Home ನಮ್ಮ ಜಿಲ್ಲೆ ದಕ್ಷಿಣ ಕನ್ನಡ ಮಂಗಳೂರು: ಸೆಪ್ಟೆಂಬರ್ 30 ರಂದು ಕುಡ್ಲದ ಪಿಲಿಪರ್ಬ- 4 ನೇ ಆವೃತ್ತಿ

ಮಂಗಳೂರು: ಸೆಪ್ಟೆಂಬರ್ 30 ರಂದು ಕುಡ್ಲದ ಪಿಲಿಪರ್ಬ- 4 ನೇ ಆವೃತ್ತಿ

0

ಮಂಗಳೂರು: ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಮಾಜಿ ಸಂಸದ ನಳಿನ್ ಕುಮಾ‌ರ್ ಕಟೀಲ್ ಮಾರ್ಗದರ್ಶನದಲ್ಲಿ ಕುಡ್ಲದ ಪಿಲಿ ಪರ್ಬದ ನಾಲ್ಕನೇ ಆವೃತ್ತಿಯ ಸ್ಪರ್ಧಾಕೂಟವು ಇದೇ ಸಪ್ಟೆಂಬರ್ 30 ರಂದು ಮಂಗಳೂರಿನ ಕೇಂದ್ರ ಮೈದಾನದಲ್ಲಿ ಬೆಳಗ್ಗೆ 9.30 ಕ್ಕೆ ಉದ್ಘಾಟನೆಗೊಳ್ಳಲಿದೆ ಎಂದು ಶಾಸಕ ಡಿ. ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.

10 ಹುಲಿವೇಷಗಳ ತಂಡ: ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಭವ್ಯ ವಿಶಾಲ ವೇದಿಕೆಯಲ್ಲಿ ಆರಂಭಗೊಳ್ಳಲಿರುವ ಸ್ಪರ್ಧಾಕೂಟದಲ್ಲಿ ಕರಾವಳಿ ಭಾಗದ ಅತ್ಯಂತ ಜನಪ್ರಿಯ ಎಂಬ ಹೆಗ್ಗಳಿಕೆ ಹೊಂದಿರುವ 10 ಹುಲಿವೇಷ ತಂಡಗಳು ಭಾಗವಹಿಸಲಿವೆ. ಪ್ರತಿ ತಂಡವೂ ವೈಭವದ ಮೆರವಣಿಗೆ ಮೂಲಕ ವೇದಿಕೆಗೆ ಪ್ರವೇಶ ಮಾಡಲಿದ್ದು, 20 ನಿಮಿಷಗಳ ಪ್ರದರ್ಶನ ನೀಡಲಿವೆ. ಅಕ್ಕಿಮುಡಿ ಹಾರಿಸುವುದು ಕಡ್ಡಾಯವಾಗಿದ್ದು ಕರಿಹುಲಿಗಳು, ಮರಿಹುಲಿಗಳು, ಹಿಮ್ಮೇಳ, ಧರಣಿ ಮಂಡಲ ಹೀಗೆ ಇಡೀ ಕೂಟವು ವೈವಿಧ್ಯತೆಯಿಂದ ಕೂಡಿರಲಿವೆ.

ಥರ್ಡ್ ಅಂಪಾಯರ್ ರೂಪದಲ್ಲಿ ಕಾರ್ಯ: ಸ್ಪರ್ಧಾಕೂಟದಲ್ಲಿ 6 ತೀರ್ಪುಗಾರರು ಇರಲಿದ್ದು, ನಾಲ್ವರು ವೇದಿಕೆಯಲ್ಲಿ ಮತ್ತು ಇಬ್ಬರು ಒಳಗೆ ವಿಡಿಯೋ ವೀಕ್ಷಿಸುತ್ತಾ ಥರ್ಡ್ ಅಂಪಾಯರ್ ರೂಪದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಹುಲಿವೇಷ ತಂಡ ವೇದಿಕೆಗೆ ಆಗಮಿಸಿ, ಪ್ರದರ್ಶನ ನೀಡಿ ನಿರ್ಗಮಿಸುವವರೆಗಿನ ಎಲ್ಲವನ್ನೂ ವಿಡಿಯೋ ದಾಖಲಿಸಿ, ಅಗತ್ಯ ಬಿದ್ದರೆ ರೀಪ್ಲೇ ವೀಕ್ಷಿಸಿ ಬಳಿಕವೇ ಫಲಿತಾಂಶ ಘೋಷಣೆ ಮಾಡಲಾಗುತ್ತದೆ.

ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ. ಅತ್ಯುತ್ತಮ ಪ್ರದರ್ಶನ ನೀಡಿದ ತಂಡಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ನೀಡಿ ಗೌರವಿಸಲಾಗುವುದು. ಅಲ್ಲದೆ ಶಿಸ್ತಿನ ತಂಡ, ಅತ್ಯುತ್ತಮ ಹುಲಿ ಮೆರವಣಿಗೆ ತಂಡ, ಪರ್ಬದ ಪಿಲಿ, ಕಪ್ಪು ಪಿಲಿ, ಮರಿ ಹುಲಿ, ಮುಡಿ, ಶಾಸೆ, ಬಣ್ಣಗಾರಿಕೆ, ಧರಣಿ ಮಂಡಲ ವಿಭಾಗಗಳಿಗೆ ಪ್ರತ್ಯೇಕ ಬಹುಮಾನ ನೀಡಿ, ಪ್ರತಿ ಹುಲಿವೇಷ ತಂಡಕ್ಕೆ ಗೌರವ ಮೊತ್ತ ನೀಡಲಾಗುವುದು.

ಕಾರ್ಯಕ್ರಮಕ್ಕೆ ಜಿಲ್ಲೆಯ ಹಾಗೂ ನಾಡಿನ ಖ್ಯಾತನಾಮರು ಆಗಮಿಸಿ ವಿಶೇಷ ಮೆರುಗು ನೀಡಲಿದ್ದು, ಗಣ್ಯರಿಗೆ ವಿಶೇಷ ಆಸನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸ್ಪರ್ಧಾಕೂಟ ನಡೆಯುವ ಮೈದಾನದಲ್ಲಿ 5 ಸಾವಿರ ಮಂದಿ ಕುಳಿತು ವೀಕ್ಷಿಸಬಹುದಾದ ಸುಸಜ್ಜಿತ ಪ್ರೇಕ್ಷಕ ಗ್ಯಾಲರಿ ನಿರ್ಮಿಸಲಾಗಿದ್ದು, ಅಲ್ಲಿಯೇ ದೊಡ್ಡ ಪರದೆಯ ವ್ಯವಸ್ಥೆಯನ್ನೂ ಮಾಡಲಾಗಿದೆ.

ನೇರ ಪ್ರಸಾರ: ಮನೆಯಲ್ಲಿಯೇ ಕುಳಿತು ಕಾರ್ಯಕ್ರಮ ವೀಕ್ಷಿಸಲು ಸಹ ನೇರ ಪ್ರಸಾರದ ವ್ಯವಸ್ಥೆಯನ್ನು ಮಾಡಲಾಗಿದೆ. ಮೈದಾನದಲ್ಲಿ ಅಚ್ಚುಕಟ್ಟಾದ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಕಾರ್ಯಕ್ರಮವು ನಿಗದಿತ ಸಮಯಕ್ಕೆ ಸರಿಯಾಗಿ ಆರಂಭವಾಗಿ ರಾತ್ರಿ 10 ಗಂಟೆಯೊಳಗೆ ಮುಗಿಯಲಿದೆ ಎಂದರು.

ಪ್ರದರ್ಶನ ನೀಡಲಿರುವ ತಂಡಗಳು : ಮೊದಲನೆಯದಾಗಿ ಟೀಮ್ ಪರಶುರಾಮ, ಪಾಂಡೇಶ್ವರ ಶಾರದಾ ಹುಲಿ, ಶಿವಶಕ್ತಿ ಟೈಗರ್ಸ್ ಮಂಜೇಶ್ವರ, ಲೆಜೆಂಡ್ ಟೈಗರ್ಸ್ ಕುಡ್ಲ, ಕಾರ್ಕಳ ಟೈಗರ್ಸ್, ಟೀಮ್ ಅಗಸ್ತ್ಯ, ಟ್ಯಾಲೆಂಟ್ ಟೈಗರ್ಸ್, ನಂದಿಗುಡ್ಡ ಫ್ರೆಂಡ್ಸ್ ಬಾಬುಗುಡ್ಡ, ಮುಳಿಹಿತ್ಲು ಫ್ರೆಂಡ್ಸ್ ಸರ್ಕಲ್ (ಎಂಎಫ್‌ಸಿ), ಹಾಗೂ ಅಂತಿಮವಾಗಿ ಪುರಲ್ದಪ್ಪೆನ ಮೋಕೆದ ಬೊಳ್ಳಿಲು ಪೊಳಲಿ ಟೈಗರ್ಸ್.

ಪತ್ರಿಕಾಗೋಷ್ಠಿಯಲ್ಲಿ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಗೌರವಾಧ್ಯಕ್ಷ ಗಿರಿಧರ್ ಶೆಟ್ಟಿ, ಅಧ್ಯಕ್ಷ ದಿವಾಕರ್ ಪಾಂಡೇಶ್ವರ, ಪ್ರಮುಖರಾದ ನರೇಶ್ ಶೆಣೈ, ಯತೀಶ್ ಬೈಕಂಪಾಡಿ, ಕಿರಣ್ ಶೆಣೈ, ಅಶ್ವಿತ್ ಕೊಟ್ಟಾರಿ, ಲಲಿತ್ ಮೆಂಡನ್, ಜಗದೀಶ್ ಕದ್ರಿ, ಚೇತನ್ ಕಾಮತ್, ಸಹಾನ್ ಕೋಡಿಕೆರೆ, ಉಪಸ್ಥಿತರಿದ್ದರು.

NO COMMENTS

LEAVE A REPLY

Please enter your comment!
Please enter your name here

Exit mobile version