ್ಮಸಾಕ್ಷಿಯನ್ನು ನಂಬಿದ್ದೇನೆ. ಆತ್ಮಸಾಕ್ಷಿಗೆ ತಕ್ಕಂತೆ ನಾವು ಕೆಲಸ ಮಾಡಬೇಕು, ಪಕ್ಷಕ್ಕೆ ಮುಜುಗರ ತರುವುದು, ಪಕ್ಷವನ್ನು ದುರ್ಬಲಗೊಳಿಸುವುದು ನನಗೆ ಇಷ್ಟವಿಲ್ಲ ಎಂದರು.
