Home ನಮ್ಮ ಜಿಲ್ಲೆ ದಕ್ಷಿಣ ಕನ್ನಡ ಸಾಯೋದು ಬೇಡಪ್ಪಾ…! ಮಗುವಿನ ಮಾತು ಕರುಳು ಹಿಂಡಿತು – ಪಣಂಬೂರು ಪೊಲೀಸರ ಸಮಯ ಪ್ರಜ್ಞೆಯಿಂದ ಇಬ್ಬರ...

ಸಾಯೋದು ಬೇಡಪ್ಪಾ…! ಮಗುವಿನ ಮಾತು ಕರುಳು ಹಿಂಡಿತು – ಪಣಂಬೂರು ಪೊಲೀಸರ ಸಮಯ ಪ್ರಜ್ಞೆಯಿಂದ ಇಬ್ಬರ ಜೀವ ಉಳಿಯಿತು

0

ಮಂಗಳೂರು: ಗಂಡ–ಹೆಂಡತಿ ಜಗಳದ ನಂತರ ನಿರಾಶೆಯ ಅಂಚಿನಲ್ಲಿದ್ದ ಯುವಕನು ನಾಲ್ಕು ವರ್ಷದ ಮಗಳೊಂದಿಗೆ ಸಮುದ್ರಕ್ಕೆ ಹಾರಿ ಜೀವ ಕೊನೆಗೊಳಿಸಲು ಮುಂದಾಗಿದ್ದ, ಆದರೆ ಪಣಂಬೂರು ಪೊಲೀಸರ ಶೀಘ್ರ ಕ್ರಮದಿಂದ ತಂದೆ–ಮಗಳ ಜೀವ ಉಳಿದ ಘಟನೆ ಮಂಗಳೂರು ನಗರದಲ್ಲಿ ನಡೆದಿದೆ.

ಕಾವೂರು ಶಾಂತಿನಗರದ ರಾಜೇಶ್ ಅಲಿಯಾಸ್ ಸಂತು (35) ಎಂಬಾತ ತನ್ನ ಹೆಂಡತಿಗೆ ಅನುಮಾನ ಪಟ್ಟು, ನಿರಂತರ ಜಗಳ ಮಾಡುತ್ತಿದ್ದ. ಆತ ತನ್ನ ನಾಲ್ಕು ವರ್ಷದ ಮಗಳೊಂದಿಗೆ ತಣ್ಣೀರುಬಾವಿ ಬೀಚ್ಗೆ ತೆರಳಿ “ನಾವು ಸಾಯೋಣ ಮಗಳೇ, ನಿನ್ನ ತಾಯಿ ಸರಿ ಇಲ್ಲ” ಎಂದು ಹೇಳುತ್ತಾ ವಿಡಿಯೋ ಚಿತ್ರೀಕರಿಸಿ ತನ್ನ ಅಕ್ಕ ಮತ್ತು ಸಂಬಂಧಿಕರ ವಾಟ್ಸಪ್‌ ಗ್ರೂಪ್‌ಗೆ ಕಳುಹಿಸಿದ್ದ.

ಆ ವಿಡಿಯೋದಲ್ಲಿ ತಂದೆ–ಮಗಳ ನೆರಳು ಮಾತ್ರ ಕಾಣಿಸಿಕೊಂಡಿತ್ತು. ಅದು ಕೆಲವೇ ನಿಮಿಷಗಳಲ್ಲಿ ಪಣಂಬೂರು ಪೊಲೀಸ್ ಠಾಣೆಗೆ ತಲುಪಿತು. ವಿಡಿಯೋ ಯಾವ ಸ್ಥಳದದು ಎಂಬುದು ಸ್ಪಷ್ಟವಾಗದಿದ್ದರೂ, ಇನ್ಸ್‌ಪೆಕ್ಟರ್ ಮಹಮ್ಮದ್ ಸಲೀಂ ಅವರ ನೇತೃತ್ವದಲ್ಲಿ ಪೊಲೀಸರು ಶೋಧ ಆರಂಭಿಸಿದರು. ಸೈಬರ್ ಸಹಾಯದಿಂದ ಮೊಬೈಲ್ ನಂಬರ್ ಟ್ರೇಸ್ ಮಾಡಿ ಲೊಕೇಶನ್ ಪತ್ತೆ ಹಚ್ಚಿದಾಗ ಕಾವೂರು ಶಾಂತಿನಗರದಲ್ಲಿದ್ದ ಮನೆ ಪತ್ತೆಯಾಯಿತು.

ಪೊಲೀಸರು ಮನೆ ಬಾಗಿಲು ಒಡೆದು ಒಳಗೆ ಪ್ರವೇಶಿಸಿದಾಗ ರಾಜೇಶ್ ನೇಣು ಹಗ್ಗ ಹಾಕಿ ತನ್ನ ಮಗಳ ಜೊತೆ ಆತ್ಮಹತ್ಯೆಗೆ ಸಜ್ಜಾಗಿದ್ದ. ಕೆಲವೇ ಕ್ಷಣಗಳಲ್ಲಿ ಇಬ್ಬರ ಪ್ರಾಣ ಹೋಗುವ ಸಾಧ್ಯತೆ ಇದ್ದರೂ, ಫಕೀರಪ್ಪ, ಶರಣಪ್ಪ ಮತ್ತು ರಾಕೇಶ್ ಸೇರಿ ಕಾರ್ಯನಿರ್ವಹಿಸಿದ ಪಣಂಬೂರು ಪೊಲೀಸರು ಅವರನ್ನು ತಕ್ಷಣ ಹಿಡಿದು ರಕ್ಷಿಸಿದರು.

ವಿಡಿಯೋದಲ್ಲಿ “ಸಾಯೋದು ಬೇಡಪ್ಪಾ” ಎಂದು ಮಗಳು ಹೇಳುತ್ತಿದ್ದ ಶಬ್ದವೇ ಕರುಳು ಹಿಂಡಿಸಿದ ದೃಶ್ಯವಾಗಿತ್ತು ಎಂದು ಇನ್ಸ್‌ಪೆಕ್ಟರ್ ಸಲೀಂ ಹೇಳಿದರು. ಅವರು ಮತ್ತು ತಂಡದ ಸದಸ್ಯರು ರಾತ್ರಿ ಹತ್ತು ಗಂಟೆಯವರೆಗೂ ಹುಡುಕಾಟ ನಡೆಸಿ ಜೀವ ಉಳಿಸಿದರು.

ನಂತರ ಕಾವೂರು ಠಾಣೆಯಲ್ಲಿ ಗಂಡ–ಹೆಂಡತಿಯನ್ನು ಕರೆಸಿ ಪೊಲೀಸರು ಬುದ್ಧಿವಾದ ಹೇಳಿದರೂ, ಹೆಂಡತಿ ರಾಜೇಶ್ ಜೊತೆ ಇರುವುದು ಬೇಡ ಎಂದು ಹೇಳಿ ಡೈವರ್ಸ್ ನೀಡುವುದಾಗಿ ಸ್ಪಷ್ಟಪಡಿಸಿದರು. ರಾಜೇಶ್ ಮತ್ತೆ ಒಟ್ಟಿಗೆ ಬಾಳೋಣ ಎಂದರೂ, ಪತ್ನಿ ಒಪ್ಪಲಿಲ್ಲ. ಆತ್ಮಹತ್ಯೆ ಯತ್ನಕ್ಕೆ ಪ್ರಕರಣ ದಾಖಲಾಗದ ಕಾರಣ, ಪೊಲೀಸರಿಂದ ಇಬ್ಬರನ್ನೂ ಬಿಡಲಾಯಿತು.

ಈ ಘಟನೆ ಬಳಿಕ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಸೇರಿದಂತೆ ನಗರಮಟ್ಟದಲ್ಲಿ ಪಣಂಬೂರು ಪೊಲೀಸರ ಕಾರ್ಯಾಚರಣೆಗೆ ಪ್ರಶಂಸೆ ವ್ಯಕ್ತವಾಗಿದೆ. ಸಮಯಪ್ರಜ್ಞೆ ಮತ್ತು ಮಾನವೀಯತೆ ಬೆರೆತ ಈ ಸಾಹಸವು ಸಾಮಾಜಿಕ ಮಾಧ್ಯಮಗಳಲ್ಲೂ ಚರ್ಚೆಗೆ ಗ್ರಾಸವಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version