Home ಕೃಷಿ/ವಾಣಿಜ್ಯ ಹಾಸನ: ಗ್ರಾಮೀಣ ಪ್ರದೇಶಗಳಲ್ಲಿ ಭತ್ತ ನಾಟಿ ಬಹುತೇಕ ಪೂರ್ಣ

ಹಾಸನ: ಗ್ರಾಮೀಣ ಪ್ರದೇಶಗಳಲ್ಲಿ ಭತ್ತ ನಾಟಿ ಬಹುತೇಕ ಪೂರ್ಣ

0

ವೀರಭದ್ರಸ್ವಾಮಿ ಬೈರಾಪುರ

ಹಾಸನ ಜಿಲ್ಲೆಯ ಆಲೂರು ತಾಲೂಕಿನಲ್ಲಿ ಪ್ರಸ್ತುತ ವರ್ಷದಲ್ಲಿ ಮುಂಗಾರು ಮಳೆ ಅವಧಿಗಿಂತಲೂ ಮುಂಚಿತವಾಗಿ ಪ್ರಾರಂಭವಾಗಿದ್ದರಿಂದ ಕೆರೆಕಟ್ಟೆ, ಅಣೆಕಟ್ಟುಗಳು ಭರ್ತಿಯಾಗಿರುವ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಶೇ.90ರಷ್ಟು ಭತ್ತದ ನಾಟಿ ಕಾರ್ಯ ಮುಗಿದಿದೆ. ಭಾರತದಂತಹ ಕೃಷಿ ಪ್ರಧಾನ ದೇಶದಲ್ಲಿ ಭತ್ತ ಕೃಷಿ ಸಂಸ್ಕೃತಿಯ ಭಾಗವಾಗಿದೆ. ಕೋಟ್ಯಂತರ ರೈತರ ಜೀವನ, ಜೀವನೋಪಾಯದ ಅವಿಭಾಜ್ಯ ಅಂಗವಾಗಿದೆ. ದೇಶದ ಆಹಾರ ಭದ್ರತೆಯಲ್ಲಿ ಸಿಂಹಪಾಲು ಭತ್ತದ ಬೆಳೆ.

ಮಾನ್ಸೂನ್ ಮಳೆ ಪ್ರಾರಂಭವಾದಾಗ ಅಥವಾ ನೀರಾವರಿ ಸೌಲಭ್ಯವಿದ್ದಲ್ಲಿ ರೈತರು ಭತ್ತದ ನಾಟಿ ಮಾಡಲು ತಯಾರಿ ಮಾಡಿಕೊಳ್ಳುತ್ತಾರೆ. ಈ ಪ್ರಕ್ರಿಯೆಯು ಹಲವು ಹಂತಗಳನ್ನು ಒಳಗೊಂಡಿರುತ್ತದೆ. ಈ ಕಾರ್ಯವನ್ನು ಕುಟುಂಬಗಳು ಹಾಗೂ ಸಮುದಾಯಗಳ ಜನರ ಸಹಯೋಗದಿಂದ ಮಾಡಲಾಗುತ್ತಿದೆ. ನಾಟಿ ಮಾಡುವ ಮೊದಲು. ರೈತರು ತಮ್ಮ ಗದ್ದೆಗಳನ್ನು ಹದಗೊಳಿಸುತ್ತಾರೆ. ಟ್ರ್ಯಾಕ್ಟರ್ ಅಥವಾ ಸಾಂಪ್ರದಾಯಿಕ ನೇಗಿಲನ್ನು ಬಳಸಿ ಗದ್ದೆಯನ್ನು ಉಳುವುದು ಉಳುಮೆ ಮಾಡಿದ ನಂತರ, ಗದ್ದೆಗಳ ತುಂಬಾ ನೀರನ್ನು ತುಂಬಿಸಿ ಭೂಮಿಯನ್ನು ಕೆಸರು ಮಾಡಲಾಗುತ್ತದೆ. ಇದು ಭೂಮಿಯನ್ನು ಸಡಿಲಗೊಳಿಸಿ ಭತ್ತದ ನಾಟಿಗೆ ಸುಲಭಗೊಳಿಸುತ್ತದೆ.

ನಾಟಿ ಮಾಡುವ ಕೆಲವು ವಾರಗಳ ಮೊದಲು, ರೈತರು ಭತ್ತದ ಸಸಿಗಳನ್ನು ಪತ್ಯೇಕವಾಗಿ ಬೆಳೆಸುತ್ತಾರೆ. ಬೀಜಗಳನ್ನು ಒಂದು ಸಣ್ಣ ಪ್ರದೇಶದಲ್ಲಿ ಬಿತ್ತಲಾಗುತ್ತದೆ. ಸುಮಾರು 25 ರಿಂದ 30 ದಿನಗಳ ನಂತರ ಸಸಿಗಳು ಸುಮಾರು 8 ರಿಂದ 12 ಇಂಚುಗಳಷ್ಟು ಬೆಳೆದಾಗ ಅವುಗಳನ್ನು ಮುಖ್ಯಗದ್ದೆಗೆ ನಾಟಿ ಮಾಡಲು ಸಿದ್ಧವಾಗುತ್ತವೆ.

ಭಾರತದಲ್ಲಿ ಅತಿ ಹೆಚ್ಚು ಜನರು ಅನ್ನವನ್ನು ಮುಖ್ಯ ಆಹಾರವಾಗಿ ಸೇವಿಸುತ್ತಾರೆ. ಇದು ಪ್ರತಿಯೊಬ್ಬ ನಾಗರಿಕನ ಹಸಿವು ನೀಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಭತ್ತದ ಉತ್ಪಾದನೆಯಲ್ಲಿ ಯಾವುದೇ ವ್ಯತ್ಯಾಸವಾದರೆ ಅದು ನೇರವಾಗಿ ದೇಶದ ಆಹಾರ ಭದ್ರತೆಯ ಮೇಲೆ ಪರಿಣಾಮ ಬೀರುತ್ತದೆ.

ಕಾರಣ, ಭಾರತ ದೇಶದ ಬಹುತೇಕ ಎಲ್ಲಾ ರಾಜ್ಯಗಳು ದೇಶದ ನಾಗರಿಕರಿಗೆ ನ್ಯಾಯಬೆಲೆ ಅಂಗಡಿಯ ಮೂಲಕ ಉಚಿತ ಆಹಾರ ಧಾನ್ಯಗಳನ್ನು ವಿತರಿಸುತ್ತಿದ್ದು, ಅದರಲ್ಲಿ ಭತ್ತದ ಉತ್ಪನ್ನವಾದ ಅಕ್ಕಿಯೇ ಸಿಂಹಪಾಲನ್ನು ಪಡೆದಿದೆ ಎಂದರೆ ತಪ್ಪಾಗಲಾರದು. ಭತ್ತದ ಬೇಸಾಯವು ಲಕ್ಷಾಂತರ ರೈತ ಕುಟುಂಬಗಳಿಗೆ ಆದಾಯದ ಮೂಲವಾಗಿದೆ. ಇದರ ಜೊತೆಗೆ, ಭತ್ತದಿಂದ ಅಕ್ಕಿ, ಪಫ್ಡ್‌ ರೈಸ್, ಅವಲಕ್ಕಿ ಮತ್ತು ಇತರ ಉತ್ಪನ್ನಗಳನ್ನು ತಯಾರಿಸುವ ಉದ್ಯಮಗಳು ಸಹ ಬೆಳೆಯುತ್ತವೆ. ಇದು ಕೃಷಿ ಆಧಾರಿತ ಉದ್ದಿಮೆಗಳಿಗೆ ಪ್ರೋತ್ಸಾಹ ನೀಡುತ್ತದೆ ಮತ್ತು ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುತ್ತದೆ.

ಹವಾಮಾನ ವೈಪರೀತ್ಯಗಳು ರೈತರ ಪಾಲಿಗೆ ದೊಡ್ಡ ಸಮಸ್ಯೆಯಾಗಿವೆ. ಒಂದೊಂದು ಮಳೆಗಾಲದಲ್ಲೂ ಭತ್ತದ ಬೆಳೆಗೆ ನೀರು ಅತ್ಯಗತ್ಯ. ಆದರೆ, ಮಿತಿಮೀರಿದ ಮಳೆಯಿಂದ ಪ್ರವಾಹ ಬಂದು ಬೆಳೆ ನಾಶವಾಗುವ ಸಾಧ್ಯತೆಯೂ ಇದೆ. ಮಾರುಕಟ್ಟೆಯಲ್ಲಿ ಭತ್ತಕ್ಕೆ ಸಿಗುವ ಬೆಲೆ ನಿರೀಕ್ಷಿತ ಮಟ್ಟದಲ್ಲಿಲ್ಲದಿದ್ದರೆ, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಾರೆ. ಕೃಷಿ ಸಾಲಗಳು ಮತ್ತು ಅದರ ಮೇಲಿನ ಬಡ್ಡಿ ರೈತರ ಬದುಕನ್ನು ಮತ್ತಷ್ಟು ದುರ್ಬಲಗೊಳಿಸುತ್ತವೆ. ಭತ್ತದ ಬೆಳೆಯು ನಮ್ಮೆಲ್ಲರ ಬದುಕಿಗೆ ಎಷ್ಟು ಮುಖ್ಯವೋ, ಅದನ್ನು ಬೆಳೆಯುವ ರೈತರೂ ಅಷ್ಟೇ ಮುಖ್ಯ ನಮ್ಮ ತಟ್ಟೆಯಲ್ಲಿರುವ ಅನ್ನದ ಪ್ರತಿಯೊಂದು ಕಾಳಿನ ಹಿಂದೆ ಅವರ ಅವಿರತ ದುಡಿಮೆ ಅಡಗಿದೆ. ಆದ್ದರಿಂದ ರೈತರ ಶ್ರಮವನ್ನು ಗೌರವಿಸಬೇಕು.

NO COMMENTS

LEAVE A REPLY

Please enter your comment!
Please enter your name here

Exit mobile version