ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪತ್ನಿಯೊಂದಿಗೆ ಹಾಸನದ ಪ್ರಸಿದ್ಧ ಹಾಸನಾಂಬೆ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದು, ರಾಜ್ಯ ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಈ ಭೇಟಿಯ ಸಂದರ್ಭದಲ್ಲಿ, ಪೂಜಾ ವಿಧಿಗಳ ವೇಳೆ ದೇವಿಯ ಬಲಬದಿಯಿಂದ ಎರಡು ಬಾರಿ ಹೂವು ಬಿದ್ದಿದ್ದು, ಇದನ್ನು ಡಿಕೆ ಶಿವಕುಮಾರ್‌ಗೆ ಶುಭ ಸೂಚನೆ ಎಂದು ವ್ಯಾಪಕವಾಗಿ ವಿಶ್ಲೇಷಿಸಲಾಗುತ್ತಿದೆ.
ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಬದಲಾವಣೆ, ಸಚಿವ ಸಂಪುಟ ವಿಸ್ತರಣೆ ಹಾಗೂ ನವೆಂಬರ್ ಕ್ರಾಂತಿಯಂತಹ ಮಾತುಗಳು ಕೇಳಿಬರುತ್ತಿರುವ ಈ ಸಮಯದಲ್ಲಿ ಡಿಕೆಶಿ ಈ ದೇವಸ್ಥಾನ ಭೇಟಿ ಮಹತ್ವ ಪಡೆದುಕೊಂಡಿದೆ. ಹಾಸನಾಂಬೆ ದರ್ಶನವು ಪ್ರತಿ ವರ್ಷವೂ ಅತ್ಯಂತ ಭಕ್ತಿ, ಶ್ರದ್ಧೆಯಿಂದ ನಡೆಯುವ ಒಂದು ಧಾರ್ಮಿಕ ಆಚರಣೆ.
ಈ ವರ್ಷವೂ ಡಿಕೆಶಿ ದಂಪತಿಗಳು ದೇವಸ್ಥಾನಕ್ಕೆ ತೆರಳಿ, ಶ್ರೇಯಸ್ಸಿಗಾಗಿ ನಾರಾಯಣಿ ನಮಸ್ಕಾರ ಮಂತ್ರವನ್ನು ಪಠಿಸಿ, ದುರ್ಗಾ ಸಪ್ತಸತಿ ಪಾರಾಯಣ ಮಾಡಿಸಿದ್ದಾರೆ. ಪೂಜೆಯ ಸಂದರ್ಭದಲ್ಲಿ ಖಡ್ಗಮಾಲಾ ಸ್ತೋತ್ರವನ್ನು ಪಠಿಸುತ್ತಿದ್ದಾಗ ಎರಡು ಬಾರಿ ದೇವಿಯ ಬಲಗಡೆಯಿಂದ ಹೂವು ಬಿದ್ದಿರುವುದು, ಭಕ್ತರು ಹಾಗೂ ರಾಜಕೀಯ ವಲಯದಲ್ಲಿ ಶುಭ ಶಕುನ ಎಂದೇ ಪರಿಗಣಿಸಲಾಗಿದೆ.
ಪೂಜೆಯ ನಂತರ ಮಾತನಾಡಿದ ಡಿಕೆ ಶಿವಕುಮಾರ್, “ದುಃಖವನ್ನು ದೂರ ಮಾಡುವ ದುರ್ಗಾದೇವಿ ಶಕ್ತಿ ಸ್ವರೂಪಿಣಿ. ನಾವು ಪ್ರತಿ ವರ್ಷವೂ ತಪ್ಪದೆ ಹಾಸನಾಂಬೆಯ ದರ್ಶನ ಪಡೆಯುತ್ತೇವೆ. ರಾಜ್ಯದ ಜನತೆಗೆ ಶಾಂತಿ, ನೆಮ್ಮದಿ, ಯಶಸ್ಸು ಸಿಗಲೆಂದು ಪ್ರಾರ್ಥಿಸಿದ್ದೇನೆ” ಎಂದು ತಿಳಿಸಿದ್ದಾರೆ.
ಮಾಧ್ಯಮದವರು ಹೆಚ್ಚಿನ ಅಧಿಕಾರಕ್ಕಾಗಿ ಏನಾದರೂ ಪ್ರಾರ್ಥಿಸಿದ್ದೀರಾ ಎಂದು ಕೇಳಿದಾಗ, “ನಾನುಂಟು, ತಾಯಿಯುಂಟು. ನಾನುಂಟು, ಭಕ್ತಿಯುಂಟು. ಭಕ್ತ ಹಾಗೂ ಭಗವಂತನಿಗೆ ವ್ಯವಹಾರ ನಡೆಯುವ ಸ್ಥಳ ದೇವಸ್ಥಾನ” ಎಂದು ಮಾರ್ಮಿಕವಾಗಿ ಉತ್ತರಿಸಿದ್ದಾರೆ. ಈ ಹೇಳಿಕೆ ಅವರ ರಾಜಕೀಯ ಮಹತ್ವಾಕಾಂಕ್ಷೆಗಳಿಗೆ ದೈವಿಕ ಬೆಂಬಲ ಸಿಕ್ಕಿದೆ ಎಂಬ ಸೂಚನೆಯನ್ನು ನೀಡಿದೆ.
ಡಿಕೆ ಶಿವಕುಮಾರ್ ಭೇಟಿಯ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಇಂದು (ಅ. 15) ಹಾಸನಾಂಬ ದರ್ಶನಕ್ಕೆ ತೆರಳಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ನೇತೃತ್ವದಲ್ಲಿ ಈ ಬಾರಿಯ ಹಾಸನಾಂಬ ದರ್ಶನ ಅಚ್ಚುಕಟ್ಟಾಗಿ ನಡೆಯುತ್ತಿರುವುದಕ್ಕೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.
ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಬದಲಾವಣೆ ಆಗಬೇಕಿದ್ದರೆ ಅದು ಹೈಕಮಾಂಡ್‌ನಿಂದ ಮಾತ್ರ ಸಾಧ್ಯ ಎಂದು ಡಿಕೆ ಶಿವಕುಮಾರ್ ಹಿಂದೆ ಹೇಳಿದ್ದರು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಇದಕ್ಕೆ ಪ್ರತಿಕ್ರಿಯಿಸಿ, ಹೈಕಮಾಂಡ್ ಮಾತ್ರವಲ್ಲದೆ, ಶಾಸಕರ ಬೆಂಬಲವೂ ಮುಖ್ಯ ಎಂದು ಹೇಳಿದ್ದರು.
ಈ ರಾಜಕೀಯ ಹೇಳಿಕೆಗಳ ನಡುವೆ, ಹಾಸನಾಂಬೆಯ ಆಶೀರ್ವಾದ ಡಿಕೆಶಿ ಅವರ ರಾಜಕೀಯ ಭವಿಷ್ಯಕ್ಕೆ ಹೊಸ ತಿರುವು ನೀಡಬಹುದೇ ಎಂಬ ಚರ್ಚೆಗಳು ಆರಂಭವಾಗಿವೆ. ದೇವಿಯ ದರ್ಶನದಿಂದ ಸಿಕ್ಕಿದ ಶುಭ ಸೂಚನೆಗಳು ಕೇವಲ ಭಕ್ತಿಯ ಪ್ರತೀಕವೋ ಅಥವಾ ಡಿಕೆ ಶಿವಕುಮಾರ್ ಮುಂದಿನ ರಾಜಕೀಯ ನಡೆಗಳಿಗೆ ಪೂರ್ವಭಾವಿ ಸಂಕೇತವೋ ಎಂಬುದನ್ನು ಕಾಲವೇ ನಿರ್ಧರಿಸಲಿದೆ.