ಬೆಳಕಿನ ಹಬ್ಬ ದೀಪಾವಳಿ ಸಮೀಪಿಸುತ್ತಿದ್ದಂತೆ, ಊರಿಗೆ ತೆರಳುವವರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಭರ್ಜರಿ ಸಿದ್ಧತೆ ಮಾಡಿಕೊಂಡಿದೆ. ಪ್ರಯಾಣಿಕರ ದಟ್ಟಣೆಯನ್ನು ನಿಭಾಯಿಸಲು ಮತ್ತು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು, KSRTC ಒಟ್ಟು 2500 ಹೆಚ್ಚುವರಿ ಬಸ್‌ಗಳನ್ನು ಕಾರ್ಯಾಚರಣೆಗೆ ಇಳಿಸಿದೆ.
ಈ ವಿಶೇಷ ಸೇವೆ ಅಕ್ಟೋಬರ್ 17 ರಿಂದ 20 ರವರೆಗೆ ಬೆಂಗಳೂರಿನಿಂದ ವಿವಿಧ ಸ್ಥಳಗಳಿಗೆ ಲಭ್ಯವಿರಲಿದ್ದು, ಅಕ್ಟೋಬರ್ 22 ರಿಂದ 26 ರವರೆಗೆ ಹೊರ ರಾಜ್ಯಗಳಿಂದ ಬೆಂಗಳೂರಿಗೆ ಹಿಂತಿರುಗುವ ಪ್ರಯಾಣಿಕರಿಗೂ ಸೇವೆ ನೀಡಲಿದೆ.
ವಿವಿಧ ಮಾರ್ಗಗಳು: ಕೆಂಪೇಗೌಡ ಬಸ್ ನಿಲ್ದಾಣದಿಂದ: ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್, ತಿರುಪತಿ, ವಿಜಯವಾಡ, ಹೈದರಾಬಾದ್.
ಮೈಸೂರು ರಸ್ತೆ ಬಸ್ ನಿಲ್ದಾಣದಿಂದ: ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ, ಮಡಿಕೇರಿ.
ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣದಿಂದ (ಹೊರ ರಾಜ್ಯಗಳಿಗೆ): ಮಧುರೈ, ಕುಂಭಕೋಣಂ, ಚೆನ್ನೈ, ಕೊಯಮತ್ತೂರು, ತಿರುಚಿ, ಪಾಲಕ್ಕಾಡ್, ತ್ರಿಶೂರ್, ಎರ್ನಾಕುಲಂ, ಕೋಯಿಕೋಡ್, ಕ್ಯಾಲಿಕಟ್.
ರಿಯಾಯಿತಿ ಮತ್ತು ಮುಂಗಡ ಬುಕಿಂಗ್ ಸೌಲಭ್ಯ: ಪ್ರಯಾಣಿಕರ ಅನುಕೂಲಕ್ಕಾಗಿ KSRTC ಹಲವು ಆಕರ್ಷಕ ರಿಯಾಯಿತಿಗಳನ್ನು ಘೋಷಿಸಿದೆ
5% ರಿಯಾಯಿತಿ: ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಟಿಕೆಟ್ ಕಾಯ್ದಿರಿಸಿದರೆ.
10% ರಿಯಾಯಿತಿ: ಹೋಗುವ ಮತ್ತು ಬರುವ ಎರಡೂ ಟಿಕೆಟ್‌ಗಳನ್ನು ಒಟ್ಟಿಗೆ ಕಾಯ್ದಿರಿಸಿದರೆ.
ಮುಂಗಡವಾಗಿ ಟಿಕೆಟ್ ಕಾಯ್ದಿರಿಸಲು www.ksrtc.karnataka.gov.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಅಲ್ಲದೆ, ಕರ್ನಾಟಕ ಮತ್ತು ಹೊರ ರಾಜ್ಯಗಳಲ್ಲಿರುವ KSRTC ಬುಕಿಂಗ್ ಕೌಂಟರ್‌ಗಳ ಮೂಲಕವೂ ಟಿಕೆಟ್ ಕಾಯ್ದಿರಿಸುವ ಸೌಲಭ್ಯವಿದೆ. ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಗೋವಾ, ಮಹಾರಾಷ್ಟ್ರ ಮತ್ತು ಪುದುಚೆರಿಯಲ್ಲಿರುವ ಪ್ರಮುಖ ನಗರಗಳಲ್ಲಿಯೂ ಕೌಂಟರ್‌ಗಳು ಲಭ್ಯವಿವೆ.
ಪ್ರಮುಖ ಸೂಚನೆ: ಪ್ರಯಾಣಿಕರು ಬಸ್ ನಿಲ್ದಾಣಕ್ಕೆ ತೆರಳುವ ಮುನ್ನ, ತಮ್ಮ ಟಿಕೆಟ್‌ನಲ್ಲಿ ನಮೂದಿಸಲಾಗಿರುವ ಬಸ್ ನಿಲ್ದಾಣ ಅಥವಾ ಪಿಕ್‌ಅಪ್ ಪಾಯಿಂಟ್‌ನ ಹೆಸರನ್ನು ಸರಿಯಾಗಿ ಪರಿಶೀಲಿಸುವಂತೆ KSRTC ಮನವಿ ಮಾಡಿದೆ. ದೀಪಾವಳಿ ಹಬ್ಬವನ್ನು ಸುರಕ್ಷಿತವಾಗಿ ಮತ್ತು ಸಂತೋಷದಿಂದ ಆಚರಿಸಲು KSRTC ನಿಮ್ಮೊಂದಿಗೆ ಸಿದ್ಧವಾಗಿದೆ.