Home News ಬಾಯಿ ತುರಿಕೆ ಜನಪ್ರತಿನಿಧಿಗಳಿಗೆ ಬೇಕು ಕಟ್ಟಳೆ

ಬಾಯಿ ತುರಿಕೆ ಜನಪ್ರತಿನಿಧಿಗಳಿಗೆ ಬೇಕು ಕಟ್ಟಳೆ

ಇದು ಬಾಯಿ ಚಪಲವಾ, ತೀಟೆಯಾ ಅಥವಾ ಮನಸ್ಥಿತಿಯಾ?
ವಿಧಾನ ಪರಿಷತ್ ಸದಸ್ಯ ರವಿಕುಮಾರ್, ರಾಜ್ಯದ ಮುಖ್ಯ ಕಾರ್ಯದರ್ಶಿಗಳ ಕುರಿತು ಆಡಿದರೆನ್ನಲಾದ ಲಘು ಮಾತು ಅಥವಾ ಟೀಕೆ ಸೂಕ್ಷ್ಮ ಸಂವೇದನೆ ಹೊಂದಿದವರು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ.
ಅವರ ಆ ಮಾತಿಗೆ ಸಂದರ್ಭ, ಅಗತ್ಯತೆ, ಔಚಿತ್ಯ ಯಾವುದೂ ಕೂಡ ಒಟ್ಟಾರೆ ವಿದ್ಯಮಾನ ಅವಲೋಕಿಸಿದರೆ ಕಾಣದು. ನೇರವಾಗಿ ಇದು ಮಾತಿನ ತೀಟೆ ಮತ್ತು ಏನಕೇನ ತಾನು ಸಮೂಹದ, ಸಂದರ್ಭದ ಕೇಂದ್ರ ಬಿಂದುವಾಗಿರಬೇಕು ಎಂದಷ್ಟೇ ತೋರುತ್ತದೆ.
ತಮ್ಮಷ್ಟಕ್ಕೆ ತಾವೇ ಅತೀ ಬುದ್ಧಿವಂತರು ಮತ್ತು ಎಲ್ಲರ ಬಗೆಗೂ ತಾನು ಅಭಿಪ್ರಾಯಪಡಬಲ್ಲೆ, ವ್ಯಾಖ್ಯಾನಿಸಬಲ್ಲೆ ಎಂಬುವ ಭ್ರಾಂತಿಯೂ ಇದ್ದೀತು. ಒಬ್ಬ ಜನಪ್ರತಿನಿಧಿ, ಚಿಂತಕರ ಚಾವಡಿ ಎನಿಸಿಕೊಳ್ಳುವ ಮೇಲ್ಮನೆಯ ಪ್ರತಿಪಕ್ಷದ ಮುಖ್ಯಸಚೇತಕರ ಮೇಲೆ ನ್ಯಾಯಾಲಯದಲ್ಲಿ, ಇವರ ಮಾತು ಮತ್ತು ಮಾನಸಿಕತೆ ಅಪರಾಧಿಕ ಚಾಳಿ ಹೊಂದಿದಂತಿದೆ' ಎಂದು ಪ್ರಾಸಿಕ್ಯೂಟರ್ ಆರೋಪಿಸುವಂತಾಯಿತು! ರವಿಕುಮಾರ ತಿಂಗಳ ಹಿಂದಷ್ಟೇ ಕಲಬುರ್ಗಿ ಜಿಲ್ಲಾಧಿಕಾರಿ ಫೌಜಿಯಾ ತರುನ್ನಮ್ ಅವರು ಪಾಕಿಸ್ತಾನದವರೋ, ಅಲ್ಲಿಗೆ ನಿಷ್ಠೆ ಹೊಂದಿದವರೋ, ಜಿಲ್ಲಾಧಿಕಾರಿಯೋ ಎಂದು ಪ್ರಶ್ನೆ ಮಾಡಿದ್ದರು. ಅಧಿಕಾರಿಯನ್ನು ಜಾತಿ, ಲಿಂಗದ ಆಧಾರದ ಮೇಲೆ ಸಂವೇದನೆ ರಹಿತವಾಗಿ ಬಣ್ಣ ಕಟ್ಟಿ ಆಡಿದ್ದು ವಿವಾದವಾಗಿತ್ತು. ನಂತರಬಾಯಿತಪ್ಪಿ ಆಡಿದೆ’ ಎಂದರೂ ಕೂಡ ನ್ಯಾಯಾಲಯವೇ ಕ್ಷಮೆ ಕೇಳುವಂತೆ ಸೂಚಿಸಿತ್ತು.
ರವಿಕುಮಾರ್ ಮೂಲತಃ ಆರ್‌ಎಸ್‌ಎಸ್‌ನಿಂದ ಬಿಜೆಪಿಗೆ ಬಂದು ವಿಧಾನ ಪರಿಷತ್ತಿನ ಸದಸ್ಯರಾಗಿ, ಈಗ ಎರಡನೇ ಸಾರೆಯೂ ಪ್ರವೇಶಿಸಿ ಪ್ರತಿಪಕ್ಷದ ಮುಖ್ಯ ಸಚೇತರಕರಾಗಿದ್ದಾರೆ.
ಮಾತುಗಾರರು, ಹೋರಾಟಗಾರರು, ಸಂಘ ಪರಿವಾರ ಬೆಂಬಲಿಕ್ಕಿದೆ ಎನ್ನುವುದು ಸತ್ಯ. ಆದರೆ ಧರ್ಮ, ಜಾತಿ, ಲಿಂಗದ ಆಧಾರದ ಮೇಲೆ ಟೀಕಿಸುವ, ಬೇರೆಯವರ ಖಾಸಗಿ ಬದುಕನ್ನು ಬಹಿರಂಗವಾಗಿ ಅಣಕಿಸುವ ಯಾವ ಹಕ್ಕು, ನೈತಿಕತೆ, ಸ್ವಾತಂತ್ರ್ಯ ತನಗಿಲ್ಲ ಎನ್ನುವುದನ್ನು ತಿಳಿಯದಷ್ಟು ಅಪ್ರಬುದ್ಧರೇನಲ್ಲ. ಅದೂ, ಹಾಗೆ ತಾವು ಆಡಿದ ಮಾತು ಏನೆಲ್ಲ ಅವಾಂತರಕ್ಕೆ ಕಾರಣವಾದೀತು ಎಂದು ತಿಳಿಯದವರಂತೂ ಅಲ್ಲವೇ ಅಲ್ಲ.
ರವಿಕುಮಾರ ಮಾತ್ರವಲ್ಲ, ಜನಪ್ರತಿನಿಧಿಗಳ ಮತ್ತು ನಾಯಕರೆನಿಸಿಕೊಂಡ ಅನೇಕರ ಮಾತು, ವರ್ತನೆ, ಜೊತೆಗೆ ನಡವಳಿಕೆ ಎಲ್ಲವೂ ಸದಾಚಾರ ಸಂಹಿತೆಯ, ನೈತಿಕತೆಯ ಎಲ್ಲೆ ಮೀರಿದೆ.
ಪರಸ್ಪರ ಗೌರವಿಸುವ, ಕನಿಷ್ಠ ಖಾಸಗಿ ಬದುಕಿನ ಟೀಕೆ ಮಾಡಬಾರದು ಎನ್ನುವ ಚೌಕಟ್ಟನ್ನೂ ಎಂದೋ ದಾಟಿ ಹೋಗಿಯಾಗಿದೆ.
ಹಿಂದೆ ಲಾಲೂ ಪ್ರಸಾದ್ ಯಾದವ್ ಅವರು ಬಿಹಾರ್ ಮುಖ್ಯಮಂತ್ರಿಯಾಗಿದ್ದಾಗ ಬಿಹಾರದ ರಸ್ತೆಗಳನ್ನು ಹೇಮಾಮಾಲಿನಿಯ ಕೆನ್ನೆಯಷ್ಟು ನುಣುಪಾಗಿ ನಿರ್ಮಿಸುತ್ತೇನೆ ಎಂದು ಥೇಂಕರಿಸಿದ್ದರು… ಸರ್ವತ್ರ ಖಂಡನೆಯ ಜೊತೆ ದೇಶಾದ್ಯಂತ ಈ ಲಘು ಮಾತು ಟೀಕೆಗೊಳಗಾಗಿತ್ತು. ಇಂದಿರಾ ಗಾಂಧಿಯವರನ್ನು ಟೀಕಿಸಲು ಬಳಸದ ಪದಗಳೇ ಇರಲಿಲ್ಲ. ಫೂಲನ್ ದೇವಿ ಸಂಸತ್ ಸದಸ್ಯರಾದಾಗ ಅವರನ್ನು ಸದನದ ಒಳಗೆ ಯಾರೊಬ್ಬರೂ ಟೀಕಿಸುವ ಧೈರ್ಯ ತೋರದೇ ಇದ್ದರೂ, ಚುನಾವಣಾ ಪ್ರಚಾರಗಳಲ್ಲಿ ಮಾತ್ರ ಡಕಾಯಿತ್ ಕೆ ರಾಣಿ' ಎಂದೇ ಸಂಬೋಧಿಸುತ್ತಿದ್ದರು. ಜಯಲಲಿತಾ, ಉಮಾಭಾರತಿ, ಸ್ಮೃತಿ ಇರಾನಿ, ಇತ್ತೀಚೆಗೆ ಕಂಗನಾ ರಣಾವತ್ ಎಲ್ಲರೂ ಬಾಯಿ ತುರಿಕೆಯವರಿಂದ ನೋವುಂಡವರೇ... ಇತ್ತೀಚೆಗಷ್ಟೇ ಮಧ್ಯಪ್ರದೇಶದ ಸಚಿವ ವಿಜಯ್ ಶಾ ಅವರು ಭಾರತ ಸೇನೆಯ ಅಧಿಕಾರಿ ಸೋಫಿಯಾ ಖುರೇಷಿ ಅವರನ್ನು ಪಾಕಿಸ್ತಾನದಲ್ಲಿರುವ ಭಯೋತ್ಪಾದಕರ ಸೋದರಿ ಎಂದು ಲಘುವಾಗಿ ಆಡಿದ್ದರು. ಅದೇ ಬೆಳಗಾವಿ ಅಧಿವೇಶನದಲ್ಲಿ ಬಿಜೆಪಿಯ ಸಿ.ಟಿ.ರವಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರ ಬಗ್ಗೆ ಅಸಹ್ಯ ಪದ ಪ್ರಯೋಗ ಮಾಡಿದ್ದು ದೇಶಾದ್ಯಂತ ಟೀಕೆಗೆ ಒಳಗಾಯಿತು. ಶಾಸನ ಸಭೆ ಇತಿಹಾಸದಲ್ಲೇ ವಿಧಾನ ಪರಿಷತ್ ಸದಸ್ಯರನ್ನು ಪೊಲೀಸರು ಹೊತ್ತೊಯ್ದು ಬಂಧಿಸಿ, ರಾತ್ರಿಯಿಡೀ ಅಲೆದಾಡಿಸಿದ್ದು, ಪೊಲೀಸ್, ಸಿಓಡಿ, ವಿಧಾನ ಪರಿಷತ್ ನೈತಿಕ ಸಮಿತಿ, ಸಭಾಪತಿ ವಿಚಾರಣೆ ಎಲ್ಲವೂ ಕೂಡ ಏಕ ಕಾಲಕ್ಕೆ ಜರಗುವಂತಾಯಿತು. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಶಾಸಕ ಸಂಜಯ್ ಪಾಟೀಲ್ಅಕ್ಕ ಇನ್ನು ನಿದ್ರೆ ಮಾತ್ರೆ ತೆಗೆದುಕೊಳ್ಳಬೇಕು, ಇಲ್ಲವೇ ಒಂದು ಪೆಗ್ ಹೆಚ್ಚು ಕುಡಿಯಬೇಕು’ ಎಂದು ಲಘುವಾಗಿ ವ್ಯಂಗ್ಯವಾಡಿದ್ದು, ದಿನೇಶ ಗುಂಡೂರಾವ್ ಮನೆಯಲ್ಲೇ ಅರ್ಧ ಪಾಕಿಸ್ತಾನ ಇದೆ ಎಂದ ಬಸನಗೌಡ ಪಾಟೀಲ ಯತ್ನಾಳ್ ಅವರ ವಿರುದ್ಧ ಗುಂಡೂರಾವ್ ಪತ್ನಿ ನ್ಯಾಯಾಲಯಕ್ಕೆ ಹೋಗಿದ್ದರು.
ವಿಷಾದದ ಸಂಗತಿ ಏನೆಂದರೆ, ಮಾತಿನ ಎಲ್ಲೆ ಮೀರಿದವರಾರ ಮೇಲೂ ಹೈ-ಕೈ ಕಮಾಂಡ್‌ಗಳು ಕ್ರಮ ಕೈಗೊಳ್ಳಲಿಲ್ಲ! ಕೆಲವರನ್ನು ಸಮರ್ಥಿಸಿಕೊಂಡರು!
ಪಕ್ಷದ ಮೂಗಿನಡಿಯಲ್ಲಿಯೇ ವಾದಿಸಿದರು.. `ನೀವು ಆಗ ಹೀಗೆ ಹೇಳಿರಲಿಲ್ಲವಾ? ಹಾಗೆ ಮಾಡಿರಲಿಲ್ಲವೇ?’ ಎಂಬ ವಾದ ಬೇರೆ.! ಜನ ಕೂಡ ಜನಪ್ರತಿನಿಧಿಗಳ ಬಾಯಿ ತುರಿಕೆಯನ್ನು ಆಸ್ವಾದಿಸುವ ಮಟ್ಟದಲ್ಲಿರುವುದರಿಂದ ಇನ್ನೇನು ಅಪೇಕ್ಷಿಸಬಹುದು?
ಇದಕ್ಕೆ ನಿಯಂತ್ರಣ ಹೇರದಿದ್ದರೆ ಬಹುಶಃ ಈ ರೀತಿಯ ಟೀಕೆ ಮಾಡುವುದು ತಮ್ಮ ಹಕ್ಕು, ಸಂಪ್ರದಾಯ ಎಂದೇ ಈ ಲಘು ಮಾತಿನ ಸರದಾರರು ಅಂದುಕೊಳ್ಳಬಹುದೇನೋ?
ರವಿಕುಮಾರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರನ್ನು ಅಸಹ್ಯವಾಗಿ ಟೀಕಿಸಿದ ಆರೋಪ ಬಂದಾಗ, ಐಎಎಸ್ ಅಧಿಕಾರಿಗಳ ಸಂಘಟನೆ ದೂರು ನೀಡಿತು. ಮುಖ್ಯಮಂತ್ರಿ ವೇದಿಕೆಯಲ್ಲೇ ಅಧಿಕಾರಿಗಳನ್ನು ಟೀಕಿಸಿ, ಕೆಟ್ಟದಾಗಿ ನಡೆಸಿಕೊಂಡಿದ್ದಾರೆ. ಆಗೆಲ್ಲಿ ಹೋಗಿತ್ತು ಐಎಎಸ್ ಸಂಘಟನೆ ಎಂಬುದು ಬಿಜೆಪಿ ಪ್ರಶ್ನೆ.
ನಿಜ. ಸಾರ್ವಜನಿಕ ಸಮಾರಂಭದ ವೇದಿಕೆಯೊಂದರ ಮೇಲೆ ಜಿಲ್ಲಾಧಿಕಾರಿ ಕುಳಿತಿದ್ದನ್ನು ಮುಖ್ಯಮಂತ್ರಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಹಾಗೇ ಇತ್ತೀಚೆಗೆ ಬೆಳಗಾವಿಯ ಸಾರ್ವಜನಿಕ ಸಮಾರಂಭದಲ್ಲಿ ಪೊಲೀಸ್ ಹಿರಿಯ ಅಧಿಕಾರಿ ಮೇಲೆ ಕೈ ಎತ್ತಿದ್ದರು.
ಇದೂ ಖಂಡನಾರ್ಹವೇ. ಸಿದ್ದರಾಮಯ್ಯ ಪ್ರಧಾನಿ ಮೋದಿಯಾದಿಯಾಗಿ ಎಲ್ಲರನ್ನೂ ಏಕವಚನದಲ್ಲೇ ಸಂಬೋಧಿಸಿರುವುದು ಹಲವು ಬಾರೆ ಸಾರ್ವಜನಿಕ ಟೀಕೆ ಖಂಡನೆಗಳು ವ್ಯಕ್ತವಾಗಿದೆ. ನನ್ನ ಮಾತೇ ಹಾಗೇ. ನೇರ, ಗಾಂವ್ಟಿ… ಮನಸ್ಸಿನಲ್ಲಿ ಹಾಗಿರುವುದಿಲ್ಲ. ಶಾಸಕರನ್ನು, ಮಂತ್ರಿಗಳನ್ನು ಏಕವಚನದಲ್ಲೇ ಕರೆಯುತ್ತೇನೆ. ಅದು ಉದ್ದೇಶಪೂರ್ವಕವಲ್ಲ ಎಂದು ಸಿದ್ದರಾಮಯ್ಯ ಸಮರ್ಥನೆ ಮಾಡಿಕೊಂಡಿದ್ದರೂ ಸ್ಥಾನ, ಘನತೆ, ಹುದ್ದೆಗೆ ಇದು ಭೂಷಣವಲ್ಲ. ಅಧಿಕಾರಿಗಳ ಸ್ಥೈರ್ಯ ಕಳೆಯುವ, ಕರ್ತವ್ಯಕ್ಕೆ ಚ್ಯುತಿ ಉಂಟುಮಾಡಿದಂತೆಯೇ..
ಸಾಂವಿಧಾನಿಕ ಸ್ಥಾನಕ್ಕೆ ಇದು ಸದಾಚಾರ ಸಂಹಿತೆಯೂ ಅಲ್ಲ. ಗೌರವ ಕೊಟ್ಟು ಗೌರವ ಪಡೆಯುವ ಮನಸ್ಸು ಬೇಕು. ತುರ್ತು ಪರಿಸ್ಥಿತಿಯ ನಂತರ ಇಂದಿರಾ ಗಾಂಧಿಯವರ ಕುರಿತು ಬಿಜೆಪಿ ಬಿಡುಗಡೆ ಮಾಡಿರುವ ಹೊತ್ತಿಗೆಯನ್ನು ವಾಜಪೇಯಿ ಒಪ್ಪಿರಲಿಲ್ಲ. ಇಂದಿರಾ ಗಾಂಧಿ ಅಲ್ಲ, ಇಂದಿರಾಜೀ ಎಂದೇ ಬದಲಾಯಿಸದಿದ್ದರೆ ನಾನು ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಬರಲ್ಲ ಎಂದು ಬಹಿರಂಗವಾಗಿಯೇ ಹೇಳಿದ್ದರು. ನಂತರ ಮುಖಪುಟವನ್ನು ಬದಲಿಸಿದ ನಂತರವೇ ಅದನ್ನು ಬಿಡುಗಡೆ ಮಾಡಿದ್ದರು. ದ್ರೌಪದಿ ಮುರ್ಮು ರಾಷ್ಟ್ರಪತಿಯಾದಾಗ ಪ್ರತಿಪಕ್ಷದ ವಲಯದಲ್ಲಿ ಲಘು ಟೀಕೆ ವ್ಯಕ್ತವಾಯಿತು. ಅವರೇಕೆ ರಾಷ್ಟ್ರಪತಿ ಆಗಬೇಕು? ಅವರಿಗೆ ಸ್ವಂತಿಕೆ ಇಲ್ಲ. ರಬ್ಬರ್ ಸ್ಟ್ಯಾಂಟ್ ಎಂದೆಲ್ಲ ಟೀಕಿಸಲಾಯಿತು. ಆಗಲೂ ಜನ ಖಂಡಿಸಿದರು.
ನಾವೇ ಆರಿಸಿ ಕಳಿಸಿದ ಶಾಸಕರ ನಡವಳಿಕೆಗಳು ವಿಕೃತವಾಗಿ ಕಂಡರೂ, ವಾಸ್ತವ ಸ್ಥಿತಿಯೇ ಇದಾದಂತಾಗಿದೆ. ಸದನದಲ್ಲಿ ಅಶ್ಲೀಲ ಚಿತ್ರ ವೀಕ್ಷಿಸುವುದು, ಬಾವಿಯಲ್ಲಿ ಗಲಾಟೆ ಮಾಡುವುದು, ನಾನು ಮುನ್ನೂರೈವತ್ತು ಹುಡುಗಿಯರನ್ನು ಇಟ್ಟುಕೊಂಡಿದ್ದೀನಿ, ಕೇಳುವವರು ನೀವ್ಯರ‍್ರೀ ಎಂದು ಕೇಳುವ ಪ್ರತಿನಿಧಿಗಳಿಗೆ ಗೋಪಾಲಗೌಡರು, ಕೆಂಗಲ್ ಹನುಮಂತಯ್ಯನವರು ಅಂದಿನ ಇತರ ಹಿರಿಯ ಮುತ್ಸದ್ದಿಗಳೆಲ್ಲ ಮಾದರಿಯಾಗಲೇ ಇಲ್ಲ!
ಇಂತಹ ಮುತ್ಸದ್ದಿಗಳನ್ನು ಮರೆತು ನಡಾವಳಿ ರೂಪಿಸಿಕೊಂಡಿರುವ ಸ್ಥಿತಿಯಲ್ಲಿ ನಮ್ಮ ಮುಂದಿನ ಪೀಳಿಗೆಗೆ ಯಾರನ್ನು ಮಾದರಿ ಶಾಸಕ, ಮಂತ್ರಿ ಎಂದು ಹೇಳುವುದು? ಎಂತಹ ಅಸಹ್ಯಕರ ಸ್ಥಿತಿಯಲ್ಲಿ ನಾವಿದ್ದೇವೇ!? ಹೌದು. ಜನಪ್ರತಿನಿಧಿಗಳು ಹೇಗಿರಬೇಕು ಎಂಬುದರ ಬಗ್ಗೆ ಅಲಿಖಿತ ಸದಾಚಾರ ಸಂಹಿತೆಯೇನೋ ಇದೆ. ಆದರೆ ಈಗಿನ ಸ್ಥಿತಿ ನೋಡಿದರೆ ಈ ಸದಾಚಾರ ಸಂಹಿತೆ ಲಿಖಿತವಾಗಿಯೇ ಇರಬೇಕೇನೋ ಎನಿಸುತ್ತದೆ. ನಮ್ಮ ಜನಪ್ರತಿನಿಧಿಗಳಿಗೆ ಪ್ರಬುದ್ಧವಾಗಿ ವರ್ತಿಸಿ, ಸಾಮಾಜಿಕ ಸಾಮರಸ್ಯ ಹಾಳು ಮಾಡುವ ಹೇಳಿಕೆ ನೀಡಬೇಡಿ, ಸದನದಲ್ಲಿ ಸಲ್ಲಾಪ ಬೇಡ, ಜನತೆಯ ನಂಬಿಕೆ ಉಳಿಸಿಕೊಳ್ಳಿ, ಉಡಾಫೆಯ ಮಾತು ಮೋಜು ಮಸ್ತಿ, ಅಸಹ್ಯಕರ ಟೀಕೆ, ನಾಲಗೆ ಮೇಲೆ ಹಿಡಿತವಿಟ್ಟುಕೊಳ್ಳಿ, ಸಮುದಾಯ ಗೌರವಿಸುವ ಗುಣ ಬೆಳೆಸಿಕೊಳ್ಳಿ ಎನ್ನುವ ಲಿಖಿತ ಕಾನೂನು, ಚೌಕಟ್ಟು ಏಕೆ ಬೇಡ? ಈಗ ಇದು ಅಗತ್ಯವೇನೋ ಎನಿಸುವ ಮಟ್ಟಕ್ಕೆ ಬಂದಿದೆ ಅಲ್ಲವೇ?

Exit mobile version