ಬೆಂಗಳೂರು: ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಗರದ ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್ ನೀಡಿದೆ. ಉಪ ಮುಖ್ಯಮಂತ್ರಿ ಮತ್ತು ಬೆಂಗಳೂರು ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಸೂಚನೆಯಂತೆ ದೇಶದಲ್ಲಿಯೇ ಮೊದಲ ಬಾರಿಗೆ ಆಸ್ತಿ ವರ್ಗಾವಣೆಗೆ ಈ ಪ್ರಕ್ರಿಯೆ ಜಾರಿಗೊಳಿಸಲಾಗಿದೆ.
ಈ ಕುರಿತು ಎಂ.ಮಹೇಶ್ವರ ರಾವ್ ಮುಖ್ಯ ಆಯುಕ್ತರು, ಬಿಬಿಎಂಪಿ ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ. ಬಿಬಿಎಂಪಿಯಲ್ಲಿ ಆಧಾರ್ ಆಧಾರಿತ ಸ್ವಯಂಚಾಲಿತ ಆಸ್ತಿ ತಿದ್ದುಪಡಿಗಳು ಲಭ್ಯವಿದೆ ಎಂದು ಹೇಳಿದ್ದಾರೆ.
ಬೆಂಗಳೂರು ನಗರದ ನಾಗರಿಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಆಧಾರ್ ಆಧಾರಿತ ಸ್ವಯಂಚಾಲಿತ ಆಸ್ತಿ ವರ್ಗಾವಣೆ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ನಾಗರಿಕರು ತಮ್ಮ ಆಸ್ತಿಯ ಬಾಕಿ ಇರುವ ಯಾವುದೇ ವರ್ಗಾವಣೆಗಳನ್ನು ಆನ್‌ಲೈನ್ ಮೂಲಕ ಈ ಕೆಳಗಿನಂತೆ ಸ್ವಯಂಚಾಲಿತ ಆಸ್ತಿ ತಿದ್ದುಪಡಿಗಳನ್ನು ಪಡೆಯಬಹುದು ಎಂದು ತಿಳಿಸಿದ್ದಾರೆ.
ಆಸ್ತಿ ವರ್ಗಾವಣೆ ಹೇಗೆ?
ಯಾವುದೇ ವಿವಾದಿತ ಪ್ರಕರಣವನ್ನು ಸಂಬಂಧಪಟ್ಟ ಬಿಬಿಎಂಪಿ ಅಧಿಕಾರಿಯಿಂದ ವಿಚಾರಣೆ ನಡೆಸಿ ಇತ್ಯರ್ಥಪಡಿಸಲಾಗುವುದು.
ಜನರು ಪಾಲಿಕೆ ಜಾಲತಾಣ https://bbmpeaasthi.karnataka.gov.inಕ್ಕೆ ಭೇಟಿ ನೀಡಿ
ಪ್ರಮುಖ ಸೂಚನೆಗಳು ಅಡಿಯಲ್ಲಿ eKhata Automatic Mutations – Get Your Mutation ಲಿಂಕ್ ಅನ್ನು ಕ್ಲಿಕ್ ಮಾಡಿ
ಇ.ಪಿ.ಐ.ಡಿ ಸಂಖ್ಯೆಯ ಮೂಲಕ ಬಾಕಿ ಇರುವ ನಿಮ್ಮ ಇ-ಖಾತಾ ಮುಟೇಷನ್ ಅನ್ನು ಹುಡುಕಿ
ಮಾರಾಟಗಾರರ/ ನೀಡುವವರ ಮತ್ತು ಖರೀದಿದಾರರ/ ಸ್ವೀಕರಿಸುವವರ ಆಧಾರ್ ಇ- ಕೆವೈಸಿ ದೃಢೀಕರಣವನ್ನು ಮಾಡಿ
ಮಾರಾಟಗಾರರ/ ದಾನಿಗಳ ಆಧಾರ್ ಮತ್ತು ಇ-ಖಾತೆ ಹೊಂದಿರುವ ಮಾಲೀಕರ ಆಧಾರ್‌ನೊಂದಿಗೆ ಹೆಸರಿನೊಂದಿಗೆ ಹೊಂದಾಣಿಕೆಯಾದರೆ, 7 ದಿನಗಳ ಆಕ್ಷೇಪಣಾ ಅವಧಿಯ ನಂತರ ವಿವಾದರಹಿತ ಮ್ಯುಟೇಷನ್ ಸ್ವಯಂಚಾಲಿತವಾಗಿ ಅನುಮೋದನೆಗೊಳ್ಳುತ್ತದೆ.
ಇ-ಕೆವೈಸಿ ಮುಖ್ಯ: ಯಾವುದೇ ಆಸ್ತಿ ಮಾರಾಟ ಅಥವ ನೋಂದಣಿ ಸಮಯದಲ್ಲಿ ಆಧಾರ್ ಕಾರ್ಡ್ ಒಟಿಪಿ ಮುಖ್ಯವಾಗಿದೆ. ವ್ಯಕ್ತಿ ನಿವೇಶನ ಅಥವ ಮನೆ ಮಾರಾಟದ ಸಂದರ್ಭದಲ್ಲಿ ದಾಖಲೆ ನೋಂದಣಿ ಮಾಡಿಕೊಳ್ಳಲು ಆಗಮಿಸಿದಾಗ ಅವರು ನೀಡುವ ಆಧಾರ್ ನೈಜತೆ ಪರಿಶೀಲಿಸಬೇಕಿದೆ.
ಈ ರೀತಿ ಪರಿಶೀಲನೆ ನಡೆಸಿದಾಗ ನಂತರವೇ ದಾಖಲೆಯನ್ನು ನೋಂದಣಿ ಮಾಡಿಕೊಳ್ಳಬೇಕು ಎಂದು ಕರ್ನಾಟಕ ಹೈಕೋರ್ಟ್ ಆದೇಶ ನೀಡಿತ್ತು. ಈ ಮಾದರಿಯಲ್ಲಿಯೇ ಇ-ಕೆವೈಸಿ ಸಹ ಮುಖ್ಯವಾಗಿದೆ.
ಇ-ಖಾತಾ ಅಭಿಯಾನ ನಡೆಸುತ್ತಿರುವ ಬಿಬಿಎಂಪಿ ಆಸ್ತಿಗಳ ನೋಂದಣಿ ವಿಚಾರದಲ್ಲಿ ಹಲವಾರು ಬದಲಾವಣೆಗಳನ್ನು ತರುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಎ-ಖಾತಾಗಳನ್ನು ನೀಡುವ ಸಲುವಾಗಿ ಕರ್ನಾಟಕ ಸರ್ಕಾರ ಹೊರಡಿಸುವ ಆದೇಶದ ಪ್ರಕಾರ, ನಾಗರಿಕರು ಎ-ಖಾತಾಗೆ ಹೇಗೆ ಅರ್ಜಿ ಸಲ್ಲಿಸಬಹುದು ಮತ್ತು ಪಡೆದುಕೊಳ್ಳಬಹುದು? ಎಂದು ವಿವರ ನೀಡಲಾಗಿದೆ.
ಆನ್‌ಲೈನ್ ವ್ಯವಸ್ಥೆ ಜಾರಿಗೊಳಿಸಿದ ನಂತರ ನಾಗರಿಕರು ಅರ್ಜಿ ಸಲ್ಲಿಸಬಹುದು. ಬಿ-ಖಾತಾವನ್ನು ಎ-ಖಾತಾಕ್ಕೆ ಪರಿವರ್ತನೆ ಮಾಡುವುದು ಅಥವಾ ಈಗ ಯಾವುದೇ ಖಾತಾ ಇಲ್ಲದಿದ್ದರೆ ಹೊಸ ಎ-ಖಾತಾಗೆ ಅರ್ಜಿ ಸಲ್ಲಿಸಬಹುದು. ಯಾವುದೇ ಬಿಬಿಎಂಪಿ ಕಚೇರಿಗೆ ಹೋಗಬೇಡಿ ಮತ್ತು ಯಾವುದೇ ಮಧ್ಯವರ್ತಿಗಳನ್ನು ಸಂಪರ್ಕಿಸಬೇಡಿ ಎಂದು ಬಿಬಿಎಂಪಿ ಹೇಳಿದೆ.