ಹುಬ್ಬಳ್ಳಿ: ಗದಗ-ಹುಬ್ಬಳ್ಳಿ ಮಾರ್ಗದ ಅಣ್ಣಿಗೇರಿ ಸಮೀಪ ಭದ್ರಾಪುರ ಕ್ರಾಸ್ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಹಾವೇರಿ ಲೋಕಾಯುಕ್ತ ಇನ್ಸ್ಪೆಕ್ಟರ್ ಪಂಚಾಕ್ಷರಯ್ಯ ಹಿರೇಮಠ ಮೃತಪಟ್ಟಿದ್ದಾರೆ.
ಹಾವೇರಿಯಿಂದ ಗದುಗಿಗೆ ತಾವೇ ಕಾರು ಚಲಾಯಿಸಿಕೊಂಡು ಹೊರಟಿದ್ದ ವೇಳೆ ಕಾರು ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿದ್ದು, ಡಿಕ್ಕಿ ಸಂಭವಿಸಿದ ತಕ್ಷಣ ಡಿಸೇಲ್ ಟ್ಯಾಂಕ್ ಒಡೆದು ಬೆಂಕಿ ಹೊತ್ತಿಕೊಂಡಿದೆ.
ಬೆಂಕಿಯಿಂದ ಪಾರಾಗಲು ಅಸಾಧ್ಯವಾಗಿ ಕಾರಿನಲ್ಲಿಯೇ ಇನ್ಸ್ ಪೆಕ್ಟರ್ ಪಂಚಾಕ್ಷರಯ್ಯ ಹಿರೇಮಠ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬೆಂಕಿಯಲ್ಲಿ ಬೆಂದು ಹೋದ ಪಂಚಾಕ್ಷರಯ್ಯ ಸುಟ್ಟು ಕರಕಲಾಗಿದ್ದಾರೆ. ಬೆಂಕಿ ನಂದಿಸಲು ಸಾರ್ವಜನಿಕರು, ಅಗ್ನಿಶಾಮಕ ದಳ ಪ್ರಯತ್ನಿಸುವಷ್ಟರಲ್ಲಿ ಪರಿಸ್ಥಿತಿ ಕೈ ಮೀರಿ ಹೋಗಿತ್ತು. ಸ್ಥಳಕ್ಕೆ ಅಣ್ಣಿಗೇರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇವರು ಮೂಲತಃ ಬೆಳಗಾವಿ ಜಿಲ್ಲೆಯ ಮುರಗೋಡದವರಾದ ಪಂಚಾಕ್ಷರಯ್ಯ ಅವರು ಹಾವೇರಿಯಲ್ಲಿ ಲೋಕಾಯುಕ್ತ ಇನ್‌ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರೂ ಗದುಗಿನಲ್ಲಿ ಮನೆ ಮಾಡಿದ್ದರು. ಶುಕ್ರವಾರ ಹಾವೇರಿಯಲ್ಲಿ ಮದುವೆ ಮುಗಿಸಿಕೊಂಡು ಮರಳಿ ಗದುಗಿಗೆ ಹೊರಟಿದ್ದಾಗ ಅಪಘಾತ ಸಂಭವಿಸಿ ಈ ದುರ್ಘಟನೆ ನಡೆದಿದೆ.
ಅವರಿಗೆ ಪತ್ನಿ, ಇಬ್ಬರು ಪುತ್ರರು, ಬಂಧುಗಳು ಇದ್ದಾರೆ. ೨೦೦೩ರ ಬ್ಯಾಚಿನ ಇವರು ಧಾರವಾಡ ಗ್ರಾಮೀಣ, ಹುಬ್ಬಳ್ಳಿ ಉಪನಗರ ಠಾಣೆ, ಬೈಲಹೊಂಗಲ್ ಠಾಣೆಯಲ್ಲಿ ಕೆಲಕಾಲ ಕರ್ತವ್ಯ ನಿರ್ವಹಿಸಿದ್ದರು.
