ಚಿತ್ರದುರ್ಗ: ನೀವು ಬ್ರೇಕ್ ಪಾಸ್ಟ್ ಮಾಡ್ತಿರೋ, ಲಂಚ್ ಮಾಡ್ತಿರೋ ಅಥವಾ ಡಿನ್ನರ್ ಮಾಡ್ತಾರೋ ಗೊತ್ತಿಲ್ಲ. ಅದೆಲ್ಲ ಮಾಡಿ, ಆದರೆ ರೈತರಿಗೆ ನ್ಯಾಯ ಕೂಡ ದೊರಕಿಸಿಕೊಡಿ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಸಿಎಂ ಮತ್ತು ಡಿಸಿಎಂಗೆ ತಾಕೀತು ಮಾಡಿದರು.
ಚಿತ್ರದುರ್ಗದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕದನ ವಿರಾಮ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಇದೇ ರೀತಿ ರಷ್ಯಾ-ಉಕ್ರೇನ್ ಹೇಳಿ ಮೂರು ತಿಂಗಳ ಬಳಿಕ ಪರಸ್ಪರ ಬಾಂಬ್ ಹಾಕಿಕೊಂಡಿದ್ದರು. ಅದೇ ಹಾದಿಯಲ್ಲಿ ಸಿದ್ದು-ಡಿಕೆಶಿ ಇದ್ದಾರೆ ಎಂದು ವ್ಯಂಗ್ಯವಾಡಿದರು.
ಶಾಸಕರು ಮಂತ್ರಿ ಸ್ಥಾನಕ್ಕೆ ದೆಹಲಿಗೆ ಹೋಗುತ್ತಿದ್ದಾರೆ. ಅನುಭವಿ ರಾಜಕಾರಣಿ ಸಿದ್ದರಾಮಯ್ಯ ನಾನೇ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುವ ದುಃಸ್ಥಿತಿಗೆ ತಲುಪಿದ್ದಾರೆ. ಪರಿಣಾಮ ರಾಜ್ಯದಲ್ಲಿ ಅಭಿವೃದ್ಧಿ ಕುಸಿದು, ಆಡಳಿತ ಯಂತ್ರ ಸ್ಥಗಿತವಾಗಿದೆ ಎಂದರು.
ಬ್ರೇಕ್‌ಫಾಸ್ಟ್ ಮಾಡಿಕೊಂಡೇ ಅಧಿಕಾರವಧಿ ಮುಗಿಸುವ ರೀತಿ ಕಾಣುತ್ತಿದೆ. ಈಗಾಗಲೇ 2.5 ವರ್ಷ ಆಗಿದ್ದು, ಉಳಿದ ಅವಧಿಯಲ್ಲಿ ಏನೂ ಮಾಡುವುದಿಲ್ಲ. ರಾಜ್ಯದಲ್ಲಿ 2028ರ ಚುನಾವಣೆಯಲ್ಲಿ ಬಿಹಾರ ಫಲಿತಾಂಶ ಬರಲಿದೆ. ಕಾಂಗ್ರೆಸ್ ಧೂಳಿಪಟ ಆಗಲಿದೆ ಎಂದು ಹೇಳಿದರು.
ಪಕ್ಷಕ್ಕೆ ಹೊಸದಾಗಿ ರಾಷ್ಟ್ರೀಯ ಅಧ್ಯಕ್ಷರು ನೇಮಕಗೊಂಡ ಬಳಿಕ ಎಲ್ಲರ ಅಭಿಪ್ರಾಯ ಪಡೆದು ಉತ್ತಮವಾಗಿ ಕೆಲಸ ಮಾಡುತ್ತಿರುವ ಬಿ.ವೈ. ವಿಜಯೇಂದ್ರ ಅವರನ್ನೇ ಅಧ್ಯಕ್ಷರಾಗಿ ಮುಂದುರಿಸಬೇಕೆಂಬುದು ನಮ್ಮ ಒತ್ತಾಸೆ ಎಂದರು.
