Home ನಮ್ಮ ಜಿಲ್ಲೆ ಬೆಂಗಳೂರು ‘ಪುಷ್ಪಲೋಕʼದ ಸೊಬಗಿಗೆ ಮಾರುಹೋದ ಬೆಂಗಳೂರು: ರೂ.10 ಲಕ್ಷ ಟಿಕೆಟ್ ಸಂಗ್ರಹ, ಭರ್ಜರಿ ಹಿಟ್!

‘ಪುಷ್ಪಲೋಕʼದ ಸೊಬಗಿಗೆ ಮಾರುಹೋದ ಬೆಂಗಳೂರು: ರೂ.10 ಲಕ್ಷ ಟಿಕೆಟ್ ಸಂಗ್ರಹ, ಭರ್ಜರಿ ಹಿಟ್!

0

ಬೆಂಗಳೂರು: ಸಿಲಿಕಾನ್ ಸಿಟಿಯ ಹೆಗ್ಗುರುತುಗಳಲ್ಲಿ ಒಂದಾದ ಕಬ್ಬನ್ ಉದ್ಯಾನದಲ್ಲಿ ಆಯೋಜಿಸಿರುವ ಹೂವುಗಳ ಹಬ್ಬ (Flower Show) ವೀಕ್ಷಕರನ್ನು ಅಪಾರವಾಗಿ ಆಕರ್ಷಿಸುತ್ತಿದೆ. ಕೇವಲ ನಾಲ್ಕು ದಿನಗಳಲ್ಲಿ ಎರಡು ಲಕ್ಷಕ್ಕೂ ಅಧಿಕ ಮಂದಿ ಪುಷ್ಪಲೋಕಕ್ಕೆ ಭೇಟಿ ನೀಡಿ ಕಣ್ತುಂಬಿಕೊಳುತ್ತಿದ್ದಾರೆ.

ಗುರುವಾರದಿಂದ ಆರಂಭಗೊಂಡು ಭಾನುವಾರದವರೆಗೆ ಈ ಹಬ್ಬಕ್ಕೆ ಜನಸಂದಣಿ ಹರಿದು ಬಂದಿದೆ. ಉದ್ಘಾಟನಾ ದಿನವಾದ ಗುರುವಾರ 33,500 ಮಂದಿ ಭೇಟಿ ನೀಡಿದರು. ಶುಕ್ರವಾರ ಈ ಸಂಖ್ಯೆ 43,500ಕ್ಕೆ ಏರಿತು. ಶನಿವಾರವು ವಾರಾಂತ್ಯದ ರಜೆಯ ಪರಿಣಾಮ ಬರೋಬ್ಬರಿ 75,084 ಆಸಕ್ತರು ಹೂವುಗಳಲ್ಲಿ ಮೂಡಿದ ಕಲಾಕೃತಿಗಳನ್ನು ವೀಕ್ಷಿಸಿದರು.

ಜೊತೆಗೆ ನೋಡುಗರು ಸಂತಸ ವ್ಯಕ್ತ ಪಡಿಸಿದ್ದಾರೆ. ಭಾನುವಾರ ಬೆಳಿಗ್ಗೆ ತಣ್ಣನೆಯ ಮಳೆ ಸುರಿದ ಕಾರಣ ವೀಕ್ಷಕರ ಸಂಖ್ಯೆ ತುಸು ಕಡಿಮೆಯಾದರೂ, 64,410 ಜನರು ಪುಷ್ಪ ಪ್ರದರ್ಶನವನ್ನು ವೀಕ್ಷಿಸಿದ್ದಾರೆ. ಇದುವರೆಗೆ ಟಿಕೆಟ್ ಸಂಗ್ರಹದಿಂದ ಒಟ್ಟು ₹10,72,820 ಆದಾಯ ಬಂದಿದೆ ಎಂದು ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಲಾ ಸೌಂದರ್ಯ: ಹೂವುಗಳ ಹಬ್ಬದಲ್ಲಿ ಪ್ರದರ್ಶಿಸಲಾದ ವಿಶೇಷ ಮತ್ತು ಕಲಾತ್ಮಕ ಮಾದರಿಗಳು ಎಲ್ಲರ ಗಮನ ಸೆಳೆದಿವೆ. ಹೂವುಗಳನ್ನು ಬಳಸಿ ರಚಿಸಲಾದ ಹಂಪಿಯ ಕಲ್ಲಿನ ರಥ, ಹಾಗೂ ಹೂವು, ಹಾಗಲಕಾಯಿ ಮತ್ತು ಕ್ಯಾಪ್ಸಿಕಮ್‌ನಂತಹ ತರಕಾರಿಗಳನ್ನು ಉಪಯೋಗಿಸಿ ನಿರ್ಮಿಸಿದ ಸುಂದರವಾದ ಆನೆಯ ಕಲಾಕೃತಿಗಳು ಪ್ರಮುಖ ಆಕರ್ಷಣೆಯಾಗಿದ್ದವು.

ಅಲ್ಲದೆ, ಹಳದಿ ಮತ್ತು ಕೆಂಪು ಬಣ್ಣದ ಹೂವುಗಳಲ್ಲಿ ಮೂಡಿಬಂದಿರುವ ಕರ್ನಾಟಕದ ನಕ್ಷೆಯ ಮಾದರಿ ವೀಕ್ಷಕರಿಗೆ ವಿಶೇಷ ಅನುಭವ ನೀಡಿತು.

ಇದೇ ವೇಳೆ, ಜಿಂಕೆ, ಅನಾನಸು, ಸೇಬು ಹಣ್ಣು, ಮತ್ತು ಬೃಹತ್ ಸೂರ್ಯಕಾಂತಿ ಹೂವಿನ ಮಾದರಿಗಳ ಮುಂದೆ ನಿಂತು ಮಕ್ಕಳು ಮತ್ತು ಹಿರಿಯರು ಫೋಟೋ ಮತ್ತು ಸೆಲ್ಫಿಗಳನ್ನು ತೆಗೆದುಕೊಂಡು ಸಂಭ್ರಮಿಸಿದರು.

ಬ್ಯಾಂಡ್ ಸ್ಟ್ಯಾಂಡ್ ಆವರಣದಲ್ಲಿರುವ ಕಾರಂಜಿಯ ಬಳಿ ಹೂವಿನ ಡಾಲ್ಫಿನ್, ಟ್ರ್ಯಾಕ್ಟರ್ ಮತ್ತು ಕೋಳಿಗಳ ಕಲಾಕೃತಿಗಳು ಸಹ ಗಮನಾರ್ಹವಾಗಿದ್ದವು. ಈ ಹೂವುಗಳ ಹಬ್ಬವು ಡಿಸೆಂಬರ್ 7ರವರೆಗೆ ಸಾರ್ವಜನಿಕರಿಗಾಗಿ ಮುಕ್ತವಾಗಿರಲಿದೆ ಎಂದು ತೋಟಗಾರಿಕಾ ಇಲಾಖೆ ತಿಳಿಸಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version