ಬೆಳಗಾವಿ: ಗ್ರಾಮೀಣ ಪ್ರದೇಶದಲ್ಲಿ ಮಕ್ಕಳ ಹಕ್ಕುಗಳನ್ನು ರಕ್ಷಣೆ ಮಾಡಬೇಕಾದ ಗ್ರಾಮ ಪಂಚಾಯಿತಿ ಅಧ್ಯಕ್ಷ ಭೀಮಶಿ ಕಾಲಿಮಣಿ ಅವರೇ ಬಾಲ್ಯ ವಿವಾಹವಾಗಿ ಕಾನೂನು ಉಲ್ಲಂಘನೆ ಮಾಡಿದ ಘಟನೆ ಹುಕ್ಕೇರಿ ತಾಲೂಕಿನ ಬಸ್ಸಾಪುರದಲ್ಲಿ ನಡೆದಿದ್ದು ಬೆಳಕಿಗೆ ಬಂದಿದೆ. ಇಂತಹ ಗಂಭೀರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ತಕ್ಷಣ ದೂರು ದಾಖಲಿಸಿ ಕ್ರಮ ತೆಗೆದುಕೊಳ್ಳಬೇಕೆಂದು ಸೂಚನೆ ನೀಡಿದೆ.
ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾ ಪಂಚಾಯಿತಿ ಸಿಇಓ, ಡಿಸಿ, ಜಿಲ್ಲಾ ಮಕ್ಕಳ ಹಕ್ಕು ರಕ್ಷಣಾ ಅಧಿಕಾರಿ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಪತ್ರ ಬರೆದರೂ ಅದಕ್ಕೆ ಕವಡೆ ಕಾಸಿನ ಕಿಮ್ಮತ್ತು ಸಿಕ್ಕಿಲ್ಲ ಎನ್ನಲಾಗಿದೆ. ಇಲ್ಲಿ ಆರೋಪಿ ಜಿಲ್ಲೆಯ ಇಬ್ಬರು ಸಚಿವರ ಹೆಸರು ದುರ್ಬಳಕೆ ಮಾಡಿಕೊಂಡು ಬೀಸೋ ದೊಣ್ಣೆಯಿಂದ ಪಾರಾಗುತ್ತಿದ್ದಾನೆಂದು ಹೇಳಲಾಗುತ್ತಿದೆ.
ಏನಿದು ಪ್ರಕರಣ?: ಬಸಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಭೀಮಸಿ ಕಾಲಿಮಣಿ ಅವರು 2023ರ ನವೆಂಬರ್ 5ರಂದು 15 ವರ್ಷದ ಹುಡುಗಿಯನ್ನು ವಿವಾಹವಾಗಿದ್ದಾರೆ ಎಂಬ ಆರೋಪವಿದೆ. ಮಕ್ಕಳ ಹಕ್ಕು ಹಾಗೂ ಮಾನವ ಕಳ್ಳಸಾಗಣೆ ವಿರುದ್ಧ ಹೋರಾಡುತ್ತಿರುವ “ಸ್ಪಂದನ” ಎನ್‌ಜಿಒ ಮಾಹಿತಿಯ ಪ್ರಕಾರ, ಆ ಬಾಲಕಿ ಐದು ತಿಂಗಳ ಹಿಂದೆ ಮಗುವಿಗೆ ಜನ್ಮ ನೀಡಿದ್ದಾಳೆ.
ಈ ದೂರು ಬಂದ ತಕ್ಷಣ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಬೆಳಗಾವಿ ಜಿಲ್ಲಾ ಪಂಚಾಯತ್ ಸಿಇಒ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗೆ ಎಫ್‌ಐಆರ್ ದಾಖಲಿಸಲು ಹಾಗೂ ಬಾಲಕಿಯನ್ನು ರಕ್ಷಿಸಲು ಸೂಚಿಸಿತ್ತು. ಆದರೆ ಒಂದೂವರೆ ತಿಂಗಳು ಕಳೆದರೂ ಎಫ್‌ಐಆರ್ ದಾಖಲಾಗಿಲ್ಲ. ಈ ಪ್ರಕರಣವು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಲಕ್ಶ್ಮೀ ಹೆಬ್ಬಾಳ್ಕರ್ ಅವರ ವ್ಯಾಪ್ತಿಗೆ ಬರುವುದರಿಂದ ಹೆಚ್ಚಿನ ಗಮನ ಸೆಳೆದಿದೆ.
ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಡಾ. ಪರ್ವೀನ್ ಅವರು, “ನಾವು ರಕ್ಷಣಾ ತಂಡದೊಂದಿಗೆ ನಾಲ್ಕು ಬಾರಿ ಬಸಾಪುರಕ್ಕೆ ಭೇಟಿ ನೀಡಿದ್ದೇವೆ. ಆದರೆ ಬಾಲಕಿಯನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಈ ನಡುವೆ ಆಕೆ ಅಪ್ರಾಪ್ತ ವಯಸ್ಕಳಾಗಿದ್ದಾಳೆ ಎಂದು ಹೇಳುವ ಜನನ ಪ್ರಮಾಣ ಪತ್ರವೂ ಹೊರಬಂದಿದೆ” ಎಂದು ತಿಳಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಚೇತನ ಕುಮಾರ್ ಅವರು, `ಹೊಸ ಜನನ ಪ್ರಮಾಣ ಪತ್ರವನ್ನು ಆಕೆಯ ಶಾಲಾ ವರ್ಗಾವಣೆ ಸರ್ಟಿಫಿಕೇಟ್ ಜೊತೆ ಹೋಲಿಸಿ ಪರಿಶೀಲಿಸಲಾಗುತ್ತದೆ’ ಎಂದು ಸ್ಪಷ್ಟಪಡಿಸಿದ್ದಾರೆ. ಸ್ಪಂದನ ಸಂಸ್ಥೆಯ ಸುಶೀಲಾ ಅವರು, “ಆರೋಪಿ ಆಡಳಿತಾರೂಢ ಪಕ್ಷದ ಸದಸ್ಯನಾಗಿರುವುದರಿಂದ ಕ್ರಮದಿಂದ ತಪ್ಪಿಸಿಕೊಳ್ಳುತ್ತಿದ್ದಾನೆ. ಪ್ರಕರಣ ಬಹಳ ಸ್ಪಷ್ಟವಾಗಿದ್ದರೂ ರಾಜಕೀಯ ಪ್ರಭಾವದಿಂದ ಕ್ರಮ ಕೈಗೊಳ್ಳಲಾಗುತ್ತಿಲ್ಲ” ಎಂದು ಆರೋಪಿಸಿದರು.
ಎಫ್‌ಐಆರ್ ದಾಖಲು ಮಾಡಲು ಸೂಚಿಸಿದ್ದೇನೆ: “ಮಕ್ಕಳ ಹಕ್ಕುಗಳ ಆಯೋಗವೇ ನೇರವಾಗಿ ಕ್ರಮ ಕೈಗೊಳ್ಳಬಹುದಾಗಿತ್ತು. ಅಧಿಕಾರಿಗಳಿಗೆ ಪತ್ರ ಬರೆದು ಸಮಯ ವ್ಯರ್ಥಗೊಳಿಸುವ ಬದಲು ಅವರೇ ಕ್ರಮ ಜರುಗಿಸಬಹುದು. ಆದರೂ ನಾನು ಉಪನಿರ್ದೇಶಕರಿಗೆ ಕ್ರಮ ಕೈಗೊಳ್ಳುವಂತೆ ಹಾಗೂ ಎಫ್‌ಐಆರ್ ದಾಖಲಿಸಲು ಸೂಚಿಸಿದ್ದೇನೆ” ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.