Home ನಮ್ಮ ಜಿಲ್ಲೆ ಮೈಸೂರು: ಬರದ ಛಾಯೆ, ಬೆಳೆ ಒಣಗುವ ಭೀತಿ

ಮೈಸೂರು: ಬರದ ಛಾಯೆ, ಬೆಳೆ ಒಣಗುವ ಭೀತಿ

0

ಆನಂದ್ ಹೊಸೂರ್

ರಾಜ್ಯದಲ್ಲಿ ಉತ್ತಮ ಮಳೆಯಾಗಿ ಮಳೆಹಾನಿಗೊಂಡ ವರದಿಗಳ ನಡುವೆ ಮೈಸೂರು ಜಿಲ್ಲೆಯ ಚುಂಚನಕಟ್ಟೆ ಹೋಬಳಿ ಮಾತ್ರ ಮಳೆ ಕೊರತೆಯಿಂದ ಬಳಲುತ್ತಿದ್ದು ಬರ ಆವರಿಸಿದೆ. ಕಳೆದ ಬಾರಿಗಿಂತ ಈ ಬಾರಿ ರಾಜ್ಯದ ಕರಾವಳಿ, ಉತ್ತರ ಒಳನಾಡು ಮತ್ತು ಮದ್ಯ ಕರ್ನಾಟಕ ಸೇರಿದಂತೆ ಎಲ್ಲೆಡೆ ಭರ್ಜರಿ ಮಳೆಯಾಗುತ್ತಿದ್ದು, ಆದರೆ ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲ್ಲೂಕು ವ್ಯಾಪ್ತಿಯ ಚುಂಚನಕಟ್ಟೆ ಹೋಬಳಿ ಮಾತ್ರ ಕಳೆದ 3 ತಿಂಗಳಿಂದಲೂ ಒಂದು ಹದವಾದ ಮಳೆಯಾಗದೇ ಮಳೆಯಾಶ್ರಿತ ಒಣ ಪ್ರದೇಶವುಳ್ಳ ಆಕಾಶಕ್ಕೆ ಕೈಯೊಡ್ಡಿ ವರುಣನ ಕೃಪೆಗೆ ಕಾಯುವಂತಾಗಿದೆ.

ಹೋಬಳಿಯ ಮಟ್ಟಿಗೆ ಹೇಳುವುದಾದರೆ ಜೂನ್ ಆರಂಭದಲ್ಲಿ ಕೊಂಚ ಪ್ರಮಾಣದ ಮಳೆಯಾಗಿದ್ದರೆ ಜುಲೈನಲ್ಲಿ ವಾಡಿಕೆ ಮಳೆ 78.8 ಮಿ.ಮೀ. ಇದ್ದು 45.2 ಮಿ.ಮೀ ಮಾತ್ರ ಸುರಿದು ಶೇ. 43ರಷ್ಟು ಕೊರತೆಯಾದರೆ, ಆಗಸ್ಟ್‌ ವಾಡಿಕೆ 66.5 ಇದ್ದು 42.1 ಮಿ.ಮೀ. ಮಾತ್ರ ಮಳೆ ಇದ್ದು ಶೇ 37ರಷ್ಟು ಕೊರತೆಯುಂಟಾಗಿದ್ದು ಸೆಪ್ಟೆಂಬರ್‌ನಲ್ಲಿ ಸಂಪೂರ್ಣ ಒಣಹವೆ ಇದ್ದು ಜೂನ್‌ನಿಂದ ಸೆಪ್ಟಂಬರ್ ತನಕ ವಾಡಿಕೆ ಮಳೆ 220 ಮಿ.ಮೀ. ಇದ್ದು 133 ಮಿ.ಮೀ. ಮಳೆಯಾಗಿದ್ದು ಶೇ 40ರಷ್ಟು ಮಳೆ ಕೊರತೆಯಾಗಿದ್ದು ಗಂಭೀರ ಸಮಸ್ಯೆ ಎದುರಾಗಿದೆ.

ಮಳೆ ಕೊತೆಯಿಂದ ಹೊಲಗಳು ಪಾಳು ಬೀಳುತ್ತಿದ್ದು ಆಗಾಗ್ಗೆ ಬಿದ್ದ ಸಣ್ಣ ಸೋನೆ ಮಳೆಗೆ ಹಾಕಿದ್ದ ಹುರುಳಿ,ಜೋಳ ಮತ್ತು ದನಕರುಗಳ ಮೇವು ಸಂಪೂರ್ಣ ಹಾನಿಯಾಗಿದ್ದು ಕೃಷಿ ಇಲಾಖೆ ಇತ್ತ ಗಮನಹರಿಸಿ ರೈತರ ನೆರವಿಗೆ ಧಾವಿಸಬೇಕಿದ್ದು ಇತ್ತ ಭತ್ತದ ಕಣಜ ಎಂದೇ ಹೆಸರಾಗಿರುವ ಸಾಲಿಗ್ರಾಮ ತಾಲೂಕಿನ ಈ ಭಾಗದಲ್ಲಿ ಮಳೆಪ್ರಮಾಣ ಕುಸಿತಗೊಂಡ ಕಾರಣ ನಾಟಿ ಮಾಡಿರುವ ಭತ್ತಕ್ಕೆ ರೋಗರುಜಿನಗಳು ಕಾಡುತ್ತಿರುವುದು ಹೊಸ ಸಮಸ್ಯೆಯಾಗಿ ರೈತರನ್ನು ಕಾಡುತ್ತಿದೆ.

ಒಂದೆಡೆ ಮಳೆ ಕೊರತೆಯಾಗಿ ಮಳೆಯಾಶ್ರಿತ ಭೂಮಿ ಒಣಗಿ ಹೋಗಿದ್ದು ಅಲ್ಲಲ್ಲಿ ಇರುವ ಬೋರ್‍ವೆಲ್‍ಗಳು,ಪಂಪ್‍ಸೆಟ್‍ಗಳು ನೀರಿಲ್ಲದೇ ಒಣಗುತ್ತಿದ್ದು ದನಕರುಗಳ ಮೇವಿಗೂ ತೊಂದರೆ ಎದುರಾಗಿದ್ದರೂ ಕೃಷಿ ಇಲಾಖೆ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಇತ್ತ ಗಮನಹರಿಸದಿರುವುದು ಬೇಸರದ ಸಂಗತಿಯಾಗಿದೆ.

ಒಟ್ಟಾರೆ ತಾಲೂಕಿನ ವ್ಯಾಪ್ತಿಯಲ್ಲಿ ನೀರಾವರಿ ಜಮೀನಿನ ವ್ಯಾಪ್ತಿ ಹೆಚ್ಚಿದ್ದು ಹೊಸೂರು, ಚುಂಚನಕಟ್ಟೆ, ಹನಸೋಗೆ, ಹಾಡ್ಯ, ಹಳಿಯೂರು ಗ್ರಾಮಗಳು ಸೇರಿದಂತೆ ವಿವಿಧ ಗ್ರಾಮಗಳು ನಾಲೆಗಳು ಹರಿಯುವುದರಿಂದ ಸಮಸ್ಯೆ ಗಂಭೀರಗೊಂಡಿಲ್ಲ ಆದರೆ ಒಣ ಭೂಮಿ ಹೊಂದಿರುವ ಬೆಣಗನಹಳ್ಳಿ,ಹೊಸಕೋಟೆ,ಕುಪ್ಪೆ,ನಿಜಗನಹಳ್ಳಿ,ಕೋಗಿಲೂರು ಸೇರಿದಂತೆ ಮತ್ತಿತರರ ಭಾಗಗಳಲ್ಲಿ ಗಂಭೀರಗೊಂಡಿದ್ದು ತಾಲೂಕು ಆಡಳಿತ, ಶಾಸಕರು ಇತ್ತ ಗಮನಹರಿಸಿ ರೈತರ ನೆರವಿಗೆ ಧಾವಿಸಬೇಕಿದೆ.

ಈ ಕುರಿತು ಮಾತನಾಡಿದ ಹೆಚ್.ಡಿ.ಭಾಸ್ಕರ್ ರೈತಸಂಘ ಹಸಿರುಸೇನೆ ಅಧ್ಯಕ್ಷ (ವಾಸುದೇವ್ ಮೇಟಿ ಬಣ) ಸಾಲಿಗ್ರಾಮ ತಾ. “ಚುಂಚನಕಟ್ಟೆ ಹೋಬಳಿ ಕಳೆದ 2 ವರ್ಷಗಳ ಹಿಂದಿನ ಬರಗಾಲದ ಸಮಯದಲ್ಲೂ ಇಂತಹ ಮಳೆಕೊರತೆಯನ್ನು ಎದುರಿಸಿರಲಿಲ್ಲ ಆದರೆ ಈ ಬಾರಿ ಅಕ್ಕಪಕ್ಕದ ತಾಲೂಕುಗಳಿಗಿಂತ ಅತಿ ಕಡಿಮೆ ಮಳೆಬಿದ್ದಿದ್ದು ಇದರಿಂದ ಕಬ್ಬು ಸೇರಿದಂತೆ ಎಲ್ಲಾ ಬೆಳೆಗಳ ಇಳುವರಿಗಳು ಕುಂಠಿತವಾಗಿರುವುದೇ ಸಾಕ್ಷಿಯಾಗಿದೆ” ಎಂದು ಹೇಳಿದ್ದಾರೆ.

ಮಧು ಕರ್ತಾಳ್ ರೈತಮುಖಂಡರು ಮಾತನಾಡಿ, “ರಾಜ್ಯದಲ್ಲಿ ಈ ಬಾರಿ ಭರ್ಜರಿ ಮಳೆಗಾಲವಾಗಿದ್ದು ಜೂನ್ ಆರಂಭದಲ್ಲೇ ಡ್ಯಾಂಗಳು ಭರ್ತಿಯಾಗಿದ್ದವು. ಆದರೆ ನಮ್ಮ ಹೋಬಳಿ ಮಟ್ಟಿಗೆ ಬರಗಾಲ ಆವರಿಸಿದ್ದು ಕಳೆದ 3 ತಿಂಗಳಿಂದ ಮಳೆ ಇಲ್ಲವಾಗಿದ್ದು ಸದ್ಯ ಹುರುಳಿ, ಜೋಳ, ಅವರೆ, ರಾಗಿ ಬಿತ್ತನೆ ಮೇಲೆ ಪರಿಣಾಮ ಉಂಟಾಗಿದೆ ತೆಂಗು, ಬಾಳೆ ಮತ್ತು ಭತ್ತದ ಮೇಲೂ ವ್ಯತಿರಿಕ್ತ ಪರಿಣಾಮಗಳು ಉಂಟಾಗಿದ್ದು ಸರ್ಕಾರ ಈ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ ಪರಿಹಾರ ನೀಡಬೇಕು” ಎಂದು ಆಗ್ರಹಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version