ಬನಹಟ್ಟಿ: ರಾಜ್ಯ ಸರ್ಕಾರ ನೇಕಾರರ ಸಬ್ಸಿಡಿ ವಿದ್ಯುತ್ ಯೋಜನೆ ಕಸಿದುಕೊಂಡಿರುವ ಹಿನ್ನಲೆ ಬುಧವಾರ ಬನಹಟ್ಟಿ ಬಂದ್ ಕರೆ ಸಂಪೂರ್ಣ ಯಶಸ್ವಿಯಾಗುವಲ್ಲಿ ಕಾರಣವಾಯಿತು.
ಬೆಳಿಗ್ಗಿನಿಂದಲೂ ಇಡೀ ನಗರವು ಬಂದ್ ಮಾಡುವ ಮೂಲಕ ನೇಕಾರ ಸಮುದಾಯಕ್ಕೆ ಬೆಂಬಲ ವ್ಯಕ್ತಪಡಿಸಲಾಯಿತು. ಬೆಳಿಗ್ಗೆ 10 ಗಂಟೆಗೆ ಬೃಹತ್ ಸಭೆ ಜರುಗಿತು. ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ ಮಾತನಾಡಿ, ಸರ್ಕಾರ ನೇಕಾರ ಸಮುದಾಯಕ್ಕೆ ತಿಳಿಸುವವರೆಗೂ ವಿದ್ಯುತ್ ಬಿಲ್ ಕಟ್ಟುವದಿಲ್ಲ. 20 ಎಚ್‌ಪಿವರೆಗೆ ಉಚಿತ ಬಿಲ್ ನೀಡುವದಾಗಿ ಚುನಾವಣೆ ಮುನ್ನ ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿತ್ತು ಇದೀಗ ಜಾರಿಯಾಗಲೇಬೇಕು. ಸಾಲದ ಸುಳಿಯಲ್ಲಿ ರಾಜ್ಯದಲ್ಲಿ 42 ನೇಕಾರರು ಆತ್ಮಹತ್ಯೆ ಮಾಡಿಕೊಂಡು ಈಗಲೂ ಹಲವಾರು ಕುಟುಂಬಗಳು ಆರ್ಥಿಕ ಪರಿಸ್ಥಿತಿಯ ಗಂಭೀರತೆ ಎದುರಿಸುತ್ತಿದ್ದಾರೆ. ಇದಕ್ಕೆ ಸರ್ಕಾರವೇ ಹೊಣೆಯಾಗಿದ್ದು ಶೀಘ್ರ ಪರಿಹಾರಕ್ಕೆ ಒತ್ತಾಯಿಸಿದರು.
ನೇಕಾರ ಮುಖಂಡ ಶಂಕರ ಸೊರಗಾಂವಿ ಮಾತನಾಡಿ, 2004 ರಲ್ಲಿ ಧರ್ಮಸಿಂಗ್ ಮುಖ್ಯಮಂತ್ರಿಯಾದಾಗ ನೇಕಾರ ಉಳಿವಿಗಾಗಿ 1.25 ರೂ. ಪ್ರತಿ ಯುನಿಟ್‌ಗೆ ವಿಶೇಷ ಯೋಜನೆ ಜಾರಿ ಮಾಡಿತ್ತು. 20 ವರ್ಷಗಳ ನಂತರ ಇದೀಗ ಕಿತ್ತು ಹಾಕುವ ಕುತಂತ್ರ ನಡೆಯುತ್ತಿದೆ. ಇದ್ಯಾವದಕ್ಕೂ ಮಣೆ ಹಾಕುವದಿಲ್ಲ. ಸಿಎಂ ಸಿದ್ರಾಮಯ್ಯ ಸರ್ಕಾರ ನುಡಿದಂತೆ ನಡೆಯುವ ಸರ್ಕಾರವೆನ್ನುತ್ತಿದ್ದಾರೆ. ಬಡನೇಕಾರರ ಸಮಸ್ಯೆ ಅರಿತು ಸ್ಪಂದಿಸಲೆಂದು ಒತ್ತಾಯಿಸಿದರು.
ಭಗತ್‌ಸಿಂಗ್ ಸಂಘಟನೆ ಮುಖಂಡ ಆನಂದ ಜಗದಾಳ ಮಾತನಾಡಿ, ನೇಕಾರ ಸಮುದಾಯದ ಒಂದೇ ಒಂದು ಯೋಜನೆ ಕಟ್ಟಕಡೆಯ ನೇಕಾರ ಪಡೆದಿಲ್ಲ. ಕೇವಲ ದುಡಿಮೆಯಿಂದಲೇ ಬದುಕು ಕಟ್ಟಿಕೊಂಡು ಈಗಲೂ ಹೋರಾಟದ ಸ್ಥಿತಿ ಎದುರಿಸುತ್ತಿದ್ದಾನೆ. ನೇಕಾರರ ಸಹನೆಯನ್ನು ಪರೀಕ್ಷಿಸಬೇಡಿಯೆಂದರು. ಸುರೇಶ ಚಿಂಡಕ ಮಾತನಾಡಿ, ಸರ್ಕಾರದ ಮಹತ್ತರ ಯೋಜನೆಯಾಗಿರುವ ಶೇ.1 ಮತ್ತು ಶೇ.3 ಬಡ್ಡಿ ದರದ ಸಾಲದ ಸಬ್ಸಿಡಿಯು ಕಳೆದ ನಾಲ್ಕೈದು ವರ್ಷಗಳಿಂದ ಸಹಕಾರಿ ಬ್ಯಾಂಕ್ ಹಾಗು ಸಂಘಗಳಲ್ಲಿ ಜಮೆಯಾಗದೆ ಈಗಲೂ ಪೂರ್ಣ ಪ್ರಮಾಣದ ಬಡ್ಡಿ ಕಟ್ಟುತ್ತಿರುವ ನೇಕಾರರಿಗೆ ಆರ್ಥಿಕ ಹೊರೆ ಹೆಚ್ಚಾಗಿದೆ. ಸರ್ಕಾರ ಕೂಡಲೇ ಸ್ಪಂದಿಸಬೇಕೆಂದರು. ಸೈಜಿಂಗ್ ಘಟಕದ ಅಧ್ಯಕ್ಷ ಬ್ರಿಜ್‌ಮೋಹನ ಡಾಗಾ ಮಾತನಾಡಿ, ನೇಕಾರ ನಾಯಕರ ನಿಯೋಗವು ಮುಖ್ಯಮಂತ್ರಿ ಹಾಗು ಜವಳಿ ಸಚಿವರಿಗೆ ಭೆಟ್ಟಿ ನೀಡಿ ನೇಕಾರರ ನೈಜ ಸಮಸ್ಯೆಗಳ ಕುರಿತು ಮನವರಿಕೆ ಮಾಡುವಲ್ಲಿ ಸಜ್ಜಾಗಬೇಕು. ಬರುವ ದಿ.೭ ರಂದು ನಡೆಯುವ ಬಜೆಟ್‌ನ ಪೂರ್ವದಲ್ಲಿಯೇ ಇವೆಲ್ಲದರ ಕುರಿತು ನಿಯೋಗ ತೆರಳಲಿದೆ ಎಂದರು.ಸರ್ಕಾರಕ್ಕೆ ನೇಕಾರರ ಕುರಿತು ಮನವರಿಕೆಯಾಗುವಲ್ಲಿ ಸಾಧ್ಯವಾಗುತ್ತಿಲ್ಲ ನೇಕಾರರ ಜ್ವಲಂತ ಸಮಸ್ಯೆ ಕುರಿತು ಸರ್ಕಾರ ಮಟ್ಟದಲ್ಲಿ ಚಿಂತನೆಯಾಗಬೇಕೆಂದು ಡಾಗಾ ತಿಳಿಸಿದರು.
ಅರೆಬೆತ್ತಲೆ ಮೆರವಣಿಗೆ
ನಗರದ ಶ್ರೀ ಕಾಡಸಿದ್ದೇಶ್ವರ ದೇವಸ್ಥಾನದಿಂದ ಮಂಗಳವಾರ ಪೇಟೆ, ಸೋಮವಾರ ಪೇಟೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ನೇಕಾರ ಸಮುದಾಯದ ಸಾವಿರಾರು ಜನರಿಂದ ಅರೆಬೆತ್ತಲೆ ಮೆರವಣಿಗೆ ನಡೆಯಿತು. ನಂತರ ಎಂ.ಎಂ. ಬಂಗ್ಲೆ ಎದುರು ನಂತರ ಉಪತಹಶೀಲ್ದಾರ ವಿಠ್ಠಲ ಕೂಗಾಟೆಯವರಿಗೆ ಮನವಿ ಸಲ್ಲಿಸಲಾಯಿತು.
ವಿದ್ಯುತ್ ಬಿಲ್ ಸುಟ್ಟು ಆಕ್ರೋಶ
ನೇಕಾರರು ತಮ್ಮ ವಿದ್ಯುತ್ ಬಿಲ್‌ಗಳನ್ನು ಸುಟ್ಟು ಆಕ್ರೋಶ ಹೊರಹಾಕಿದರು. ಯಾವದೇ ಕಾರಣಕ್ಕೂ ವಿದ್ಯುತ್ ಬಿಲ್ ಪಾವತಿಸುವದಿಲ್ಲವೆಂದು ಸ್ಪಷ್ಟನೆ ನೀಡಿದರು.
ಬೆಂಬಲ
ನೇಕಾರರ ಹೋರಾಟಕ್ಕೆ ರೈತ ಸಂಘ, ಭಗತ್‌ಸಿಂಗ್ ಯುವಕ ಸಂಘ, ಆಮ್ ಆದ್ಮಿ ಪಕ್ಷ, ಡಿಎಸ್‌ಎಸ್ ಸೇರಿದಂತೆ ಅನೇಕ ಸಂಘಟನೆಗಳು ಬೆಂಬಲ ವ್ಯಕ್ತಪಡಿದ್ದವು.
ಸಂಚಾರಕ್ಕೆ ತೊಂದರೆ
ಮಧ್ಯಾಹ್ನ ಹೊತ್ತು ಜಮಖಂಡಿ-ಕುಡಚಿ ರಾಜ್ಯ ಹೆದ್ದಾರಿಯಲ್ಲಿ ಬಂದ್ ಕಾವು ಹೆಚ್ಚಾಗುತ್ತಿದ್ದಂತೆ ಸಂಚಾರಕ್ಕೆ ತೀವ್ರ ತೊಂದರೆಯಾಗುವಲ್ಲಿ ಕಾರಣವಾಯಿತು
