Home ನಮ್ಮ ಜಿಲ್ಲೆ ವೇಟ್ ಆ್ಯಂಡ್ ಸೀ

ವೇಟ್ ಆ್ಯಂಡ್ ಸೀ

0

ಇನ್ನು ಕೆಲವೇ ದಿನಗಳು ತಡೀರಿ ನಾನೇ ಗ್ಯಾರಂಟಿ ಎಂದು ಅಲೈಕನಕ ಅಲ್ಲೆಲ್ಲೋ ಹೊಸಬಾವಿಯ ದಂಡೆಯ ಮೇಲೆ ನಿಂತು ಹೇಳಿದ್ದು ಈಗ ಗುಟ್ಟಾಗಿ ಉಳಿದಿಲ್ಲ. ಕನಕ ಹೀಗೆ ಹೇಳಿದ್ದಾನೆ ಎಂದು ಊರು ಪರಊರ ತುಂಬ ಸುದ್ದಿಯಾಗಿದೆ. ಅಲೆಲೆಲೆ ಬರೇ ಅಲೈಕನಕ ಯಾಕೆ ಎಂದು ಖ್ಯಾಡ್ಯಾದುಸೇನಿ… ಅಯ್ಯೋ ಅವನೇನು ಹೇಳುತ್ತಾನೆ ತಲೀ… ಅವನಿಗಿಂತ ಕಡಿಮಿ ಸಮಯ ತಡೀರಿ ನಾನೇ ಗ್ಯಾರಂಟಿ ಎಂದು ಹೇಳಿದ್ದ. ಇವರಿಬ್ಬರೂ ಹೀಗೆ ಹೇಳಿದ್ದಾರಲ್ಲ ನಾನೇಕೆ ಏನಾದರೂ ಯಾಕೆ ಹೇಳಬಾರದು ಎಂದು ಇರಪಾಪುರ ಮಾದೇವ ಡೊಗ್ಗಿಯ ಮೇಲೆ ನಿಂತು… ಅಯ್ಯೋ ಅವರಿಬ್ಬರದ್ದೂ ಸುಳ್ಳು ಗ್ಯಾರಂಟಿ ನಾನೇ ನೋಡುತಿರಿ ಬೇಕಾದರೆ ಎಂದು ಒದರೊದರಿ ಹೇಳಿದ. ಅವನು ಹೀಗೆ ಅಂದಿದಾನೆ ಎಂದು ಇವನು… ಇವನು ಹೀಗೆ ಅಂತಿದಾನೆ ನಾನ್ಯಾಕೆ ಬಿಡಬೇಕು ಎಂದು ಮತ್ತೊಬ್ಬನು.. ಹೀಗೆ ಸಿಕ್ಕಸಿಕ್ಕವರೆಲ್ಲ ನಾ ಗ್ಯಾರಂಟಿ..ನೀ ಗ್ಯಾರಂಟಿ ಎಂದು ಹೇಳತೊಡಗಿದರು. ಇದೇನಿದೂ ಕೇಳಿದರೆ ಅಮ್ಮನವರನ್ನೇ ಕೇಳಬೇಕು ಎಂದು ಕನ್ನಾಳ್ಮಲ್ಲ ವಸ್ತಿ ಬಸ್ಸು ಹತ್ತಿ ಸೀದಾ ಡೆಲ್ಲಿಗೆ ಹೋದ. ಅಲ್ಲಿ ಅಮ್ಮನವರನ್ನು ಭೇಟಿಯಾಗಬೇಕು ಎಂದು ಎರಡು ದಿನ ಕಾದರೂ ಅಮ್ಮನವರು ಅಪಾಯಿಂಟ್ಮೆಂಟೇ ಕೊಡಲಿಲ್ಲ. ಬರೋ ಹೋಗೋ ಜನ ಜಾಸ್ತಿಯಾಗಿದ್ದಾರೆ ಅದಕ್ಕೆ ನೀವು ಕಾಯಲೇಬೇಕು ಎಂದು ಅಮ್ಮನವರ ಪಿಎ ಸಂದೇಶಕೊಟ್ಟಾಗ ಕನ್ನಾಳ್ಮಲ್ಲ ಆಯಿತು ಎಂದು ಕ್ವಾಂಟ್ರಯಂಕೋಬಿಯ ಪರಿಚಯದವರ ಹೋಟೆಲ್‌ನಲ್ಲಿ ಕಡಿಮೆ ರೆಂಟಿಗೆ ರೂಮು ಮಾಡಿಕೊಂಡು ಇದ್ದ. ಪ್ರತಿದಿನ ಅಮ್ಮನವರ ಮನೆಯ ಗೇಟಿಗೆ ಹೋಗುವುದು… ಅಮ್ಮೋರೆ ನಾನು ಬಂದಿದ್ದೇನೆ ಎಂದು ಹೇಳಿಕಳುಹಿಸುತ್ತಿದ್ದ. ಅವರು ತಡೀ..ತಡೀ ಅಂದಾಗ ಮತ್ತೆ ಅಲ್ಲಿಲ್ಲಿ ತಿರುಗಾಡಿ ರೂಮಿಗೆ ಬಂದು ಊಟಮಾಡಿ ಮಲಗುತ್ತಿದ್ದ. ಅಲ್ಲಿ ಮಾತ್ರ ನಾನು ಗ್ಯಾರಂಟಿ ಅನ್ನುವವರ ಸಂಖ್ಯೆ ಹೆಚ್ಚಾಗುತ್ತ ಹೋಯಿತು. ಅಲ್ಲಿ ಏನಾಗುತ್ತಿದೆ. ಯರ‍್ಯಾರು ಏನೇನು ಅನ್ನುತ್ತಿದ್ದಾರೆ ಎಂದು ಲೊಂಡೆನುಮ ಕನ್ನಾಳ್ಮಲ್ಲನಿಗೆ ಮೆಸೇಜ್ ಮಾಡಿ ತಿಳಿಸುತ್ತಿದ್ದ. ಮಲ್ಲನಿಗೆ ತಲೆಕೆಟ್ಟು ಹೋಗಿತ್ತು. ಬೇಗನೇ ಇದಕ್ಕೆ ಪರಿಹಾರ ಹುಡುಕಬೇಕು ಎಂದು ಅವತ್ತು ಅಮ್ಮನವರ ಪಿಎಗೆ ಕೈಕಾಲು ಹಿಡಿದು ಅಪಾಯಿಂಟ್‌ಮೆಂಟ್ ತೆಗೆದುಕೊಂಡು ಅಮ್ಮನವರನ್ನು ಭೇಟಿಯಾದ. ಏನು ಮಲ್ಲಾ ಬಹಳ ದಿನಗಳ ನಂತರ ಬಂದಿ? ಎಂದು ಕೇಳಿದಾಗ… ಏನ್ ಅಮ್ಮೋರೆ.. ಅಲ್ಲೆಲ್ಲ ನಾನೇ ಗ್ಯಾರಂಟಿ.. ನಾನೇ ಗ್ಯಾರಂಟಿ ಅನ್ನುತ್ತಿದ್ದಾರೆ. ಏನಿದೆಲ್ಲ ಅಂದಾಗ… ಅಮ್ಮನವರು ವೇಟ್ ಆ್ಯಂಡ್ ಸೀ ಅಂದರು. ಮರುದಿನ ಮಲ್ಲ ಊರಿಗೆ ಬಂದು ವೇಟ್ ಆ್ಯಂಡ್ ಸೀ ಗ್ಯಾರಂಟಿ ಇವರೆಲ್ಲ ಗೋರಂಟಿ ಎಂದು ಸಾರಿದ.

Exit mobile version