ಹುಬ್ಬಳ್ಳಿ: ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದ ಕನ್ನಡ ಗಂಡು ಮಕ್ಕಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ೨೦೨೫-೨೬ನೇ ಸಾಲಿನ ಶೈಕ್ಷಣಿಕ ವರ್ಷದ ಮೊದಲನೇ ತರಗತಿ ದಾಖಲಾತಿಗೆ ೧೨ ಹೆಣ್ಣು ಮಕ್ಕಳನ್ನು ದಾಖಲು ಮಾಡಿಕೊಂಡ ಪ್ರಕರಣ ಬೆಳಕಿಗೆ ಬಂದಿದೆ.
ಈ ಶಾಲೆಗೆ ನಿಯಮಾವಳಿ ಉಲ್ಲಂಘಿಸಿ ಹೆಣ್ಣು ಮಕ್ಕಳನ್ನು ದಾಖಲು ಮಾಡಿಕೊಂಡಿರುವ ವಿಷಯವನ್ನು ಅದೇ ಗ್ರಾಮದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರು ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು ಸಲ್ಲಿಸಿ ಗಮನ ಸೆಳೆದಿದ್ದಾರೆ.
ಬಿಇಓಗೆ ಬರೆದ ಪತ್ರದಲ್ಲೇನಿದೆ?
ಈ ಗ್ರಾಮದಲ್ಲಿ ಪ್ರತ್ಯೇಕವಾಗಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಇದೆ. ಅಲ್ಲದೇ, ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇದೆ. ಆದರೂ ಗಂಡು ಮಕ್ಕಳ ಶಾಲೆಗೆ ಹೆಣ್ಣು ಮಕ್ಕಳ ದಾಖಲಾತಿ ಮಾಡಿರುವ ಬಗ್ಗೆ ಪರಿಶೀಲನೆ ಮಾಡಬೇಕು ಎಂದು ಪತ್ರದಲ್ಲಿ ಕೋರಲಾಗಿತ್ತು.
ಈ ಬಗ್ಗೆ ಪರಿಶೀಲನೆ ನಡೆಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಮಹಾದೇವಿ ಮಾಡಲಗೇರಿ ಅವರು, ಮುಖ್ಯ ಶಿಕ್ಷಕರಿಗೆ ನೋಟಿಸ್ ನೀಡಿದ್ದಾರೆ. ಅಲ್ಲದೇ, ಈ ಶಾಲೆ ಮುಖ್ಯ ಶಿಕ್ಷಕರು ದಾಖಲಾತಿ ಮಾಡಿಕೊಂಡಿರುವುದು ನಿಯಮಾವಳಿ ಪ್ರಕಾರ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ. ಡಿಡಿಪಿಐ ಅವರಿಗೂ ವಿಷಯ ಗಮನಕ್ಕೆ ತಂದಿದ್ದಾರೆ.
ನಮ್ಗೆ ಇದೇ ಶಾಲೆ ಬೇಕು: ಪೋಷಕರ ಮನವಿ
ನಮ್ಮ ಮಕ್ಕಳಿಗೆ ಗ್ರಾಮದ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲೇ ಪ್ರವೇಶ ಕೊಡಬೇಕು. ಯಾಕೆಂದರೆ ಎಲ್‌ಕೆಜಿ, ಯುಕೆಜಿ ಈ ಶಾಲೆಯಲ್ಲಿಯೇ ಕಲಿತಿದ್ದಾರೆ. ಹೀಗಾಗಿ ೧ ನೇ ತರಗತಿ ಪ್ರವೇಶ ಸೇರಿ ಮುಂದಿನ ಶಿಕ್ಷಣವೂ ಇದೇ ಶಾಲೆಯಲ್ಲಿಯೇ ಪಡೆಯಬೇಕು. ಈ ಶಾಲೆ ನಮ್ಮ ಮಕ್ಕಳಿಗೆ ಬಂದು ಹೋಗಲು ಹತ್ತಿರ ಇದೆ. ಮನೆ ಹತ್ತಿರ ಇರುವ ಶಾಲೆಗೆ ಸೇರಿಸದೇ ದೂರದ ಶಾಲೆಗೆ ಯಾಕೆ ಸೇರಿಸಬೇಕು. ಇದೇ ಶಾಲೆಗೆ ಹೆಣ್ಣು ಮಕ್ಕಳ ಶಾಲೆ ವಿಲೀನಗೊಳಿಸಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪೋಷಕರು ಮನವಿ ಮಾಡಿದ್ದಾರೆ.
ಈ ಕುರಿತು ಮಾತನಾಡಿರುವ ಕುಂದಗೋಳ ಕ್ಷೇತ್ರ ಶಿಕ್ಷಣಾಧಿಕಾರಿ ಮಹಾದೇವಿ ಮಾಡಲಗೇರಿ, ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆಗೆ ಹೆಣ್ಣು ಮಕ್ಕಳ ದಾಖಲಾತಿ ಸರ್ಕಾರಿ ನಿಯಮಾನುಸಾರ ತಪ್ಪು. ಈ ಬಗ್ಗೆ ಶಾಲೆ ಮುಖ್ಯ ಶಿಕ್ಷಕರಿಗೆ ನೋಟಿಸ್ ನೀಡಿದ್ದೇನೆ. ಅಲ್ಲಿನ ಪಾಲಕರು ಶಾಲೆಗಳ ವಿಲೀನ ಮಾಡುವಂತೆ ಪರಿಶೀಲನೆ ವೇಳೆ ತಿಳಿಸಿದ್ದಾರೆ. ಶಾಲೆಗಳ ವಿಲೀನ ಸರ್ಕಾರದ ಮಟ್ಟದಲ್ಲಿ ಆಗುವ ಕೆಲಸ. ಈ ಬಗ್ಗೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಮುಂದಿನ ಕ್ರಮ ಕೈಗೊಳ್ಳಲು ದಾಖಲಾತಿ ಸಲ್ಲಿಸಿದ್ದೇನೆ ಎಂದು ಹೇಳಿದ್ದಾರೆ.