Home ನಮ್ಮ ಜಿಲ್ಲೆ ಬೆಂಗಳೂರು: ಏರ್‌ಪೋರ್ಟ್‌ಗೆ ಬಿಎಂಟಿಸಿ ಎಸಿ ಎಲೆಕ್ಟ್ರಿಕ್‌ ಬಸ್‌ ಸಂಚಾರ ಆರಂಭ

ಬೆಂಗಳೂರು: ಏರ್‌ಪೋರ್ಟ್‌ಗೆ ಬಿಎಂಟಿಸಿ ಎಸಿ ಎಲೆಕ್ಟ್ರಿಕ್‌ ಬಸ್‌ ಸಂಚಾರ ಆರಂಭ

0

ಬೆಂಗಳೂರು ನಗರದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಿಎಂಟಿಸಿ ಬಸ್ ಮೂಲಕ ಪ್ರಯಾಣ ಮಾಡುವ ಜನರಿಗೆ ಸಿಹಿಸುದ್ದಿ. ಎಸಿ ಎಲೆಕ್ಟ್ರಿಕ್ ಬಸ್‌ಗಳ ಮೂಲಕ ಇನ್ನು ಏರ್‌ಪೋರ್ಟ್ ತಲುಪಬಹುದು. 2024ರಲ್ಲಿ ಸುಮಾರು 4 ಕೋಟಿ ಜನರು ಬೆಂಗಳೂರು ನಗರದಿಂದ ವಿಮಾನ ನಿಲ್ದಾಣಕ್ಕೆ ಬಿಎಂಟಿಸಿ ಬಸ್ ಮೂಲಕ ಸಂಚಾರವನ್ನು ನಡೆಸಿದ್ದಾರೆ.

ಬಿಎಂಟಿಸಿ ಏರ್‌ಪೋರ್ಟ್‌ಗೆ ವಾಯು ವಜ್ರ ಎಸಿ ವೋಲ್ವೊ ಬಸ್‌ಗಳನ್ನು ಓಡಿಸುತ್ತದೆ. ಆದರೆ ಗುರುವಾರದಿಂದ ವಾಯು ವಜ್ರ ಬಸ್‌ಗಳ ಬದಲು ಎಸಿ ಎಲೆಕ್ಟ್ರಿಕ್ ಬಸ್‌ಗಳು ಏರ್‌ಪೋರ್ಟ್‌ಗೆ ಸಂಪರ್ಕ ಕಲ್ಪಿಸಲಿವೆ. ಕ್ಯಾಬ್, ಖಾಸಗಿ ವಾಹನ ಬಿಟ್ಟು ಜನರು ಸುಲಭವಾಗಿ ಎಸಿ ಎಲೆಕ್ಟ್ರಿಕ್ ಬಸ್‌ನಲ್ಲಿ ಏರ್‌ಪೋರ್ಟ್‌ ತಲುಪಬಹುದು.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಸದ್ಯ ಏರ್‌ಪೋರ್ಟ್‌ಗೆ 150 ಡೀಸೆಲ್ ವಾಯು ವಜ್ರ ವೋಲ್ವೊ ಬಸ್‌ಗಳನ್ನು ಓಡಿಸುತ್ತಿದೆ. ಈಗ 85 ಎಲೆಕ್ಟ್ರಿಕ್ ಎಸಿ ಬಸ್‌ಗಳು ವೋಲ್ವೊ ಬಸ್‌ಗಳ ಬದಲಾಗಿ ಸಂಚಾರ ನಡೆಸಲಿವೆ. ಆಗಸ್ಟ್ 14ರ ಗುರುವಾರದಿಂದ ಅನ್ವಯವಾಗುವಂತೆ 5-10 ಮಾದರಿಯಲ್ಲಿ ಹಂತ ಹಂತವಾಗಿ ವಿವಿಧ ಮಾರ್ಗದಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಎಸಿ ಎಲೆಕ್ಟ್ರಿಕ್ ಬಸ್‌ಗಳು ಸಂಚಾರವನ್ನು ಆರಂಭಿಸಲಿವೆ.

ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಗುರುವಾರ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2ರಲ್ಲಿ ಎಸಿ ಎಲೆಕ್ಟ್ರಿಕ್ ಬಸ್‌ಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಲಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ, ಜಿಗಣಿ ಭಾಗದಿಂದ ಏರ್‌ಪೋರ್ಟ್‌ಗೆ ಸಂಚಾರ ನಡೆಸುವ ವೋಲ್ವೊ ಬಸ್‌ಗಳನ್ನು ಮೊದಲು ಬದಲಾವಣೆ ಮಾಡಿ ಎಸಿ ಎಲೆಕ್ಟ್ರಿಕ್ ಬಸ್‌ಗಳನ್ನು ನಿಯೋಜನೆ ಮಾಡಲಾಗುತ್ತದೆ.

ಚಾರ್ಜಿಂಗ್ ಪಾಯಿಂಟ್ ಸ್ಥಾಪನೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮೆಜೆಸ್ಟಿಕ್-ಕೆಐಎ ನಡುವೆ ಎಲೆಕ್ಟ್ರಿಕ್ ಬಸ್‌ಗಳು ಓಡಲಿವೆ. ಅಶೋಕ್ ಲೈಲಾಂಡ್ ಅಂಗ ಸಂಸ್ಥೆ ಓಹೆಚ್‌ಎಂ ಗ್ಲೋಬಲ್ ಮೊಬಿಲಿಟಿ ಬಿಎಂಟಿಸಿಗೆ 320 ಎಸಿ ಎಲೆಕ್ಟ್ರಿಕ್ ಬಸ್‌ಗಳನ್ನು ನೀಡುವ ಟೆಂಡರ್ ಪಡೆದಿದೆ.

ಈಗಾಗಲೇ ಟೆಕ್ ಕಾರಿಡಾರ್‌ನಲ್ಲಿ ಎಸಿ ಎಲೆಕ್ಟ್ರಿಕ್ ಬಸ್‌ಗಳು ಸಂಚಾರವನ್ನು ನಡೆಸುತ್ತಿದೆ. ಆದರೆ ಏರ್‌ಪೋರ್ಟ್‌ನಲ್ಲಿ ಚಾರ್ಜಿಂಗ್ ಸ್ಟೇಷನ್ ನಿರ್ಮಾಣ ಮಾಡುವುದು ತಡವಾದ ಕಾರಣ ಈಗ ಏರ್‌ಪೋರ್ಟ್‌ಗೆ ಎಲೆಕ್ಟ್ರಿಕ್ ಬಸ್‌ ಓಡುತ್ತಿದೆ. ಜಿಸಿಸಿ ಮಾದರಿ ಟೆಂಡರ್ ಅಡಿಯಲ್ಲಿ ಬಿಎಂಟಿಸಿಗೆ ಎಸಿ ಎಲೆಕ್ಟ್ರಿಕ್ ಬಸ್ ನೀಡಲಾಗುತ್ತಿದೆ. ಬಿಎಂಟಿಸಿ ಈ ಬಸ್‌ಗಳಿಗೆ ಪ್ರತಿ ಕಿ.ಮೀ. ಸಂಚಾರಕ್ಕೆ 65.80 ರೂ. ಪಾವತಿ ಮಾಡಲಿದೆ.

ಬಸ್ ನಿರ್ವಹಣೆ, ಚಾರ್ಜಿಂಗ್ ಪಾಯಿಂಟ್ ಸ್ಥಾಪನೆ, ಡ್ರೈವರ್ ನಿಯೋಜನೆ, ಬಸ್ ಸಂಚಾರದ ಹೊಣೆ ಕಂಪನಿಯದ್ದು. ಬಿಎಂಟಿಸಿ ಬಸ್‌ಗೆ ನಿರ್ವಾಹಕರನ್ನು ನೀಡುತ್ತದೆ. ಈಗ ಇದೇ ಮಾದರಿಯಲ್ಲಿ ವಿವಿಧ ಕಂಪನಿಗಳ ಜೊತೆ ಬಿಎಂಟಿಸಿ ಒಪ್ಪಂದ ಮಾಡಿಕೊಂಡು ಬಸ್ ಓಡಿಸುತ್ತಿದೆ.

ಈಗ ಏರ್‌ಪೋರ್ಟ್‌ಗೆ ಬಸ್ ಓಡಿಸುವ ಕಂಪನಿ ವರ್ಷದಲ್ಲಿ 350 ದಿನ 12 ವರ್ಷಗಳ ಕಾಲ ಪ್ರತಿದಿನ 225 ಕಿ.ಮೀ. ಬಸ್ ಸಂಚಾರ ನಡೆಸಬೇಕಿದೆ. ಸದ್ಯ ಬಿಎಂಟಿಸಿ ಬಳಿ 1,436 ವಿವಿಧ ಕಂಪನಿ ಎಲೆಕ್ಟ್ರಿಕ್ ಬಸ್‌ಗಳಿವೆ. ಆದರೆ ಏರ್‌ಪೋರ್ಟ್‌ಗೆ ಮೊದಲ ಬಾರಿಗೆ ಎಲೆಕ್ಟ್ರಿಕ್ ಬಸ್ ಓಡಿಸಲಾಗುತ್ತಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version