Home ನಮ್ಮ ಜಿಲ್ಲೆ 20 ಕೋಟಿ ರೂ. ಶ್ವಾನ ನೋಡಲು ಜನಜಂಗುಳಿ

20 ಕೋಟಿ ರೂ. ಶ್ವಾನ ನೋಡಲು ಜನಜಂಗುಳಿ

0

ಬಳ್ಳಾರಿ: ನಗರದ ವಾರ್ಡ್ಲಾ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಶ್ವಾನ ಪ್ರದರ್ಶನದಲ್ಲಿ ಬೆಂಗಳೂರು ನಿವಾಸಿ ಸತೀಶ್ ಕಡೆಬಾಮ್ ಅವರ 20 ಕೋಟಿ ರೂ. ಬೆಲೆ ಬಾಳುವ ಕುಕೇಷಿಯನ್ ಶೆಫರ್ಡ್ ತಳಿಯ ಹೈದರ್ ಕಡೆಬಾಮ್ ಎಲ್ಲರ ಗಮನವನ್ನು ಸೂಜಿಗಲ್ಲಿನಂತೆ ಆಕರ್ಷಿಸಿತು.
ಕ್ವಿಂಟಲ್ ತೂಕದ ನಾಯಿ ಪ್ರದರ್ಶನದ ಸ್ಥಳಕ್ಕೆ ಬರುತ್ತಲೇ ಸೆಲೆಬ್ರಿಟಿ ಬಂದಾಗ ಸುತ್ತುವರಿಯುವಂತೆ ಮುಗಿಬಿದ್ದು ನಾಯಿ ವೀಕ್ಷಣೆ ಮಾಡಿದರು. ಸತೀಶ್ ಕಡೆಬಾಮ್ ಜೊತೆಗೆ ಅತ್ಯಂತ ನಿಧಾನವಾಗಿ ಗಂಭೀರವಾಗಿ ಹೆಜ್ಜೆ ಹಾಕಿದ ನಾಯಿಯೊಂದಿಗೆ ಖುದ್ದು ಶ್ವಾನ ಪ್ರದರ್ಶನ ಉದ್ಘಾಟನೆ ಮಾಡಲು ಆಗಮಿಸಿದ ಶಾಸಕ ಜಿ. ಸೋಮಶೇಖರ ರೆಡ್ಡಿ ಮಾತ್ರವಲ್ಲದೆ ಎಲ್ಲರೂ ಸೆಲ್ಫಿಗಾಗಿ ಮುಗಿಬಿದ್ದರು. ಕೆಲ ಹೊತ್ತು ವೇದಿಕೆಯ ಮೇಲೆ ನೂಕು ನುಗ್ಗಲು ಉಂಟಾಯಿತು.
ಕೊನೆಗೆ ನಾಯಿ ಮಾಲೀಕರು ನಾಯಿಯನ್ನು ಹೀಗೆ ಸುತ್ತುವರಿದರೆ ಅದಕ್ಕೆ ಉಸಿರುಗಟ್ಟಿದಂತೆ ಆಗುತ್ತದೆ ಎಂದಾಗ ಜನರನ್ನು ಚದುರಿಸಲು ಪೊಲೀಸರು ಹರ ಸಾಹಸ ಪಡಬೇಕಾಯಿತು. 3 ತಿಂಗಳ ಮರಿಗಳಿಂದ ಹಿಡಿದು ಕೆಲ ದೈತ್ಯಾಕಾರದ ಶ್ವಾನಗಳ ದೇಹದಾರ್ಢ್ಯ ಕಂಡು ಜನ ಹುಬ್ಬೇರಿಸಿದರು. ಮುಧೋಳ, ಗೋಲ್ಡನ್ ರಿಟ್ರಿವರ್,
ಸೈಬೇರಿಯನ್ ಹಸ್ಕಿ, ಹಲಾಸ್ಕ್ ಪೊಮೋರಿಯನ್, ಸೈಂಟ್ ವರ್ನಾಡೋ, ಗ್ರೇಟ್ ಫೆಲ್, ಸೇನ್ ಪಾರ್ಲರ್, ಗೋಲ್ಡನ್ ರಿಟ್ರೀವರ್, ಡ್ಯಾಶ್ ಹೌಡ್, ಗ್ರೇಟ್ ಡೇನ್, ಡಾಬರಮನ್, ಬೀಗಲ್, ಜರ್ಮನ್ ಶೆಫರ್ಡ್, ರಾಟ್‌ವಿಲ್ಲರ್, ಅಮೆರಿಕನ್ ಬುಲ್ ಡಾಗ್, ಲ್ಯಾಬ್ರಡಾರ್ ರಿಟ್ರೀವರ್, ಪಗ್, ಇಟಾಲಿಯನ್ ಮ್ಯಾಸಕಾಟ್, ಡಾಲ್‌ಮಿಷನ್ ಸೇರಿ ಅನೇಕ ತಳಿಗಳ ಶ್ವಾನಗಳು ನೋಡುಗರ ಮನಸೂರೆಗೊಳಿಸಿದವು.

Exit mobile version