Home ನಮ್ಮ ಜಿಲ್ಲೆ ಕಲಬುರಗಿ ಕಾಲೇಜು ಶುರುವಾದರೂ ಉಪನ್ಯಾಸಕರಿಲ್ಲ: ಮಕ್ಕಳು ಕಂಗಾಲು!

ಕಾಲೇಜು ಶುರುವಾದರೂ ಉಪನ್ಯಾಸಕರಿಲ್ಲ: ಮಕ್ಕಳು ಕಂಗಾಲು!

0

ಶಂಕರಬಾಬು ರೆಡ್ಡಿ

ಕಲಬುರಗಿ: ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುವ ರಾಜ್ಯದ 432 ಪದವಿ (ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಉಪನ್ಯಾಸಕರಿಲ್ಲದೆ ವಿದ್ಯಾರ್ಥಿಗಳ ತರಗತಿಗಳಿಗೆ ಕುತ್ತು ಬಂದಿದೆ. ಈ ಕಾಲೇಜುಗಳಿಗೆ ಇರುವ 6 ಸಾವಿರ ಖಾಯಂ ಉಪನ್ಯಾಸಕರ ಪೈಕಿ ಈಗಾಗಲೇ 3 ಸಾವಿರಕ್ಕೂ ಅಧಿಕ ಉಪನ್ಯಾಸಕರು ನಿವೃತ್ತಿಯಾಗಿದ್ದಾರೆ. ಖಾಯಂ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ಸದ್ಯಕ್ಕಂತೂ ಇಲ್ಲ.

ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿರುವ 12 ಸಾವಿರ ಉಪನ್ಯಾಸಕರನ್ನು ಆಗಸ್ಟ್ 2ರಂದು ಸೇವೆಯಿಂದ ಬಿಡುಗಡೆಗೊಳಿಸಿರುವುದರಿಂದ ಈ ಕಡೆ ಖಾಯಂ ಉಪನ್ಯಾಸಕರ ಕೊರತೆ ಮತ್ತು ಅತಿಥಿ ಉಪನ್ಯಾಸಕರ ನೇಮಕಾತಿ ಇಲ್ಲದೆ ವಿದ್ಯಾರ್ಥಿಗಳ ತರಗತಿಗಳು 15 ದಿನಗಳಿಂದ ಸಮರ್ಪಕವಾಗಿ ನಡೆಯುತ್ತಿಲ್ಲ.

2025- 26ನೇ ಸಾಲಿಗೆ ರಾಜ್ಯದಲ್ಲಿ ಖಾಲಿ ಇರುವ 12 ಸಾವಿರ ಅತಿಥಿ ಉಪನ್ಯಾಸಕರ ನೇಮಕಾತಿಗೆ ಕಾಲೇಜು ಶಿಕ್ಷಣ ಇಲಾಖೆ ಜೂನ್ ತಿಂಗಳಲ್ಲಿ ಅರ್ಜಿ ಆಹ್ವಾನಿಸಿದ್ದು, ಸುಮಾರು 55 ಸಾವಿರ ಅರ್ಜಿಗಳು ಬಂದಿವೆ. ಆದರೆ ಇದುವರೆಗೂ ಆಯ್ಕೆ ಪಟ್ಟಿ ಪ್ರಕಟಿಸಿಲ್ಲ. ಕೆ-ಎಸ್‌ಐಟಿ, ಎಸ್‌ಐಟಿ, ಎನ್‌ಐಟಿ, ಪಿಎಚ್‌ಡಿ ಅರ್ಹತೆ ಪರಿಗಣಿಸದೆ ಕನಿಷ್ಠ ಅರ್ಹತೆ ಸ್ನಾತಕೋತ್ತರ ಪದವೀಧರರನ್ನು ಹುದ್ದೆಗೆ ಪರಿಗಣಿಸಬೇಕು ಎಂದು ಸುಪ್ರೀಂಕೋರ್ಟ್‌ ಮತ್ತು ಕರ್ನಾಟಕ ಹೈಕೋರ್ಟ್‌ ಕೆಲವು ವರ್ಷಗಳ ಹಿಂದೆ ಹೊರಡಿಸಿದ ಆದೇಶ ಪ್ರಶ್ನಿಸಿ ಕೆಲವರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ.

ಮತ್ತೆ ಕೆಲವು ಅತಿಥಿ ಉಪನ್ಯಾಸಕರು 10 ವರ್ಷ ಸೇವೆ ಸಲ್ಲಿಸಿದವರಿಗೆ ಖಾಯಂಗೊಳಿಸಬೇಕು ಮತ್ತು ಸೇವಾ ಭದ್ರತೆ ಒದಗಿಸುವಂತೆ ಕೋರ್ಟ್ ಮೊರೆ ಹೋಗಿರುವುದರಿಂದ ಇಲಾಖೆ ಅತಿಥಿ ಉಪನ್ಯಾಸಕರ ನೇಮಕಾತಿ ಪಟ್ಟಿ ಪ್ರಕಟಿಸಿಲ್ಲ. ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಹಿತದೃಷ್ಟಿಯಿಂದ 2024-25ನೇ ಸಾಲಿನಲ್ಲಿ ಕೆಲಸ ಮಾಡಿದ ಉಪನ್ಯಾಸಕರನ್ನು ಆದೇಶದವರೆಗೂ ಮುಂದುವರೆಸಬೇಕೆಂದು ಉಪನ್ಯಾಸಕರ ಮತ್ತು ವಿದ್ಯಾರ್ಥಿಗಳ ಒತ್ತಾಸೆ.

ಎಲ್ಲಾ ಅತಿಥಿ ಉಪನ್ಯಾಸಕರಿಗೂ (ಯುಜಿಸಿ ನಾನ್ ಯುಜಿಸಿ) ಎಂಬ ಬೇಧ ಮಾಡದೆ ಒಂದು ಬಾರಿ ಸೇವಾ ಸಕ್ರಮ ಮಾಡಲು ಕಾನೂನು ನಿಯಾಮಾವಳಿಗಳನ್ನು ರೂಪಿಸುವಂತೆ ಅಡ್ವೋಕೇಟ್ ಜನರಲ್ ಅವರಿಗೆ ಕಾನೂನು ಸಚಿವ ಎಚ್.ಕೆ.ಪಾಟೀಲ್ ಇತ್ತೀಚಿಗೆ ಸೂಚಿಸಿದ್ದಾರೆ.

ಹೊಸ ಕಾನೂನು ನಿಯಮಾವಳಿ ರೂಪಿಸುವವರೆಗೂ ಮತ್ತು ಕೋರ್ಟ್ ಆದೇಶ ಬರುವವರೆಗೂ ಅತಿಥಿ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತೆ ಆಗಿದೆ. ಈ ಕುರಿತು ಉನ್ನತ ಶಿಕ್ಷಣ ಇಲಾಖೆ ಸಚಿವ ಎಂ.ಸಿ.ಸುಧಾಕರ ಕ್ರಮ ಕೈಗೊಳ್ಳಬೇಕಿದೆ.

ಈ ಕುರಿತು ಮಾತನಾಡಿರುವ ಶಿವಶರಣ ಗೊಳ್ಳೆ, ಜಂಟಿ ನಿರ್ದೇಶಕ, ಕಾಲೇಜು ಶಿಕ್ಷಣ ಇಲಾಖೆ, ಕಲಬುರಗಿ, “ಉಪನ್ಯಾಸಕರಿಗಾಗಿ ಅರ್ಜಿ ಕರೆಯಲಾಗಿದೆ. ಕಲಬುರಗಿ ವಿಭಾಗದಲ್ಲಿ ಒಟ್ಟು 80 ಕಾಲೇಜು ಸೇರಿ ರಾಜ್ಯದ ಎಲ್ಲ ಕಾಲೇಜುಗಳ ಅತಿಥಿ ಉಪನ್ಯಾಸಕರ ಹುದ್ದೆಗೆ ಆನ್‌ಲೈನ್ ಮೂಲಕ ಅರ್ಜಿ ಕರೆಯಲಾಗಿದೆ. ಕಾಲೇಜು ಶಿಕ್ಷಣ ಇಲಾಖೆ ಆಯ್ಕೆ ಪಟ್ಟಿ ಪ್ರಕಟಿಸಬೇಕಾಗಿದೆ” ಎಂದು ಹೇಳಿದ್ದಾರೆ.

ಡಾ. ಚಂದ್ರಶೇಖರ, ಅತಿಥಿ ಉಪನ್ಯಾಸಕ, ಕಲಬುರಗಿ ಮಾತನಾಡಿ, “ಅತಿಥಿ ಉಪನ್ಯಾಸಕರನ್ನು ಮುಂದುವರಿಸಬೇಕು. ಕೋರ್ಟ್ ಆದೇಶ ಬರುವವರೆಗೂ ಇಲಾಖೆ ಕಾಯದೇ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ 2024-25ನೇ ಸಾಲಿನಲ್ಲಿ ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರನ್ನು 2025-26ನೇ ಶೈಕ್ಷಣಿಕ ಸಾಲಿಗೆ ಮುಂದುವರಿಸಬೇಕು” ಎಂದು ಒತ್ತಾಯಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version