Home ನಮ್ಮ ಜಿಲ್ಲೆ ಬೆಂಗಳೂರು ಮುನಿರತ್ನ ವರ್ಸಸ್ ಡಿಕೆಶಿ: ರಾಜಕೀಯ ಜಟಾಪಟಿ ಮತ್ತಷ್ಟು ತೀವ್ರ

ಮುನಿರತ್ನ ವರ್ಸಸ್ ಡಿಕೆಶಿ: ರಾಜಕೀಯ ಜಟಾಪಟಿ ಮತ್ತಷ್ಟು ತೀವ್ರ

0

ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ರಾಜಕೀಯ ವಲಯದಲ್ಲಿ ಮತ್ತೊಮ್ಮೆ ಕಾವು ಏರಿದೆ. ಬಿಜೆಪಿ ಶಾಸಕ ಮುನಿರತ್ನಂ ನಾಯ್ಡು ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ಮುಸುಕಿನ ಗುದ್ದಾಟ ಇದೀಗ ಬಹಿರಂಗ ಜಟಾಪಟಿಗೆ ತಿರುಗಿದೆ.

ಇತ್ತೀಚೆಗೆ ಸಾರ್ವಜನಿಕ ಸಂವಾದ ಕಾರ್ಯಕ್ರಮವೊಂದರಲ್ಲಿ ನಡೆದ ಘಟನೆಯೊಂದು ಈ ಇಬ್ಬರು ನಾಯಕರ ನಡುವಿನ ವೈರತ್ವವನ್ನು ಮತ್ತಷ್ಟು ಹೆಚ್ಚಿಸಿದೆ.

ಸಾರ್ವಜನಿಕ ಸಂವಾದದಲ್ಲಿ ಗದ್ದಲ: ಡಿ.ಕೆ. ಶಿವಕುಮಾರ್ ರಾಜರಾಜೇಶ್ವರಿ ನಗರದಲ್ಲಿ ಸಾರ್ವಜನಿಕರೊಂದಿಗೆ ಸಂವಾದ ನಡೆಸುತ್ತಿದ್ದಾಗ, ಶಾಸಕ ಮುನಿರತ್ನಂ ಮತ್ತು ಅವರ ಬೆಂಬಲಿಗರು ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ್ದಾರೆ. ಈ ಘಟನೆಯಿಂದ ತೀವ್ರ ಬೇಸರಗೊಂಡ ಡಿ.ಕೆ. ಶಿವಕುಮಾರ್, ಮುನಿರತ್ನಂ ವರ್ತನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

“ರಾಜರಾಜೇಶ್ವರಿ ಕ್ಷೇತ್ರದ ಜನಪ್ರತಿನಿಧಿ ವರ್ತನೆ ನೋಡಿದರೆ, ನೀವು ಎಂತಹ ನರಕದಲ್ಲಿ ಬದುಕುತ್ತಿದ್ದೀರಿ ಎನಿಸುತ್ತಿದೆ. ಇಂತಹ ಶಾಸಕರನ್ನು ಆಯ್ಕೆ ಮಾಡಿಕೊಂಡ ನಿಮ್ಮ ಪರಿಸ್ಥಿತಿ ನನಗೆ ಅರ್ಥವಾಗುತ್ತದೆ” ಎಂದು ಡಿಕೆಶಿ ಸಾರ್ವಜನಿಕರ ಮುಂದೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಡಿಕೆಶಿ ಆಕ್ರೋಶದ ನುಡಿಗಳು: ಮುನಿರತ್ನಂಗೆ ತಾಳ್ಮೆಯಿಲ್ಲ, ಕಾರ್ಯಕ್ರಮವನ್ನು ಹಾಳುಮಾಡಬೇಕು ಎಂಬ ಉದ್ದೇಶದಿಂದಲೇ ಬಂದಿದ್ದರು ಎಂದು ಡಿಕೆಶಿ ಆರೋಪಿಸಿದ್ದಾರೆ. ಇದಕ್ಕೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ, ನೀವೂ ತಲೆಕೆಡಿಸಿಕೊಳ್ಳಬೇಡಿ. ಇಂತಹವರನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ನಿಮ್ಮ ಮನಸ್ಸಿಗೆ ಬಹಳ ನೋವಾಗುತ್ತಿದೆ ಎಂದು ನನಗೆ ಚೆನ್ನಾಗಿ ಗೊತ್ತಿದೆ. ಇದಕ್ಕೆಲ್ಲಾ ಸೂಕ್ತ ಸಮಯದಲ್ಲಿ ಉತ್ತರ ನೀಡಿ ಎಂದು ಕ್ಷೇತ್ರದ ಜನರಿಗೆ ಕರೆ ನೀಡಿದ್ದಾರೆ.

ರಾಜಕಾರಣದಲ್ಲಿ ಸೋಲು-ಗೆಲುವು ಸಹಜ, ಯಾವುದು ಶಾಶ್ವತವಲ್ಲ ಎಂದು ಹೇಳಿದ ಡಿಕೆಶಿ, ಶಾಸಕರ ವರ್ತನೆಯ ಬಗ್ಗೆ ಜನರು ತೀರ್ಮಾನ ತೆಗೆದುಕೊಳ್ಳಬೇಕು ಎಂದಿದ್ದಾರೆ.

RSS ಪ್ರಸ್ತಾಪ ಮತ್ತು ವಿವಾದ: ಕಾರ್ಯಕ್ರಮಕ್ಕೆ ಅಡ್ಡಿಪಡಿಸುವಾಗ RSS ಸಂಘಟನೆಯ ಟೋಪಿ ಮತ್ತು ಸಮವಸ್ತ್ರ ಧರಿಸಿ ಬಂದಿದ್ದರ ಬಗ್ಗೆಯೂ ಡಿಕೆಶಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ಅವರಿಗೆ ರಾಜಕೀಯ ಮುಖ್ಯ. ಅವರು RSS ಸಂಸ್ಥೆಗೆ ಅಗೌರವ ತೋರುವ ಕೆಲಸ ಮಾಡಿದ್ದಾರೆ.

RSS ಗೂ ಈ ಕಾರ್ಯಕ್ರಮಕ್ಕೂ ಏನು ಸಂಬಂಧ? ಇಲ್ಲಿಗೆ ಆ ಸಂಸ್ಥೆಯ ಟೋಪಿ, ಸಮವಸ್ತ್ರ ಧರಿಸಿ ಬರುವ ಅವಶ್ಯಕತೆ ಏನಿತ್ತು? ಆ ಸಂಸ್ಥೆ ತನ್ನದೇ ಆದ ಕೆಲಸ ಮಾಡುತ್ತಿದೆ. ಅವರು ಮಾಡಿದ ಕೆಲಸ ನನಗೆ ಮಾಡಿದ ಅವಮಾನವಲ್ಲ, ಆ ಸಂಸ್ಥೆಗೆ ಮಾಡಿದ ಅವಮಾನ. ಅದಕ್ಕೆ ಒಂದು ಇತಿಹಾಸವಿದೆ” ಎಂದು ಡಿಕೆಶಿ ಹೇಳಿದ್ದಾರೆ.

ಶಾಸಕರ ವರ್ತನೆಯಿಂದ ಜನರಿಗೆ ಅಷ್ಟು ರೋಷ ಬಂದಿತ್ತು, ನಾಗರಿಕರೇ ಅವರನ್ನು ಒಡೆದು ಓಡಿಸುತ್ತಿದ್ದರು ಎಂದು ಡಿಕೆಶಿ ಹೇಳಿಕೆ ನೀಡಿದ್ದು, ಇದು ರಾಜಕೀಯ ವಲಯದಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version