ಹುಬ್ಬಳ್ಳಿ : ನಾನು ಶಿಗ್ಗಾವಿ ಕ್ಷೇತ್ರದಲ್ಲೇ ಸ್ಪರ್ಧೆ ಮಾಡ್ತೇನೆ. ಎರಡು ಕಡೆ ಸ್ಪರ್ಧೆ ಮಾಡುತ್ತೇನೆ ಎಂಬುದೆಲ್ಲ ಊಹಾಪೋಹ. ಅದನ್ನೆಲ್ಲ ಸಿರೀಯಸ್ ಆಗಿ ತೆಗೆದುಕೊಳ್ಳಬೇಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.
ಗುರುವಾರ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಪ್ರಿಲ್ 8 ರಂದು ನಮ್ಮ ಪಕ್ಷದ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಲಿದೆ. ಹಾಲಿ ಕೆಲ ಶಾಸಕರ ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲಾದ ತಕ್ಷಣ ಆರೋಪ ಸಾಬೀತಾದಂತಲ್ಲ. ವಿರೋದ ಪಕ್ಷಗಳ ಆರೋಪದಲ್ಲಿ ಅರ್ಥವಿಲ್ಲ. ಟಿಕೆಟ್ ವಿಚಾರದಲ್ಲಿ ಪಕ್ಷದ ವರಿಷ್ಠರು ಸೂಕ್ತ ತೀರ್ಮಾನ ಮಾಡ್ತಾರೆ ಎಂದರು.
ನಟ ಪವನ್ ಕಲ್ಯಾಣ ಅವರು ಪ್ರಚಾರಕ್ಕೆ ಆಗಮಿಸುತ್ತಾರೆ ಎಂಬ ವಿಷಯ ಗೊತ್ತಿಲ್ಲ. ಪಕ್ಷದ ರಾಷ್ಟ್ರೀಯ ಮಟ್ಟದಲ್ಲಿ ತೀರ್ಮಾನ ಮಾಡಿರಬಹುದು ಎಂದರು. ಒಳಮೀಸಲಾತಿ ಕೊಡುತ್ತೇವೆ ಎಂದು ಬರೀ ಭರವಸೆ ನೀಡಿಕೊಂಡು ಬಂದಿದ್ದ ಕಾಂಗ್ರೆಸ್ ನಾಯಕರಿಗೆ ಭ್ರಮ ನಿರಸನವಾಗಿದೆ. ಅವರು ಮಾಡಿದ್ದೇ ಅವರಿಗೆ ತಿರುಗುಬಾಣವಾಗಿದೆ. ಹೀಗಾಗಿ ನಾವು ಒಳಮೀಸಲಾತಿ ಕುರಿತು ಕೈಗೊಂಡ ತೀರ್ಮಾನದ ಬಗ್ಗೆ ಹತಾಷೆಯಿಂದ ಟೀಕೆ ಮಾಡುತ್ತಿದ್ದಾರೆ ಎಂದು ಹೇಳಿದರು. ವಿನಯ್ ಕುಲಕರ್ಣಿ ಅವರು ಎಲ್ಲಿ ಸ್ಪರ್ಧೆ ಮಾಡುತ್ತಾರೊ ಗೊತ್ತಿಲ್ಲ. ಅದು ಅವರ ಪಕ್ಷದ ಆಂತರಿಕ ವಿಚಾರ ಎಂದು ಹೇಳಿದರು.