Home ನಮ್ಮ ಜಿಲ್ಲೆ ಹಾಸನ ಹಾಸನ: ಹೇಮಾವತಿ ಜಲಾಶಯ ಭರ್ತಿಯಾದರೂ ಬಾಗಿನ ಭಾಗ್ಯವಿಲ್ಲ

ಹಾಸನ: ಹೇಮಾವತಿ ಜಲಾಶಯ ಭರ್ತಿಯಾದರೂ ಬಾಗಿನ ಭಾಗ್ಯವಿಲ್ಲ

0

ರಮೇಶ್ ಹಂಡ್ರಂಗಿ

ಹಾಸನ: ಹಾಸನ ಜಿಲ್ಲೆಯ ಹೇಮಾವತಿ ಜಲಾಶಯ ಭರ್ತಿಯಾಗಿದೆ. ಆದರೆ ಬಾಗಿನ ಭಾಗ್ಯವಿಲ್ಲ. ಹಾಸನ, ತುಮಕೂರು, ಮಂಡ್ಯ, ಮೈಸೂರು ನಾಲ್ಕು ಜಿಲ್ಲೆಗಳ ಒಟ್ಟು 7,89,520 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುವ ಕಾವೇರಿ ಕಣಿವೆಯ ಪ್ರಮುಖ ಜಲಾಶಯವಿದಾಗಿದೆ.

ಹಾಸನ ಜಿಲ್ಲೆಯ ಜೀವನದಿ ಎನಿಸಿರುವ 4 ಜಿಲ್ಲೆಗಳಿಗೆ ನೀರು ಹರಿಸುವ ಗೊರೂರಿನಲ್ಲಿರುವ ಹೇಮಾವತಿ ಜಲಾಶಯ ಈ ಬಾರಿ ಮೇ ತಿಂಗಳಿನಲ್ಲಿಯೇ ಭರ್ತಿಯಾದರೂ ಈವರೆಗೂ ಬಾಗಿನ ಭಾಗ್ಯವನ್ನು ಮಾತ್ರ ಕಂಡಿಲ್ಲ. ಸಾಂಪ್ರದಾಯಿಕವಾಗಿ ಬಾಗಿನ ಅರ್ಪಿಸುವುದು ಸರ್ಕಾರದ ಜವಾಬ್ದಾರಿ. ಈವರೆಗೂ ಸರ್ಕಾರವಾಗಲಿ ಅಥವಾ ಜಿಲ್ಲಾಡಳಿತವಾಗಲಿ ಹೇಮಾವತಿ ಜಲಾಶಯಕ್ಕೆ ಬಾಗಿನ ನೀಡುವುದನ್ನು ಮರೆತಂತಿದೆ.

ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಆರ್‌ಎಸ್, ಕಬಿನಿ ಹಾಗೂ ಭದ್ರಾ ಜಲಾಶಯಕ್ಕೆ ಸಾಂಪ್ರದಾಯಿಕವಾಗಿ ಬಾಗಿನ ಅರ್ಪಿಸಿದ್ದಾರೆ. ಆದರೆ, ಕಳೆದ ಮೂರು ತಿಂಗಳಿನಿಂದ ಒಡಲು ತುಂಬಿ ನಿಂತಿರುವ ಹೇಮಾವತಿ ಜಲಾಶಯಕ್ಕೆ ಎಂದು ಬಾಗಿನ ಅರ್ಪಿಸಲಿದ್ದಾರೆ ಎಂದು ಜಿಲ್ಲೆಯ ಜನತೆ ಕಾದು ನೋಡಬೇಕಿದೆ.

ಪ್ರಸಕ್ತ ವರ್ಷ ಹೇಮಾವತಿ ಜಲಾಶಯ ಮುಂಗಾರಿಗೂ ಮುನ್ನವೇ ಸುರಿದ ಉತ್ತಮ ಮಳೆಯಿಂದಾಗಿ ಭರ್ತಿಯಾಗಿತ್ತು. ಇದೇ ವೇಳೆ ಡ್ಯಾಂನ 6 ಕ್ರಸ್ಟ್ ಗೇಟ್‌ಗಳನ್ನು ತೆರೆದು ನದಿಗೆ ನೀರು ಹರಿಸಲಾಗಿತ್ತು. ಅಂದಿನಿಂದ ಇಂದಿನವರೆಗೂ ಚಿಕ್ಕಮಗಳೂರು ಸೇರಿ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಇಂದಿಗೂ ಜಲಾಶಯಕ್ಕೆ ಸರಾಸರಿ 10 ಸಾವಿರ ಕ್ಯುಸೆಕ್ ನೀರು ಹರಿದುಬರುತ್ತಿದೆ. ಹೀಗಾಗಿ ಜಲಾಶಯದಿಂದ ಎಡದಂಡೆ, ಬಲದಂಡೆ ಸೇರಿದಂತೆ ಕ್ರಸ್ಟ್ ಗೇಟ್‌ಗಳ ಮೂಲಕ ನೀರನ್ನು ಹೊರಬಿಡಲಾಗುತ್ತಿದೆ.

37.103 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಹೇಮಾವತಿ ಜಲಾಶಯದಲ್ಲಿ ಪ್ರಸ್ತುತ 36.958 ಟಿಎಂಸಿ ನೀರು ಸಂಗ್ರಹವಾಗಿದೆ. ಪ್ರಸ್ತುತ 7,988 ಟಿಎಂಸಿ ನೀರು ಒಳಹರಿವು ಬರುತ್ತಿದ್ದು, 7,710 ಟಿಎಂಸಿ ನೀರನ್ನು ಹೊರಬಿಡಲಾಗುತ್ತಿದೆ.

ಬಾಗಿನ ಅರ್ಪಣೆ ಕುರಿತು ಹಾಸನ ಸಂಸದ ಶ್ರೇಯಸ್ ಪಟೇಲ್ ಮಾತನಾಡಿ, “ಉತ್ತಮ ಮಳೆಯಿಂದಾಗಿ ಜಿಲ್ಲೆಯ ಜೀವನದಿ ಹೇಮಾವತಿ ಜಲಾಶಯ ತುಂಬಿದೆ. ವಿಧಾನಸಭೆ ಅಧಿವೇಶನ, ಸಂಸತ್ ಕಲಾಪ ಇದ್ದುದ್ದರಿಂದ ಹೇಮಾವತಿ ಜಲಾಶಯಕ್ಕೆ ಬಾಗಿನ ಅರ್ಪಿಸಲು ಸಾಧ್ಯವಾಗಿರಲಿಲ್ಲ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿದಂತೆ ಪ್ರಮುಖ ಸಚಿವರೊಂದಿಗೆ ಹೇಮಾವತಿ ಜಲಾಶಯಕ್ಕೆ ಬಾಗಿನ ಅರ್ಪಿಸಲಾಗುವುದು” ಎಂದು ಹೇಳಿದ್ದಾರೆ.

ನಾಲ್ಕು ಜಿಲ್ಲೆಗಳಿಗೆ ಜೀವನದಿ: ಹೇಮಾವತಿ ಜಲಾಶಯ 4 ಜಿಲ್ಲೆಗಳ ಒಟ್ಟು 7,89,520 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಿದೆ. ಹಾಸನ ಜಿಲ್ಲೆಯ 1,55,030 ಎಕರೆ, ತುಮಕೂರು ಜಿಲ್ಲೆಯ 3,17,672 ಎಕರೆಗೆ, ಮಂಡ್ಯ ಜಿಲ್ಲೆಯ 2,30,885 ಎಕರೆಗೆ ಹಾಗೂ ಮೈಸೂರು ಜಿಲ್ಲೆಯ 5,665 ಎಕರೆಗೆ ನೀರಾವರಿ ಸೌಲಭ್ಯ ಕಲ್ಪಿಸಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version