Home ಕೃಷಿ/ವಾಣಿಜ್ಯ ಸ್ವಿಗ್ಗಿ ದರ ಏರಿಕೆ: ಆನ್‌ಲೈನ್ ಆರ್ಡರ್ ಮಾಡುವ ಮೊದಲು ತಿಳಿಯಿರಿ

ಸ್ವಿಗ್ಗಿ ದರ ಏರಿಕೆ: ಆನ್‌ಲೈನ್ ಆರ್ಡರ್ ಮಾಡುವ ಮೊದಲು ತಿಳಿಯಿರಿ

0

ಬೆಂಗಳೂರು: ಸ್ವಿಗ್ಗಿ ಆನ್‌ಲೈನ್‌ ಮೂಲಕ ಆಹಾರ ಪದಾರ್ಥ ಪೂರೈಸುವ ದೇಶದ ಪ್ರಮುಖ ಕಂಪನಿ. ಹಬ್ಬ ಮತ್ತು ಸಾಲು ಸಾಲು ರಜೆ ಸಂದರ್ಭದಲ್ಲಿ ಸ್ವಿಗ್ಗಿ ಕಂಪನಿಯು ಪ್ರತಿ ಆರ್ಡರ್‌ ಮೇಲೆ ವಿಧಿಸುವ ಶುಲ್ಕವನ್ನು ಏರಿಕೆ ಮಾಡುವ ಮೂಲಕ ಜನರ ಜೇಬಿಗೆ ಕತ್ತರಿ ಹಾಕಿದೆ.

ಸ್ವಿಗ್ಗಿ ಕಂಪನಿಯು ಪ್ರತಿ ಆರ್ಡರ್‌ ಮೇಲೆ ವಿಧಿಸುವ ಶುಲ್ಕ (ಪ್ಲಾಟ್‌ಫಾರ್ಮ್‌ ಫೀ) ಏರಿಕೆ ಮಾಡಿದೆ. 12 ರೂ. ಇದ್ದ ಶುಲ್ಕವನ್ನು 14 ರೂ. ಮಾಡಲಾಗಿದ್ದು, ಶುಕ್ರವಾರ ಆರ್ಡರ್ ಮಾಡಿದ ಜನರಿಗೆ ಹೊಸ ಶುಲ್ಕದ ಬಿಸಿ ತಟ್ಟಿದೆ.

ಕಂಪನಿಯ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು 2023ರಲ್ಲಿ ಮೊದಲ ಬಾರಿಗೆ ಸ್ವಿಗ್ಗಿ ಕಂಪನಿ ಪ್ಲಾಟ್‌ಫಾರ್ಮ್‌ ಫೀ ಪರಿಚಯಿಸಿತು. ಬಳಿಕ ಝೊಮಾಟೊ ಸಹ ಈ ಮಾದರಿ ಶುಲ್ಕವನ್ನು ಸಂಗ್ರಹ ಮಾಡಲು ಪ್ರಾರಂಭಿಸಿತ್ತು.

ಸ್ವಿಗ್ಗಿ ಹಂತ ಹಂತವಾಗಿ ಪ್ಲಾಟ್‌ಫಾರ್ಮ್‌ ಫೀ ಅನ್ನು ಏರಿಕೆ ಮಾಡುತ್ತಲೇ ಬಂದಿತ್ತು. ಈಗ ಅದು ರೂ. 14ಕ್ಕೆ ಏರಿಕೆಯಾಗಿದೆ. ಸದ್ಯ ದರ ಏರಿಕೆ ಮಾಡಿರುವುದು ಏಕೆ? ಎಂದು ಸ್ವಿಗ್ಗಿ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.

ಮಾಹಿತಿ ಪ್ರಕಾರ ಸ್ವಿಗ್ಗಿ ಪ್ರತಿದಿನ 2 ಮಿಲಿಯನ್ ಆರ್ಡರ್‌ಗಳನ್ನು ಡೆಲಿವರಿ ಮಾಡುತ್ತದೆ. ಪ್ಲಾಟ್‌ಫಾರ್ಮ್‌ ಫೀ ಹೆಚ್ಚಳದಿಂದಾಗಿ ಕಂಪನಿಗೆ ಪ್ರತಿದಿನ 2.8 ಕೋಟಿ ಆದಾಯ ಬರಲಿದೆ ಎಂದು ಅಂದಾಜಿಸಲಾಗಿದೆ. ಮೊದಲ ತ್ರೈಮಾಸಿಕದಲ್ಲಿ 8.4 ಕೋಟಿ ಮತ್ತು ವರ್ಷಕ್ಕೆ 33.6 ಕೋಟಿ ಆದಾಯ ಸಂಗ್ರಹವಾಗಲಿದೆ ಎಂಬ ಮಾಹಿತಿ ಇದೆ.

ಸದ್ಯದ ಮಾಹಿತಿ ಪ್ರಕಾರ ಸಾಲು ಸಾಲು ರಜೆ, ಹಬ್ಬದ ಸಂದರ್ಭದಲ್ಲಿ ಹೆಚ್ಚಿನ ಜನರು ಆರ್ಡರ್ ಮಾಡುವ ಕಾರಣ ಸ್ವಿಗ್ಗಿ ಪ್ಲಾಟ್‌ಫಾರ್ಮ್‌ ಫೀ ಹೆಚ್ಚಳ ಮಾಡಿದೆ. ಹಬ್ಬದ ಸೀಸನ್ ಮುಗಿದ ಮೇಲೆ ಪುನಃ ರೂ. 12ಕ್ಕೆ ಇಳಿಕೆಯಾಗಲಿದೆ ಎಂದು ತಿಳಿದುಬಂದಿದೆ.

ಮಾರುಕಟ್ಟೆಯಲ್ಲಿ ಝೊಮಾಟೊ ಮತ್ತು ಸ್ವಿಗ್ಗಿ ಪ್ಲಾಟ್‌ಫಾರ್ಮ್‌ ಫೀ ಅನ್ನು ನಿಯಮಿತವಾಗಿ ಹೆಚ್ಚಿಸುತ್ತಾ ಬರುತ್ತಿವೆ. ಈ ದರ ಹೆಚ್ಚಳ ಯಾವುದೇ ಪರಿಣಾಮ ಬೀರದಿದ್ದರೆ ಅದನ್ನು ಹಾಗೆಯೇ ಮುಂದುವರೆಸುತ್ತಿವೆ.

2023ರಲ್ಲಿ ಪ್ಲಾಟ್‌ಫಾರ್ಮ್‌ ಫೀ ಕೇವಲ 2 ರೂ. ಇತ್ತು. ಬಳಿಕ ಇದು 10 ರೂ. ತನಕ ಏರಿಕೆಯಾಗಿತ್ತು. ಕಳೆದ ವರ್ಷ ರೂ. 12ಕ್ಕೆ ಏರಿಕೆಯಾಗಿತ್ತು. 2024ರ ಅಕ್ಟೋಬರ್‌ನಲ್ಲಿ ಝೊಮಾಟೊ ಮತ್ತು ಸ್ವಿಗ್ಗಿ ಕಂಪನಿಯು ಪ್ರತಿ ಆರ್ಡರ್‌ ಮೇಲೆ ವಿಧಿಸುವ ಪ್ಲಾಟ್‌ಫಾರ್ಮ್‌ ಫೀ ಅನ್ನು ಕೊನೆಯ ಬಾರಿ ಏರಿಕೆ ಮಾಡಿದ್ದವು.

ಸ್ವಿಗ್ಗಿ ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮದ (ಐಆರ್‌ಸಿಟಿಸಿ) ಜೊತೆಗೂ ಈಗ ಪಾಲುದರಿಕೆ ಮಾಡಿಕೊಡಿವೆ. ಈ ವರ್ಷದ ಮಾರ್ಚ್‌ನಿದ ಈ ಪಾಲುದಾರಿಕೆ ಅಡಿ ದೇಶದ 100 ರೈಲು ನಿಲ್ದಾಣಗಳಿಗೆ ಆಹಾರ ಪೂರೈಕೆ ಮಾಡುತ್ತಿವೆ.

ಸ್ವಿಗ್ಗಿ ಮತ್ತು ಝೊಮಾಟೊ ಹಬ್ಬದ ಸಂದರ್ಭದಲ್ಲಿ ವಿಶೇಷ ಕೊಡುಗೆಗಳನ್ನು ನೀಡುವ ಮೂಲಕ ಹೆಚ್ಚಿನ ಗ್ರಾಹಕರನ್ನು ಸೆಳೆಯುತ್ತದೆ. ಆದರೆ ಈಗ ಹಬ್ಬದ ಸಂದರ್ಭದಲ್ಲಿ ಪ್ಲಾಟ್‌ಫಾರ್ಮ್‌ ಫೀ ಹೆಚ್ಚಳ ಮಾಡುವ ಮೂಲಕ ಶಾಕ್ ನೀಡಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version