ವಿಜಯಪುರ: ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನ ಮಾಡಿದ ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ನಡೆದಿದೆ.
ಜಿಲ್ಲೆಯ ತಿಕೋಟಾ ತಾಲೂಕಿನಲ್ಲಿ ನಡೆದ ಸತೀಶ ರಾಠೋಡ್ ಎಂಬಾತನ ಕೊಲೆ ಪ್ರಕರಣದ ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಕಳೆದ ಜನವರಿ 28ರಂದು ತಿಕೋಟಾ ತಾಲೂಕಿನ ಅರಕೇರಿ ಎಲ್ ಟಿ 1ರ ಮಾನವರದೊಡ್ಡಿ ಬಳಿ ಸತೀಶ ರಾಠೋಡ್ ಕೊಲೆ ನಡೆದಿತ್ತು. ಸತೀಶ್ ಕೊಲೆಗೆ ಕಂಟ್ರಿ ಪಿಸ್ತೂಲ್ ಪೂರೈಕೆ ಮಾಡಿದ್ದ ಆರೋಪಿ ಸುರೇಶ ರಾಠೋಡ್ ಮೇಲೆ ಪೊಲೀಸರು ಗುಂಡಿನ ದಾಳಿ ಮಾಡಿದ್ದಾರೆ. ಮದ್ಯಪ್ರದೇಶದಿಂದ ಕಂಟ್ರಿ ಪಿಸ್ತೂಲ್ ತಂದು ಕೊಟ್ಟಿದ್ದ ಸುರೇಶ ರಾಠೋಡ್ ನಗರದ ಹೊರಭಾಗದಲ್ಲಿ ಅಥಣಿ ರಸ್ತೆಯ ಬಳಿ ಅಡಗಿ ಕುಳಿತಿದ್ದ ಎನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಲು ತೆರಳಿದ್ದರು. ಈ ವೇಳೆ, ಪೊಲೀಸರ ಮೇಲೆ ಚಾಕುವಿನಿಂದ ಆರೋಪಿ ಸುರೇಶ ದಾಳಿ ಮಾಡಿದ್ದಾನೆ. ಇದರಿಂದ ಪಿಎಸ್ಐ ವಿನೋದ ದೊಡಮನಿ ಹಾಗೂ ಓರ್ವ ಸಿಬ್ಬಂದಿಗೆ ಗಾಯಗೊಂಡಿದ್ದು, ಆತ್ಮರಕ್ಷಣೆಗಾಗಿ ಆರೋಪಿ ಸುರೇಶ ಕಾಲಿಗೆ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಗರದ ಖಾಸಗಿ ಆಸ್ಪತ್ರೆಗೆ ಗಾಯಾಳು ಪಿಎಸ್ಐ ಹಾಗೂ ಪೊಲೀಸ್ ಕಾನ್ ಸ್ಟೇಬಲ್ ದಾಖಲಾಗಿದ್ದಾರೆ.