Home ನಮ್ಮ ಜಿಲ್ಲೆ ಬೆಂಗಳೂರು ಬೆಂಗಳೂರು ರಸ್ತೆ ಗುಂಡಿ ಮುಚ್ಚಿದ ಬಿಜೆಪಿ ನಾಯಕರು!

ಬೆಂಗಳೂರು ರಸ್ತೆ ಗುಂಡಿ ಮುಚ್ಚಿದ ಬಿಜೆಪಿ ನಾಯಕರು!

0

ಬೆಂಗಳೂರು ನಗರದಲ್ಲಿ ಹದಗೆಟ್ಟ ರಸ್ತೆಗಳಿಂದ ಸಾರ್ವಜನಿಕರು ರೋಸಿ ಹೋಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ನಿಷ್ಕ್ರಿಯತೆ ವಿರುದ್ಧ ಸಿಡಿದೆದ್ದ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ನಗರದೆಲ್ಲೆಡೆ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಅನೇಕ ಕಡೆಗಳಲ್ಲಿ ಸ್ವತಃ ತಾವೇ ಜಲ್ಲಿ, ಮರಳು, ಸಿಮೆಂಟ್ ಹಾಗೂ ಟಾರು ಸುರಿದು ರಸ್ತೆಗಳನ್ನು ದುರಸ್ತಿಗೊಳಿಸಿದರು.

ಪ್ರತಿಪಕ್ಷ ನಾಯಕ ಆರ್.ಅಶೋಕ, ಛಲವಾದಿ ನಾರಾಯಣಸ್ವಾಮಿ, ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ, ಎಸ್.ಆರ್.ವಿಶ್ವನಾಥ್, ಉದಯ್‌ ಗರುಡಾಚಾರ್, ಕೆ.ಸಿ. ರಾಮಮೂರ್ತಿ, ಪಿ.ಸಿ.ಮೋಹನ್ ಸೇರಿ ಅನೇಕ ಮುಖಂಡರು ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿ, ರಸ್ತೆ ದುರಸ್ತಿ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಗರದೆಲ್ಲೆಡೆ ಸಾವಿರಾರು ಬಿಜೆಪಿ ಕಾರ್ಯಕರ್ತರು ರಸ್ತೆ ತಡೆ ನಡೆಸಿದ್ದರಿಂದ ಹಲವೆಡೆ ರಸ್ತೆ ಸಂಚಾರ ಅಸ್ತವ್ಯಸ್ಥಗೊಂಡಿತ್ತು. ಬಿಜೆಪಿ ಕಾರ್ಯಕರ್ತರು, ರಸ್ತೆ ತಡೆ ನಡೆಸಿದರೂ ಸಂಚಾರ ಪೊಲೀಸರು ಅನಿವಾರ್ಯವಾಗಿ ಸಹಿಸಿಕೊಳ್ಳಬೇಕಾಯಿತು. ಅನೇಕ ಕಡೆಗಳಲ್ಲಿ ಹದಗೆಟ್ಟ ರಸ್ತೆಗಳಿಂದ ಸಂಚಾರ ಪೊಲೀಸರೂ ಸಂಚಾರ ನಿಯಂತ್ರಣಕ್ಕೆ ಹರಸಾಹಸ ಮಾಡಬೇಕಾಯಿತು.

ಬನಶಂಕರಿಯಲ್ಲಿ ಅಶೋಕ್ ಧರಣಿ: ರಸ್ತೆ ಗುಂಡಿಗಳನ್ನು ಮುಚ್ಚುವಲ್ಲಿ ಸಂಪೂರ್ಣ ನಿರ್ಲಕ್ಷ್ಯವಹಿಸಿದ ಹಾಗೂ ಅಭಿವೃದ್ಧಿಯನ್ನು ಕಡೆಗಣಿಸಿದ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬನಶಂಕರಿಯ ಕಾಮಾಕ್ಯ ಲೇಔಟ್ ಬಳಿ ಪ್ರತಿಪಕ್ಷದ ನಾಯಕ ಆರ್.ಅಶೋಕ ನೇತೃತ್ವದಲ್ಲಿ ಸಂಚಾರ ತಡೆ ಚಳವಳಿ ನಡೆಸಲಾಯಿತು. ಶಾಸಕ ಎಲ್.ಎ. ರವಿಸುಬ್ರಮಣ್ಯ ಪಾಲ್ಗೊಂಡಿದ್ದರು.

“ರಸ್ತೆ ಗುಂಡಿ ಮುಚ್ಚಲು 1,100 ಕೋಟಿ ರೂ. ಬಿಡುಗಡೆ ಮಾಡಿದ್ದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಎಲ್ಲಿ ಮಾಡಿದ್ದೀರಿ? ಯಾರಿಗೆ ಕೊಟ್ಟಿದ್ದೀರಿ? ಎಂಬುದನ್ನು ಬೆಂಗಳೂರು ನಗರದ ಜನರಿಗೆ ಲೆಕ್ಕ ಕೊಡಿ” ಎಂದು ವಿಧಾನಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು.

ಸದಾಶಿವ ನಗರದ 18ನೇ ಕ್ರಾಸ್‌ನಲ್ಲಿ ಗುಂಡಿ ಮುಚ್ಚುವ ಅಭಿಯಾನದ ವೇಳೆ ಮಾತನಾಡಿ, “ಸುಮ್ಮನೆ ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಬೇಡಿ. ಡಿಸಿಎಂ ಶಿವಕುಮಾರ್ ಅವರಿಗೆ ಪ್ರಧಾನಿ ಮನೆ ಮುಂದೆ ಗುಂಡಿ ಇರುವುದು ಕನಸಿನಲ್ಲಿ ಬರುತ್ತದೆ. ನೀವು ಯಾವಾಗ ನೋಡಿದ್ದೀರಿ?, ನಿಮ್ಮ ಮನೆ ಮುಂದೆ ಇರುವ ಗುಂಡಿ ಇವತ್ತು ನಾವು ಮುಚ್ಚಿದ್ದೇವೆ. ಬಂದು ನೋಡಿ” ಎಂದು ತಿರುಗೇಟು ನೀಡಿದರು.

ಗಾಂಧಿನಗರದಲ್ಲೂ ಪ್ರತಿಭಟನೆ: ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಹದಗೆಟ್ಟ ರಸ್ತೆಯಿಂದ ಜನರು ಹೈರಾಣಾಗಿದ್ದು ವೃದ್ಧರು, ಮಕ್ಕಳು ಮತ್ತು ಮಹಿಳೆಯರು ಸಂಚರಿಸುವುದಕ್ಕೆ ದುಸ್ಸಾಹಸ ಪಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಕಾರ್ಯಕರ್ತರು ಬೆಂಗಳೂರು ಕೇಂದ್ರ ಸಂಸದ ಪಿ.ಸಿ. ಮೋಹನ್ ನೇತೃತ್ವದಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯಕ್ರಮ ನಡೆಸಿದರು. ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿಗೌಡ ಇದ್ದರು. ಮಹಾಲಕ್ಷ್ಮೀ ಲೇಔಟ್‌ನ ಕಂಠೀರವ ಸ್ಟುಡಿಯೋ ಬಳಿ ಬಿಜೆಪಿ ವತಿಯಿಂದ ರಸ್ತೆ ತಡೆ ಚಳವಳಿ ನಡೆಸಲಾಯಿತು. ಮಾಜಿ ಶಾಸಕ ನೆ.ಲ. ನರೇಂದ್ರಬಾಬು, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್‌. ಹರೀಶ್‌, ರಾಜ್ಯ ಮಾಧ್ಯಮ ಪ್ರಕೋಷ್ಠದ ಸಹ ಸಂಚಾಲಕ ಪ್ರಶಾಂತ್‌ ಕಡೆಂಜಿ ಮತ್ತು ಪಕ್ಷದ ಕಾರ್ಯತ್ರರು ಪಾಲ್ಗೊಂಡಿದ್ದರು.

ರಸ್ತೆ ಗುಂಡಿ ಮುಚ್ಚುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಎಂದು ಆರೋಪಿಸಿ ಕೆ.ಆರ್.ಪುರ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ತಮ್ಮ ಸ್ವಂತ ಖರ್ಚಿನಲ್ಲಿ ಬಸವನಪುರ ಮುಖ್ಯರಸ್ತೆಯಲ್ಲಿ ಬಿದ್ದಿರುವ ಗುಂಡಿಗಳಿಗೆ ಜಲ್ಲಿ, ಸಿಮೆಂಟ್ ಸುರಿದು ಗುಂಡಿಗಳನ್ನು ಮುಚ್ಚುವ ಮೂಲಕ ವಿನೂತನವಾಗಿ ಪ್ರತಿಭಟನೆ ಮಾಡಿದರು. ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಪಾಲಿಕೆ ಮಾಜಿ ಸದಸ್ಯ ಬಿ.ಎನ್.ಜಯಪ್ರಕಾಶ್, ಬೆಂಗಳೂರು ನಗರದಲ್ಲಿ ರಸ್ತೆಗುಂಡಿಗಳಿಂದಾಗಿ ಸಂಚಾರ ದಟ್ಟಣೆ ಹಾಗೂ ಅಪಘಾತ ಸಂಭವಿಸುತ್ತಿದ್ದು, ಜನರು ಇದರಿಂದ ತೊಂದರೆಗೀಡಾಗಿದ್ದಾರೆ. ಬಾಂಡ್ ಬೆಂಗಳೂರು ಮಾಡುತ್ತೇವೆ ಎಂದು ಹೇಳಿದ ಸರ್ಕಾರ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚದೆ ದಿವ್ಯ ನಿರ್ಲಕ್ಷ್ಯ ವಹಿಸಿದೆ. ಗುಂಡಿಗಳಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿನ ಮಾನ ಹರಾಜು ಹಾಕುವ ಸ್ಥಿತಿಗೆ ಸರ್ಕಾರ ಬಂದಿದೆ ಎಂದು ಆರೋಪಿಸಿದರು.

NO COMMENTS

LEAVE A REPLY

Please enter your comment!
Please enter your name here

Exit mobile version