Namma Metro. ಬೆಂಗಳೂರು ಜನರಿಗೆ ಸಿಹಿಸುದ್ದಿ. ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಸಂಚಾರ ನಡೆಸಲು 5ನೇ ರೈಲಿನ ಮೂರು ಬೋಗಿಗಳು ನಗರಕ್ಕೆ ಆಗಮಿಸಿವೆ. ಈಗಾಗಲೇ ಮಾರ್ಗದಲ್ಲಿ 4 ರೈಲುಗಳು ಸಂಚಾರವನ್ನು ನಡೆಸುತ್ತಿವೆ.
ಕೋಲ್ಕತ್ತಾದ ಟಿಟಾಗರ್‌ನಿಂದ ಬಿಎಂಆರ್‌ಸಿಎಲ್‌ನ ಹೆಬ್ಬಗೋಡಿ ಮೆಟ್ರೋ ಡಿಪೋಗೆ 3 ಬೋಗಿಗಳು ಸೋಮವಾರ ರಾತ್ರಿ ಆಗಮಿಸಿವೆ. ಇನ್ನೂ 2 ಬೋಗಿ ಇಂದು ರಾತ್ರಿ ಅಥವ ಬುಧವಾರ ಬೆಳಗ್ಗೆ ಆಗಮಿಸಲಿವೆ.
ಸೆಪ್ಟೆಂಬರ್ 19ರಂದು ಈ ಬೋಗಿಗಳು ಪಶ್ಚಿಮ ಬಂಗಾಳದಿಂದ ಹೊರಟಿದ್ದವು. ಅಧಿಕಾರಿಗಳ ಮಾಹಿತಿ ಪ್ರಕಾರ 15 ರಿಂದ 30 ದಿನಗಳವರೆಗೆ ಮೆಟ್ರೋ ರೈಲು ಟ್ರಯಲ್ ರನ್ ನಡೆಯಲಿದೆ. ಟ್ರಯಲ್ ರನ್ ಯಶಸ್ವಿಯಾದ ನಂತರವೇ ಮೆಟ್ರೋ ರೈಲು ಸಂಚಾರ ಆರಂಭವಾಗಲಿದೆ.
ಇದು ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಸಂಚಾರ ನಡೆಸುವ 5ನೇ ರೈಲಾಗಿದೆ. ಆರ್.ವಿ.ರಸ್ತೆ -ಬೊಮ್ಮಸಂದ್ರ ಮಾರ್ಗದಲ್ಲಿ 5ನೇ ರೈಲು ಸಂಚರಿಸದ್ದು, ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಸದ್ಯ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ 4 ರೈಲು ಸಂಚರಿಸುತ್ತಿವೆ.
ಆ.10ರಂದು ಪ್ರಧಾನಿ ನರೇಂದ್ರ ಮೋದಿ ಹಳದಿ ಮಾರ್ಗ ಉದ್ಘಾಟಿಸಿದ್ದರು. ಆಗಸ್ಟ್ 11ರಂದು ವಾಣಿಜ್ಯ ಸಂಚಾರ ಆರಂಭವಾಗಿತ್ತು. ಮೊದಲು ಕೇವಲ ಮೂರು ರೈಲು ಪ್ರತಿ 25 ನಿಮಿಷಕ್ಕೊಮ್ಮೆ ಸಂಚಾರ ಮಾಡುತ್ತಿತ್ತು. 4ನೇ ರೈಲು ಸಂಚಾರ ಆರಂಭವಾದ ಬಳಿಕ ರೈಲು ಸಂಚಾರದ ಅವಧಿ 19 ನಿಮಿಷಕ್ಕೆ ಕಡಿಮೆಯಾಗಿದೆ.
5ನೇ ಮೆಟ್ರೋ ರೈಲು ಸಂಚಾರ ಆರಂಭವಾದರೆ 15 ನಿಮಿಷಕ್ಕೊಂದು ರೈಲು ಸಂಚಾರ ನಡೆಸಲಿದೆ. ಇದರಿಂದಾಗಿ ಹಳದಿ ಮಾರ್ಗದಲ್ಲಿ ಸಂಚಾರ ನಡೆಸುವ ಟೆಕ್ಕಿಗಳಿಗೆ ಅನುಕೂಲವಾಗಲಿದೆ.
ಸದ್ಯ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಸುಮಾರು 80,000 ಪ್ರಯಾಣಿಕರು ಪ್ರತಿದಿನ ಸಂಚಾರವನ್ನು ನಡೆಸುತ್ತಿದ್ದಾರೆ. 5ನೇ ರೈಲು ಸಂಚಾರ ಆರಂಭಿಸಿದರೆ ಈ ಸಂಖ್ಯೆ 90,000ಕ್ಕೆ ಏರಿಕೆಯಾಗಲಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ನಮ್ಮ ಮೆಟ್ರೋ ಹಳದಿ ಮಾರ್ಗ ಎಲೆಕ್ಟ್ರಾನಿಕ್ ಸಿಟಿಗೆ ಸಂಪರ್ಕ ಕಲ್ಪಿಸುತ್ತದೆ. ಆದ್ದರಿಂದ ಇದು ಬೆಂಗಳೂರು ನಗರದ ಪ್ರಮುಖ ಮೆಟ್ರೋ ಮಾರ್ಗವಾಗಿದೆ. ಈ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭವಾದ ಬಳಿಕ ಸೆಂಟ್ರಲ್ ಸಿಲ್ಕ್ ಬೋರ್ಡ್ ಮತ್ತು ಇತರ ಪ್ರದೇಶದಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಿದೆ ಎಂದು ಸಂಚಾರಿ ಪೊಲೀಸರ ಸಮೀಕ್ಷೆ ಹೇಳಿದೆ.