ಬಾಗಲಕೋಟೆ(ರಬಕವಿ-ಬನಹಟ್ಟಿ): ತಾಲೂಕಿನ ಬಂಡಿಗಣಿ ಬಸವಗೋಪಾಲ ನೀಲಮಾಣಿಕಮಠದ ದಾನೇಶ್ವರಶ್ರೀಗಳ ಅಂತ್ಯಸಂಸ್ಕಾರವು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಸೇರಿದಂತೆ ನಾಡಿನ ಅನೇಕ ಹರ-ಗುರು-ಚರಮೂರ್ತಿಗಳ ಸಾನಿಧ್ಯದಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದ ವಿಧಿ-ವಿಧಾನಗಳೊಂದಿಗೆ ಶ್ರೀಮಠದ ಆವರಣದಲ್ಲಿ ಶನಿವಾರ ಸಂಜೆ ಜರುಗಿತು.
ಶುಕ್ರವಾರ ತಡರಾತ್ರಿ ಬಂಡಿಗಣಿಮಠಕ್ಕೆ ಪಾರ್ಥಿವ ಶರೀರ ಆಗಮಿಸಿತ್ತು. ಶನಿವಾರ ಸಂಜೆ 5 ಗಂಟೆವರೆಗೂ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿತಾದರೂ ಅಂತ್ಯಕ್ರಿಯೆಗೆ ಸಮಾಧಿಗೆಂದು ಅಗೆಯುವಾಗಿ ಬಂಡೆಗಲ್ಲಿದ್ದ ಕಾರಣ ಕೊಂಚ ವಿಳಂಬಕ್ಕೆ ಕಾರಣವಾಯಿತು.
ಶೀಗಳಿಗೆ ನುಡಿ ನಮನ: ಅಂತ್ಯಕ್ರಿಯೆ ಸಂದರ್ಭ ಶ್ರೀಶೈಲ ಜಗದ್ಗುರುಗಳು ಸಾನಿಧ್ಯ ವಹಿಸಿ ಮಾತನಾಡಿ, ಅನ್ನದಾನೇಶ್ವರಶ್ರೀಗಳು ದಾಸೋಹಕ್ಕೆ ಹೆಸರುವಾಸಿಯಾಗಿದ್ದರು, ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ಗೋವಾ ರಾಜ್ಯಗಳ ಅನೇಕ ಧಾರ್ಮಿಕ ಕ್ಷೇತ್ರಗಳಲ್ಲಿ ಅನ್ನದಾಸೋಹ ನೆರವೇರಿಸಿ `ದಾಸೋಹ ರತ್ನ’ ಪ್ರಶಸ್ತಿ ಪಡೆದವರಾಗಿದ್ದರು. ಬಂಡಿಗಣಿ ಶ್ರೀಗಳು ಭಕ್ತರ ಮನದಲ್ಲಿ ದಾಸೋಹ ಚಕ್ರವರ್ತಿ ಎಂಬ ಬಿರುದನ್ನು ಪಡೆದುಕೊಂಡು ಹೋದರು, ಅವರು ಇರುವಾಗ ಪರಮಾತ್ಮನ ಸ್ವರೂಪಿಗಳಾಗಿದ್ದರು, ಈಗ ಅವರೇ ಪರಮಾತ್ಮರಾಗಿ ಹೋಗಿದ್ದಾರೆಂದರು.
