Home ನಮ್ಮ ಜಿಲ್ಲೆ Namma Metro: ನಮ್ಮ ಮೆಟ್ರೋ ಹಳದಿ ಮಾರ್ಗ, ಹೊರಟಿತು 4ನೇ ರೈಲು

Namma Metro: ನಮ್ಮ ಮೆಟ್ರೋ ಹಳದಿ ಮಾರ್ಗ, ಹೊರಟಿತು 4ನೇ ರೈಲು

0

ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನ ಬಹು ನಿರೀಕ್ಷಿತ ನಮ್ಮ ಮೆಟ್ರೋ ಮಾರ್ಗ ಆರ್‌.ವಿ.ರಸ್ತೆ-ಬೊಮ್ಮಸಂದ್ರ. ಈ ಹಳದಿ ಮಾರ್ಗದಲ್ಲಿ ಮೆಟ್ರೋ ರೈಲುಗಳ ಸಂಚಾರಕ್ಕೆ ದಿನಗಣನೆ ಆರಂಭವಾಗಿದೆ.

ಹಳದಿ ಮಾರ್ಗದಲ್ಲಿ ಚಾಲಕ ರಹಿತ ನಮ್ಮ ಮೆಟ್ರೋ ರೈಲು ಸಂಚಾರವನ್ನು ನಡೆಸಲಿದೆ. ಈ ಮಾರ್ಗಕ್ಕಾಗಿ 4ನೇ ರೈಲು ಪಶ್ಚಿಮ ಬಂಗಾಳದ ಟಿಟಾಗಢ ರೈಲ್ ಸಿಸ್ಟಂ ಲಿಮಿಟೆಡ್‌ (ಟಿಆರ್‌ಎಸ್‌ಎಲ್‌)ನಿಂದ ಸೋಮವಾರ ಹೊರಟಿದೆ.

ಆಗಸ್ಟ್ ಮೊದಲ ವಾರದಲ್ಲಿ ಹಳದಿ ಮಾರ್ಗದಲ್ಲಿ ಸಂಚಾರ ನಡೆಸುವ 4ನೇ ರೈಲು ಬೆಂಗಳೂರು ನಗರಕ್ಕೆ ಆಗಮಿಸಲಿದೆ ಎಂದು ಬಿಎಂಆರ್‌ಸಿಎಲ್ ಹೇಳಿತ್ತು. ಎರಡು ಬೋಗಿಯನ್ನು ಹೊಂದಿರುವ ರೈಲು ಆಗಸ್ಟ್ 5ರ ಬಳಿಕ ಬೆಂಗಳೂರು ನಗರವನ್ನು ತಲುಪಲಿದೆ.

3 ರೈಲುಗಳು ಬಂದಿವೆ: ಚೀನಾ ಮೂಲದ ಕಂಪನಿ ಬಿಎಂಆರ್‌ಸಿಎಲ್‌ಗೆ ರೈಲು ಪೂರೈಕೆ ಮಾಡುವ ಟೆಂಡರ್ ಪಡೆದಿದೆ. ಚೀನಾದಿಂದ ಬೆಂಗಳೂರು ನಗರಕ್ಕೆ 6 ಬೋಗಿಯ ಮೊದಲ ಚಾಲಕ ರಹಿತ ಮೆಟ್ರೋ ರೈಲು 2024ರಲ್ಲಿಯೇ ಬಂದಿತ್ತು.

ಟೆಂಡರ್ ನಿಯಮದಂತೆ ಚೀನಾ ಮೂಲದ ಕಂಪನಿ ಭಾರತದ ಪಾಲುದಾರರ ಜೊತೆ ಸೇರಿ ಮೆಟ್ರೋ ರೈಲು ತಯಾರು ಮಾಡಲಿದೆ. ಪಶ್ವಿಮ ಬಂಗಾಳ ಮೂಲದ ಟಿಆರ್‌ಎಸ್‌ಎಲ್‌ ಜೊತೆ ಇದಕ್ಕಾಗಿ ಕಂಪನಿ ಒಪ್ಪಂದ ಮಾಡಿಕೊಂಡಿದೆ.

ಟಿಆರ್‌ಎಸ್‌ಎಲ್‌ ಈಗಾಗಲೇ ಮೂರು ಸೆಟ್ ರೈಲು ಬೋಗಿಯನ್ನು ಕಳಿಸಿದ್ದು, 4ನೇ ರೈಲು ಸೋಮವಾರ ಹೊರಟಿದೆ. ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ರೈಲು ಓಡಿಸುವ ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿವೆ. ಈ ಮಾರ್ಗದಲ್ಲಿ ಸಿಎಂಆರ್‌ಎಸ್‌ ತಂಡ ಜುಲೈ 22ರಿಂದ 25ರವರೆಗೆ ಪರಿಶೀಲನೆ ನಡೆಸಿದೆ.

ಆಯುಕ್ತರ ಅಂತಿಮ ಪ್ರಮಾಣ ಪತ್ರದ ಬಳಿಕ ರೈಲು ಸಂಚಾರ ಯಾವಾಗ? ಎಂಬುದು ಅಂತಿಮವಾಗಲಿದೆ. ಆರ್.ವಿ.ರಸ್ತೆ-ಬೊಮ್ಮಸಂದ್ರ 19.15 ಕಿ.ಮೀ.ಉದ್ದದ ರೈಲು ಮಾರ್ಗದಲ್ಲಿ ಸಂಚಾರ ನಡೆಸಲು 2025ರ ಜನವರಿಯಲ್ಲಿ 2ನೇ ರೈಲು, ಮೇ ತಿಂಗಳಿನಲ್ಲಿ 3ನೇ ರೈಲು ನಗರಕ್ಕೆ ಆಗಮಿಸಿತ್ತು.

ನಿಲ್ದಾಣಗಳು: ಹಳದಿ ಮಾರ್ಗ ಬೆಂಗಳೂರು ನಗರದ ಸಾಫ್ಟ್‌ವೇರ್ ಕಂಪನಿಗಳು ಅಧಿಕವಾಗಿರುವ ಎಲೆಕ್ಟ್ರಾನಿಕ್ ಸಿಟಿಗೆ ಸಂಪರ್ಕವನ್ನು ಕಲ್ಪಿಸುತ್ತದೆ. ಆದ್ದರಿಂದ ಈ ಮಾರ್ಗದಲ್ಲಿ ರೈಲುಗಳ ಸಂಚಾರಕ್ಕಾಗಿ ಟೆಕ್ಕಿಗಳು ಕಾದು ಕುಳಿತಿದ್ದಾರೆ.

ಈ ಮಾರ್ಗದಲ್ಲಿ ಆರ್.ವಿ.ರಸ್ತೆ, ರಾಗಿಗುಡ್ಡ, ಜಯದೇವ ಆಸ್ಪತ್ರೆ, ಬಿಟಿಎಂ ಲೇಔಟ್, ಸೆಂಟ್ರಲ್ ಸಿಲ್ಕ್ ಬೋರ್ಡ್, ಬೊಮ್ಮನಹಳ್ಳಿ, ಹೊಂಗಸಂದ್ರ, ಕುಡ್ಲುಗೇಟ್, ಸಿಂಗಸಂದ್ರ, ಹೊಸ ರಸ್ತೆ, ಬೆರಟೇನ ಅಗ್ರಹಾರ, ಎಲೆಕ್ಟ್ರಾನಿಕ್ ಸಿಟಿ, ಇನ್ಫೋಸಿಸ್ (ಕೋನಪ್ಪನ ಅಗ್ರಹಾರ), ಹೊಸ್ಕೂರ್‌ ರಸ್ತೆ, ಬಯೋಕಾನ್ ಹೆಬ್ಬಗೋಡಿ, ಬೊಮ್ಮಸಂದ್ರ (ಡೆಲ್ಟಾ ಎಲೆಕ್ಟ್ರಾನಿಕ್ಸ್‌) ನಿಲ್ದಾಣಗಳಿವೆ.

ಹಳದಿ ಮಾರ್ಗದ ಕಾಮಗಾರಿ ಪೂರ್ಣಗೊಂಡು ಸುಮಾರು ಒಂದು ವರ್ಷ ಕಳೆದಿದೆ. ಆದರೆ ರೈಲುಗಳ ಕೊರತೆ ಕಾರಣ ರೈಲು ಸಂಚಾರ ಆರಂಭವಾಗಿರಲಿಲ್ಲ. ಬೆಂಗಳೂರು ನಗರದಲ್ಲಿ ನೇರಳೆ ಮತ್ತು ಹಸಿರು ಮಾರ್ಗದಲ್ಲಿ ಈಗಾಗಲೇ ಮೆಟ್ರೋ ರೈಲುಗಳ ಸಂಚಾರವಿದೆ. ಹಳದಿ ಮಾರ್ಗದಲ್ಲಿ ರೈಲು ಸಂಚಾರ ಆರಂಭಿಸಲು ಬಿಎಂಆರ್‌ಸಿಎಲ್ ರೈಲುಗಳ ಕೊರತೆ ಇದೆ.

ಪ್ರತಿ 15 ನಿಮಿಷಕ್ಕೆ ಒಂದು ರೈಲು ಓಡಿಸಲು ಹಳದಿ ಮಾರ್ಗಕ್ಕೆ 15 ರೈಲುಗಳು ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಈಗ ಕೇವಲ 4 ರೈಲುಗಳಿದ್ದು, ಆಗಸ್ಟ್‌ನಲ್ಲಿ ಸಂಚಾರ ಆರಂಭವಾದರೂ ಸಹ ಕೇವಲ 7 ನಿಲ್ದಾಣಗಳಿಗೆ ಮಾತ್ರ ಮೆಟ್ರೋ ಸಂಪರ್ಕ ಸಿಗುವ ನಿರೀಕ್ಷೆ ಇದೆ. 2026ರ ಜನವರಿಯಲ್ಲಿ ಸಂಪೂರ್ಣ ಹಳದಿ ಮಾರ್ಗ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಅಂದಾಜಿಸಲಾಗಿದೆ.

ಬೆಂಗಳೂರು ನಗರದಲ್ಲಿ ಚಾಲಕ ರಹಿತ ಮೆಟ್ರೋ ರೈಲು ಸಂಚಾರ ನಡೆಸುತ್ತಿಲ್ಲ. ಹಳದಿ ಮಾರ್ಗದಲ್ಲಿ ಮೊದಲ ಬಾರಿಗೆ ಇಂತಹ ರೈಲು ಓಡಲಿದೆ. ಅಲ್ಲದೇ ಈ ಮಾರ್ಗದಲ್ಲಿ ಡಬಲ್ ಡೆಕ್ಕರ್ ಫ್ಲೈ ಓವರ್ ಮೇಲೆ ರೈಲು ಸಂಚಾರ ನಡೆಸುವುದು ವಿಶೇಷವಾಗಿದೆ. ಈ ಮಾರ್ಗದ ಎಲ್ಲಾ ನಿಲ್ದಾಣಗಳ ಮೇಲ್ಛಾವಣಿಯನ್ನು ಹಳದಿ ಬಣ್ಣದಲ್ಲಿ ನಿರ್ಮಾಣ ಮಾಡಲಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version