Home ನಮ್ಮ ಜಿಲ್ಲೆ ದಕ್ಷಿಣ ಕನ್ನಡ ದೈವ ನಿಂದನೆ: ಮಂಜುನಾಥನ ಸನ್ನಿಧಿಯಲ್ಲಿ ಕ್ಷಮೆಯಾಚನೆಗೆ ಆಗ್ರಹ

ದೈವ ನಿಂದನೆ: ಮಂಜುನಾಥನ ಸನ್ನಿಧಿಯಲ್ಲಿ ಕ್ಷಮೆಯಾಚನೆಗೆ ಆಗ್ರಹ

0

ಮಂಗಳೂರು: ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (IFFI) ಬಾಲಿವುಡ್ ನಟ ರಣವೀರ್ ಸಿಂಗ್ ತೋರಿಸಿದ ದೈವ ಅನುಕರಣೆ ಮತ್ತು ಅಣಕದ ನಡೆ ಈಗ ಕರಾವಳಿಯಲ್ಲಿ ಭಾರೀ ಆಕ್ರೋಶ ಹುಟ್ಟುಹಾಕಿದೆ. ತುಳುನಾಡಿನ ಬೂತ/ದೈವ ಸಂಸ್ಕೃತಿ ಬಗ್ಗೆ ನೇರವಾಗಿ ಅವಮಾನ ಮಾಡಿದಂತಿದೆ ಎಂಬ ಆರೋಪದ ನಡುವೆ, ಕರಾವಳಿಯ ದೈವಾರಾಧಕರು ರಣವೀರ್ ಸಿಂಗ್ ಮಂಗಳೂರಿನ ಕದ್ರಿ ಮಂಜುನಾಥ ದೇವಾಲಯಕ್ಕೆ ಬಂದು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ಗೋವಾದಲ್ಲಿ ನಡೆದ ಕಾರ್ಯಕ್ರಮವೇ ವಿವಾದದ ಮೂಲ: ಅಂತರಾಷ್ಟ್ರೀಯ ಚಲನಚಿತ್ರೋತ್ಸವ ವೇದಿಕೆಯಲ್ಲಿ ರಣವೀರ್ ಸಿಂಗ್ ದೈವಗಳ ಭಾವಭಂಗಿಯನ್ನು ಅನುಕರಿಸಿ, ಹಾಸ್ಯಮಾಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ತುಳುನಾಡಿನಲ್ಲಿ ದೈವಗಳಿಗೆ ಅತ್ಯಂತ ಗೌರವ ಮತ್ತು ಭಕ್ತಿಯನ್ನು ನೀಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ರಣವೀರ್ ಅವರ ನಡೆ “ಸಂಸ್ಕೃತಿಗೆ ಧಕ್ಕೆ, ಭಕ್ತಿಯ ಹಾಸ್ಯ” ಎಂದು ಅಭಿಪ್ರಾಯ ವ್ಯಕ್ತವಾಗಿದೆ.

ರಿಷಬ್ ಶೆಟ್ಟಿಗೂ ಟೀಕೆ: ವಿವಾದ ಹೆಚ್ಚಾಗಲು ಮತ್ತೊಂದು ಕಾರಣವೆಣದರೆ ಕಾರ್ಯಕ್ರಮದ ವೇಳೆ ನಟ–ನಿರ್ದೇಶಕ ರಿಷಬ್ ಶೆಟ್ಟಿ ಪ್ರೇಕ್ಷಕರಲ್ಲಿ ಮೊದಲ ಸಾಲಿನಲ್ಲಿ ಕುಳಿತಿದ್ದು, ರಣವೀರ್ ಅವರ ಅನುಕರಣೆಗೆ ನಕ್ಕಿರುವುದು. ಇದರಿಂದ ಹಲವರು ರಿಷಬ್ ಮೇಲೂ ಪ್ರಶ್ನೆಗಳನ್ನು ಎತ್ತಿದ್ದಾರೆ “ತುಳುನಾಡಿನ ದೈವಗಳ ಅವಮಾನಕ್ಕೆ ವಿರೋಧಿಸದೇಕೆ?” ನೀವೇ ಕಾಂತಾರ ಮೂಲಕ ದೈವ ಸಂಸ್ಕೃತಿಯ ಮಹತ್ವವನ್ನು ಜಗತ್ತಿಗೆ ಹೇಳಿದವರು, ಆದರೆ ವೇದಿಕೆಯಲ್ಲಿ ಏಕೆ ಮೌನ? ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ರಿಷಬ್ ಕೂಡ ಕ್ಷಮೆ ಕೇಳಬೇಕೆಂದು ಅನೇಕರು ಆಗ್ರಹಿಸುತ್ತಿದ್ದಾರೆ.

ಕರಾವಳಿಯ ದೈವಾರಾಧಕರ ಆಗ್ರಹ: ದೈವ ನಿಂದನೆ ಮಾಡಿದ ರಣವೀರ್ ಸಿಂಗ್ ಮಂಗಳೂರಿನ ಕದ್ರಿ ಮಂಜುನಾಥ ದೇವಾಲಯಕ್ಕೆ ಬಂದು ಪ್ರತ್ಯಕ್ಷವಾಗಿ ಕ್ಷಮೆಯಾಚಿಸಬೇಕು, ತುಳುನಾಡಿನ ಮಣ್ಣಿಗೆ ಶರಣಾಗಬೇಕು. ದೈವ ಸಂಸ್ಕೃತಿಯ ಮಹತ್ವವನ್ನು ಗೌರವಿಸುವುದಾಗಿ ಸ್ಪಷ್ಟ ಹೇಳಬೇಕು ಎಂದು ಒತ್ತಾಯ ವ್ಯಕ್ತವಾಗಿದೆ.

ಅದೇ ರೀತಿ, ರಿಷಬ್ ಶೆಟ್ಟಿ ಕೂಡ ತಕ್ಷಣ ಕ್ಷಮೆಯಾಚಿಸಬೇಕು, ಎಂದು ಕೆಲ ದೈವಾರಾಧಕರು ಹೇಳಿಕೆ ನೀಡಿದ್ದಾರೆ. ಕರಾವಳಿ ಪ್ರದೇಶದಲ್ಲಿ ಈ ವಿಚಾರ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version