ನವದೆಹಲಿ: ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರಿ ಹಾಗೂ ಭಾರತ್ ರಾಷ್ಟ್ರ ಸಮಿತಿ ನಾಯಕಿ ಕೆ ಕವಿತಾ ಅವರಿಗೆ ದೆಹಲಿಯ ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಜಾರಿ ನಿರ್ದೇಶನಾಲಯ ಗುರುವಾರ ಹಾಜರಾಗುವಂತೆ ಸಮನ್ಸ್ ನೀಡಿದೆ.
ಇದೀಗ ರದ್ದಾಗಿರುವ ದೆಹಲಿಯ ಮದ್ಯನೀತಿಯಲ್ಲಿ ಅಕ್ರಮ ಹಾಗೂ ಭ್ರಷ್ಟಾಚಾರ ನಡೆದಿರುವುದಕ್ಕೆ ಸಂಬಂಧಿಸಿದಂತೆ ಹೈದರಾಬಾದ್ ಮೂಲದ ಉದ್ಯಮಿ ಅರುಣ್ ರಾಮಚಂದ್ರನ್ ಪಿಳ್ಳೈ ಅವರನ್ನು ಇಡಿ ಸೋಮವಾರ ವಿಚಾರಣೆ ನಡೆಸಿ, ಮಂಗಳವಾರ ಬಂಧಿಸಿತ್ತು. ಪಿಳ್ಳೈ ಮದ್ಯನೀತಿ ಪ್ರಕರಣದಲ್ಲಿ ಆರೋಪಿಯಾಗಿದ್ದು, ಕವಿತಾಗೆ ಕಂಪನಿಯೊಂದರಲ್ಲಿ ಸಹಾಯ ಮಾಡುತ್ತಿದ್ದರು ಎನ್ನಲಾಗಿದೆ.
ಇಡಿ ಪ್ರಕರಣದ ಚಾರ್ಜ್‌ಶೀಟ್‌ನಲ್ಲಿ ಕೆ ಕವಿತಾ ಅವರನ್ನು ಹೆಸರಿಸಿದೆ. ಅವರು ಮದ್ಯದ ಕಂಪನಿಯಾದ ಇಂಡೋಸ್ಪಿರಿಟ್ಸ್‌ನಲ್ಲಿ ಶೇ.65 ರಷ್ಟು ಪಾಲನ್ನು ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಕಳೆದ ವರ್ಷ ಡಿಸೆಂಬರ್ 11ರಂದು ಇಡಿ ಕವಿತಾ ಅವರನ್ನು ಪ್ರಶ್ನಿಸಿತ್ತು.
ಮಾರ್ಚ್ 10ರಂದು ಮಹಿಳಾ ಮೀಸಲಾತಿ ಮಸೂದೆಗೆ ಒತ್ತಾಯಿಸಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಕವಿತಾ ಕರೆ ನೀಡಿದ್ದಾರೆ ಹಾಗೂ ಪ್ರತಿಪಕ್ಷದ ಪಾಳೆಯದ ಎಲ್ಲಾ ನಾಯಕರು ಭಾಗವಹಿಸಲು ವಿನಂತಿಸಿದ್ದಾರೆ. ಆದರೆ ಈ ನಡುವೆ ಇಡಿ ಕವಿತಾ ಅವರಿಗೆ ಸಮನ್ಸ್ ನೀಡಿದ್ದು, ಮಾರ್ಚ್ 9ರಂದು ಇಡಿ ಕಚೇರಿಗೆ ಅವರು ಹಾಜರಾಗಬೇಕಿದೆ.
ನಮ್ಮ ನಾಯಕರಾದ ಸಿಎಂ ಕೆಸಿಆರ್ ಮತ್ತು ಇಡೀ ಬಿಆರ್‌ಎಸ್ ಪಕ್ಷದ ವಿರುದ್ಧದ ಹೋರಾಟ ಮತ್ತು ಧ್ವನಿಯ ವಿರುದ್ಧದ ಈ ಬೆದರಿಕೆಯ ತಂತ್ರಗಳು ನಮ್ಮನ್ನು ತಡೆಯುವುದಿಲ್ಲ ಎಂದು ಕೇಂದ್ರದ ಆಡಳಿತ ಪಕ್ಷವೂ ತಿಳಿದುಕೊಳ್ಳಬೇಕೆಂದು ನಾನು ಬಯಸುತ್ತೇನೆ. ಕೆಸಿಆರ್ ಗಾರು ನೇತೃತ್ವದಲ್ಲಿ ನಾವು ನಿಮ್ಮ ವೈಫಲ್ಯಗಳನ್ನು ಬಹಿರಂಗಪಡಿಸಲು ಮತ್ತು ಭಾರತದ ಉಜ್ವಲ ಮತ್ತು ಉತ್ತಮ ಭವಿಷ್ಯಕ್ಕಾಗಿ ಧ್ವನಿ ಎತ್ತಲು ಹೋರಾಡುವುದನ್ನು ಮುಂದುವರಿಸುತ್ತೇವೆ ಎಂದು ಕವಿತಾ ಟ್ವಿಟರ್‌ನಲ್ಲಿ ಹೇಳಿಕೆಯನ್ನು ಪೋಸ್ಟ್ ಮಾಡಿದ್ದಾರೆ.