
ಧಾರವಾಡ: ಧಾರವಾಡದ ಕೆಐಎಡಿಬಿ ವಲಯ ಕಚೇರಿಯನ್ನು ಸ್ಥಳಾಂತರಿಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ಸ್ಥಗಿತಗೊಳಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ರಾಜ್ಯದ ಬೃಹತ್, ಮಧ್ಯಮ ಕೈಗಾರಿಕೆಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಜೋಶಿ, ಧಾರವಾಡದ Karnataka Industrial Areas Development Board (ಕೆಐಎಡಿಬಿ) ವಲಯ ಕಚೇರಿ ಸುಮಾರು ನಲವತ್ತು ವರ್ಷಗಳ ಇತಿಹಾಸ ಹೊಂದಿದ್ದು, ಉತ್ತರ ಕರ್ನಾಟಕದ ಕೈಗಾರಿಕಾ ಅಭಿವೃದ್ಧಿಗೆ ಮಹತ್ವದ ಪಾತ್ರವಹಿಸುತ್ತಿದೆ ಎಂದು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: CM ಬದಲಾವಣೆ ಗೊಂದಲಕ್ಕೆ ಹೈಕಮಾಂಡ್ ಸ್ಪಷ್ಟನೆ ಅಗತ್ಯ: ಸತೀಶ್ ಜಾರಕಿಹೊಳಿ
ರಾಜ್ಯ ಸರ್ಕಾರ ಈ ಕಚೇರಿಯನ್ನು ಬೇರೆಡೆಗೆ ಸ್ಥಳಾಂತರಿಸಲು ಮುಂದಾಗಿದ್ದ ಹಿನ್ನೆಲೆಯಲ್ಲಿ, ಆ ನಿರ್ಧಾರವನ್ನು ಹಿಂಪಡೆಯುವಂತೆ ತಾವು ಸರ್ಕಾರಕ್ಕೆ ಆಗ್ರಹಿಸಿದ್ದಾಗಿ ಜೋಶಿ ತಿಳಿಸಿದ್ದಾರೆ. “ಧಾರವಾಡದ ಕೆಐಎಡಿಬಿ ವಲಯ ಕಚೇರಿ ಉತ್ತರ ಕರ್ನಾಟಕದ ಕೈಗಾರಿಕೆಗಳಿಗೆ ಏಕೈಕ ಪ್ರಮುಖ ಆಡಳಿತ ಕೇಂದ್ರವಾಗಿದೆ. ಇದನ್ನು ಸ್ಥಳಾಂತರಿಸುವುದು ಕೈಗಾರಿಕಾ ವಲಯಕ್ಕೆ ಹಿನ್ನಡೆಯಾಗುತ್ತದೆ,” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದಲ್ಲದೆ, ರಾಜ್ಯ ಸರ್ಕಾರಕ್ಕೆ ಹೆಚ್ಚುವರಿ ಆಡಳಿತಾತ್ಮಕ ಕಚೇರಿಗಳ ಅವಶ್ಯಕತೆ ಇದ್ದರೆ, ಈಗಿರುವ ಕಚೇರಿಗಳನ್ನು ಸ್ಥಳಾಂತರಿಸದೆ ಉತ್ತರ ಕರ್ನಾಟಕದ ಪ್ರಮುಖ ನಗರಗಳಲ್ಲಿ ಹೊಸ ಕಚೇರಿಗಳನ್ನು ಪ್ರಾರಂಭಿಸುವಂತೆ ತಾವು ಸಲಹೆ ನೀಡಿದ್ದಾಗಿ ಜೋಶಿ ತಿಳಿಸಿದ್ದಾರೆ.
ಇದನ್ನೂ ಓದಿ: ಕೆಡಿಪಿ ಸಭೆಯಲ್ಲಿ ಗದ್ದಲ: ಸಭೆಯಿಂದ ಹೊರನಡೆದ ಶಾಸಕ ಸತೀಶ್ ಸೈಲ್
ಜೋಶಿಯವರ ಆಗ್ರಹಕ್ಕೆ ಸ್ಪಂದಿಸಿ ಸಚಿವ ಎಂ.ಬಿ. ಪಾಟೀಲ ಅವರು ಧಾರವಾಡದ ಕೆಐಎಡಿಬಿ ವಲಯ ಕಚೇರಿ ಸ್ಥಳಾಂತರವನ್ನು ಸ್ಥಗಿತಗೊಳಿಸಿರುವುದು ಸಂತಸದ ಸಂಗತಿ ಎಂದು ಅವರು ಹೇಳಿದ್ದಾರೆ. ಈ ನಿರ್ಧಾರದಿಂದ ಉತ್ತರ ಕರ್ನಾಟಕದ ಕೈಗಾರಿಕಾ ವಲಯಕ್ಕೆ ಉತ್ತೇಜನ ದೊರೆಯಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.