ಎಚ್.ಡಿ.ಕೋಟೆ ಪಟ್ಟಣದ ಸಾರ್ವಜನಿಕ ಸ್ಥಳಗಳಲ್ಲಿ ಬೀದಿನಾಯಿಗಳು ಮತ್ತು ಬೀಡಾಡಿ ರಾಸುಗಳ ನಿಯಂತ್ರಣಕ್ಕೆ ಪುರಸಭೆ ಮುಂದಾಗಿಲ್ಲ. ಹೀಗಾಗಿ ಎಲ್ಲೆಂದರಲ್ಲಿ ಅಡ್ಡ ಬರುವ ರಾಸುಗಳು, ಮೈಮೇಲೆ ಬಿದ್ದು ಕಚ್ಚುವ ನಾಯಿಗಳಿಂದ ತಪ್ಪಿಸಿಕೊಂಡು ಹೋಗಲು ಪಟ್ಟಣದ ಜನತೆ ಹರಸಾಹಸ ಪಡಬೇಕಾಗಿ ಬಂದಿದೆ.
ಪಟ್ಟಣದ ಬಹುತೇಕ ಎಲ್ಲಾ ಬಡಾವಣೆಗಳ ಸಾರ್ವಜನಿಕ ಸ್ಥಳಗಳು, ನೂತನವಾಗಿ ನಿರ್ಮಾಣಗೊಳ್ಳುವ ಕಟ್ಟಡಗಳು ಅಷ್ಟೇ ಏಕೆ ತಾಲೂಕು ಕೇಂದ್ರ ಸ್ಥಾನದ ಸಾರ್ವಜನಿಕ ಬಸ್‍ನಿಲ್ದಾಣವನ್ನೂ ಬೀಡಾಡಿ ರಾಸುಗಳು ಹಾಗೂ ಬೀದಿನಾಯಿಗಳ ರಾಜಾರೋಷವಾಗಿ ಸಂಚರಿಸುತ್ತಿವೆ. ಜನಸಾಮಾನ್ಯರಿಗೆ ಇವುಗಳ ಕಾಟ ಸಹಿಸಲಾಗದಂತಾಗಿದೆ.
ನೂತನ ಕಟ್ಟಡಗಳಲ್ಲಿ ಆಶ್ರಯ ಪಡೆದುಕೊಳ್ಳುವ ಬೀದಿನಾಯಿಗಳ ಗುಂಪು ರಾತ್ರಿಯಿಡೀ ಮನಬಂದಂತೆ ಬೊಗಳುತ್ತಿರುತ್ತವೆ. ಇದು ಪಟ್ಟಣದ ಜನತೆಯ ನೆಮ್ಮದಿಗೆ ಭಂಗ ತಂದಿದೆ. ಹಗಲು ವೇಳೆಯಲ್ಲಿ ಬಸ್ ನಿಲ್ದಾಣ, ಸಾರ್ವಜನಿಕ ಸಂಚರಿಸುವ ಮುಖ್ಯ ರಸ್ತೆ ಮಾರ್ಗಗಳಲ್ಲಿ ಎಲ್ಲೆಂದರಲ್ಲಿ ಸಂಚರಿಸುವುದಲ್ಲದೆ, ಮಹಿಳೆಯರು, ಮಕ್ಕಳು, ವೃದ್ಧರಿಗೆ ಹಲವಾರು ಬಾರಿ ದ್ವಿಚಕ್ರವಾಹನಗಳ ಸವಾರರು ವಾಹನ ಚಲಾಯಿಸುವಾಗ ದಿಢೀರ್ ಅಡ್ಡಬಂದ ನಾಯಿಗಳಿಂದ ಅಪಘಾತಕ್ಕೀಡಾಗಿರುವ ನಿದರ್ಶನಗಳು ಸಾಕಷ್ಟಿವೆ.
ಬಿಡಾಡಿ ರಾಸುಗಳ ಕಾಟ: ಬೀದಿ ನಾಯಿಗಳ ಕಾಟ ಇಷ್ಟಾದರೆ ಬಿಡಾಡಿ ರಾಸುಗಳ ಕಾಟ ಇದಕ್ಕಿಂತ ಹೆಚ್ಚಾಗಿದೆ. ಬಡಾವಣೆಗಳಲ್ಲಿ ಇಡೀ ರಾತ್ರಿ ಮಾತ್ರವಲ್ಲದೆ, ಹಗಲು ವೇಳೆಯಲ್ಲಿಯೂ ಎಲ್ಲೆಂದರಲ್ಲಿ ಓಡಾಡುತ್ತಿವೆ. ರಸ್ತೆ ಮಧ್ಯದಲ್ಲಿಯೇ ಮಲಗಿ ಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತಿವೆ. ಇವುಗಳು ಪರಸ್ಪರ ಗುದ್ದಾಡುವಾಗ ರಸ್ತೆ ಹೋಕರ ಮೈಮೇಲೆ ಬೀಳುವುದೂ ಉಂಟು. ಇವುಗಳಿಂದ ತಪ್ಪಿಸಿಕೊಂಡು ವಾಹನಗಳು ಸಾಗುವುದು ಪ್ರಯಾಸದ ಕೆಲಸವಾಗಿದೆ.

ಈ ರೀತಿ ಬೀಡಾಡಿ ರಾಸುಗಳು, ಬೀದಿನಾಯಿಗಳ ಉಪಟಳ ಹೆಚ್ಚಾಗಿದ್ದರೂ ಪಾಲಿಕೆ ಇವನ್ನು ನಿಯಂತ್ರಿಸುವ ಕೆಲಸ ಮಾಡಿಲ್ಲ. ಹೀಗಾಗಿ ಸಾರ್ವಜನಿಕರ ಗೋಳು ತಪ್ಪಿಲ್ಲ. ಏನಾದರೂ ಅನಾಹುತ ಸಂಭವಿಸುವ ಮೊದಲು ಇವುಗಳ ಹಾವಳಿಗೆ ಪುರಸಭೆ ಕಡಿವಾಣ ಹಾಕಬೇಕೆಂದು ಇಲ್ಲಿನ ಜನರು ಒತ್ತಾಯಿಸಿದ್ದಾರೆ.