Home ನಮ್ಮ ಜಿಲ್ಲೆ ಚಿಕ್ಕಬಳ್ಳಾಪುರ 2028ಕ್ಕೆ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ!

2028ಕ್ಕೆ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ!

0

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಅಭಿವೃದ್ಧಿಯ ಸಂಗಮವಾಗಿದೆ. 2 ಸಾವಿರ ಕೋಟಿ ರೂ. ಮೊತ್ತದ ಅಭಿವೃದ್ಧಿ ಕೆಲಸವನ್ನು ವಿರೋಧ ಪಕ್ಷದ ಶಾಸಕರ ಕ್ಷೇತ್ರಕ್ಕೆ ಕಾಂಗ್ರೆಸ್ ಸರ್ಕಾರ ನೀಡುತ್ತಿದೆ ಎಂದರೆ ನಮ್ಮ ಜನಪರ ಧೋರಣೆಯನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಈ ಕ್ಷೇತ್ರದ ಅಭಿವೃದ್ಧಿಗೆ ಇಡೀ ಸರ್ಕಾರವೇ ಬಂದಿದೆ ಎಂದರೆ ನಮಗೆ ಜನರ ಮೇಲಿನ ಪ್ರೀತಿಯೇ ಕಾರಣವಾಗಿದೆ ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಮುಕಾರ ಹೇಳಿದ್ದಾರೆ.

ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಹನುಮಂತಪುರ ಗ್ರಾಮದಲ್ಲಿ ಆಯೋಜಿಸಿದ್ದ, ಚಿಕ್ಕಬಳ್ಳಾಪುರ ಹೈಟೆಕ್‌ ಗೂಡಿನ ಮಾರುಕಟ್ಟೆ, ಹೆಚ್‌.ಎನ್‌ ವ್ಯಾಲಿ 3ನೇ ಹಂತದ 164 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮತ್ತು ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ವಿವಿಧ ಫಲಾನುಭವಿಗಳಿಗೆ ಸವಲತ್ತುಗಳ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಸಚಿವರಾದ ಕೆ.ಎಚ್.ಮುನಿಯಪ್ಪ ಅವರು, ಸುಧಾಕರ್ ಅವರು ಹಾಗೂ ಕೃಷ್ಣಬೈರೇಗೌಡರು ನನ್ನ ಬೆನ್ನತ್ತಿದ್ದು, 2027 ರ ಹೊತ್ತಿಗೆ ಎರಡು ಜಿಲ್ಲೆಗಳಿಗೆ ಎತ್ತಿನಹೊಳೆ ನೀರು ಹರಿಸಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇದಕ್ಕೆ ಪೂರಕವಾಗಿ ನಾವು ಕೆಲಸ ಮಾಡುತ್ತಿದ್ದೇವೆ. ನಾವು ಪರ್ಯಾಯವಾಗಿ ಕಂದಾಯ ಭೂಮಿ ನೀಡಿದ್ದರೂ ಕೇಂದ್ರ ಪರಿಸರ ಇಲಾಖೆ ಅರಣ್ಯ ಭೂಮಿ ಬಳಕೆಗೆ ಅನುಮತಿ ನೀಡುತ್ತಿಲ್ಲ.

ಕೆ. ಸಿ. ವ್ಯಾಲಿ ಯೋಜನೆಯ ಮೊದಲ ಹಂತದಲ್ಲಿ 143 ಕೆರೆ ತುಂಬಿಸಲಾಗಿದೆ. 2ನೇ ಹಂತದಲ್ಲಿ 272 ಕೆರೆ ಭರ್ತಿ ಮಾಡುತ್ತಿದ್ದೇವೆ. ಈ ಯೋಜನೆಯನ್ನು ವಿಶ್ವಬ್ಯಾಂಕ್ ಕೂಡ ಹೊಗಳಿದೆ. ಹೆಚ್. ಎನ್. ವ್ಯಾಲಿ ಯೋಜನೆಯ ಮೊದಲ ಹಂತದಲ್ಲಿ 65 ಕೆರೆಗಳನ್ನು ತುಂಬಿಸುವ ಕೆಲಸ ಮಾಡಿದ್ದೇವೆ. ಬೆಂಗಳೂರಲ್ಲಿ ಕೆರೆಗಳ ಇಂಟರ್‌ಲಿಂಕ್ ಮಾಡೋಕೆ ಅಂತ 1700 ಕೋಟಿ ರೂಪಾಯಿ ಮೊತ್ತದ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ನೆಲಮಂಗಲದಲ್ಲಿ ವೃಷಭಾವತಿಯಿಂದ 70 ಕೆರೆ ತುಂಬಿಸಲಾಗುತ್ತಿದೆ.

ಕೆರೆಗಳನ್ನು ತುಂಬಿಸುವುದು ನಮ್ಮ ಕಾಂಗ್ರೆಸ್ ಸರ್ಕಾರದ ಆರನೇ ಗ್ಯಾರಂಟಿ. ವ್ಯವಸಾಯಕ್ಕೆ ಹಾಗೂ ಕುಡಿಯುವುದಕ್ಕೆ ನೀರನ್ನು ನೀಡುವುದೇ ನಮ್ಮ ಉದ್ದೇಶ. ಏಳನೇ ಗ್ಯಾರಂಟಿಯಾಗಿ 1,11,11,111 ಜನರಿಗೆ ಖಾತೆಗಳನ್ನು ನೀಡಿ ಭೂಮಿ ಗ್ಯಾರಂಟಿ ನೀಡಿದ್ದೇವೆ.

ಚಿಕ್ಕಬಳ್ಳಾಪುರ ಮತ್ತು ಕೋಲಾರದ ಜನತೆ ಬಗ್ಗೆ ನನಗೆ ಅಪಾರ ಗೌರವ. ಏಕೆಂದರೆ ನೀವು ಶ್ರಮ ಜೀವಿಗಳು, ನೀರಿನ ಬೆಲೆ ಅರಿತಿರುವವರು. ತರಕಾರಿ, ಹೂ, ಹಣ್ಣು ಸೇರಿದಂತೆ ಅನೇಕ ಕೃಷಿ ಉತ್ಪನ್ನಗಳನ್ನು ರಾಜ್ಯಕ್ಕೆ ನೀಡುತ್ತಿರುವವರು. ಅಶುದ್ಧ ನೀರನ್ನು ಶುದ್ಧೀಕರಣಗೊಳಿಸಿ ಅದನ್ನು ನಿಮ್ಮ ಕೆರೆಗಳಿಗೆ ಹರಿಸುವ ಕೆಲಸ ಮಾಡಲಾಗುತ್ತಿದೆ. ಇಡೀ ದೇಶವೇ ಈ ಯೋಜನೆಯನ್ನು ಹೊಗಳುತ್ತಿದೆ.

ಶಿಡ್ಲಘಟ್ಟದ ನೀರು ಅತ್ಯುತ್ತಮವಾದುದು, ರೇಷ್ಮೆ ನೂಲು ಉತ್ತಮವಾಗಿ ಬರುತ್ತದೆ ಎಂದು ಇಲ್ಲಿಂದ ಟ್ಯಾಂಕರ್‌ನಲ್ಲಿ ನೀರು ತಂದು ನಮ್ಮ ಊರಿನಲ್ಲಿ ನೂಲು ತೆಗೆಯಲಾಗುತ್ತದೆ. ಚೈನಾದಿಂದ ರೇಷ್ಮೆ ಆಮದು ಕಡಿಮೆಯಾದ ಕಾರಣಕ್ಕೆ ನಮ್ಮ ರೇಷ್ಮೆಗೆ ಅತ್ಯುತ್ತಮ ಬೆಲೆ ಬಂದಿದೆ.

ದೇವರು ನಮಗೆ ಕೊಟ್ಟಿರುವುದು ಎರಡು, ಒಂದು ಕೊಟ್ಟು ಹೋಗುವುದು, ಮತ್ತೊಂದು ಬಿಟ್ಟು ಹೋಗುವುದು, ಹಾಗೆಯೇ ಏನೇನು ಕೊಡಬೇಕೋ ಅದನ್ನು ಕೊಟ್ಟು ಹೋಗುತ್ತಿದ್ದೇವೆ, ಈ ಕ್ಷೇತ್ರಕ್ಕೆ ಏನೇನು ಬೇಕೋ ಅದನ್ನು ಬಿಟ್ಟು ಹೋಗುತ್ತಿದ್ದೇವೆ. ನಿಮ್ಮ ಆಶೀರ್ವಾದ ಸದಾ ನಮ್ಮ ಮೇಲಿರಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.

NO COMMENTS

LEAVE A REPLY

Please enter your comment!
Please enter your name here

Exit mobile version