Home News ಭರ್ತಿಯಾಗುತ್ತಿದೆ ತುಂಗಭದ್ರಾ ಡ್ಯಾಂ, ರೈತರಿಗೆ ಪ್ರಮುಖ ಮಾಹಿತಿ

ಭರ್ತಿಯಾಗುತ್ತಿದೆ ತುಂಗಭದ್ರಾ ಡ್ಯಾಂ, ರೈತರಿಗೆ ಪ್ರಮುಖ ಮಾಹಿತಿ

ಬಳ್ಳಾರಿ: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ನದಿಗಳ ನೀರಿನ ಮಟ್ಟ ಏರಿಕೆಯಾಗಿದ್ದು, ಜಲಾಶಯಗಳಿಗೆ ಜೀವಕಳೆ ಬಂದಿದೆ. ತುಂಗಭದ್ರಾ ಜಲಾಶಯಕ್ಕೂ ಒಳಹರಿವು ಹೆಚ್ಚಿದ್ದು, ಡ್ಯಾಂನಲ್ಲಿ ಲಭ್ಯವಿರುವ ನೀರನ್ನು ಬಳಸಿಕೊಂಡು ಅಚ್ಚುಕಟ್ಟು ಪ್ರದೇಶದಲ್ಲಿ ರೈತರು ನಿಗದಿತ ಬೆಳೆಗಳನ್ನು ಮಾತ್ರ ಬೆಳೆಯಬೇಕು ಎಂದು ಕರೆ ನೀಡಲಾಗಿದೆ.

ಕರ್ನಾಟಕ ನೀರಾವರಿ ನಿಗಮ ನಿಯಮಿತ ತುಂಗಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರ ಎಲ್. ಬಸವರಾಜ ಈ ಕುರಿತು ಮಾಹಿತಿ ನೀಡಿದ್ದಾರೆ. ಡ್ಯಾಂನ ಗರಿಷ್ಠ ಮಟ್ಟ 1624.38 ಅಡಿಗಳು. ಜುಲೈ 1ರ ಮಾಹಿತಿಯಂತೆ ಡ್ಯಾಂ ನೀರಿನ ಮಟ್ಟ 1584.15 ಅಡಿಗಳು, ಜಲಾಶಯಕ್ಕೆ ಒಳಹರಿವು 33,916 ಕ್ಯುಸೆಕ್ ಆಗಿದೆ.

ಮಲೆನಾಡು ಭಾಗದಲ್ಲಿ ಮಳೆ ಮುಂದುವರೆದಿದ್ದು ತುಂಗಾ ಮತ್ತು ಭದ್ರಾ ನದಿಗಳ ಮೂಲಕ ಡ್ಯಾಂಗೆ ನೀರಿನ ಒಳಹರಿವು ಹೆಚ್ಚಾಗುವ ನಿರೀಕ್ಷೆ ಇದೆ. ಡ್ಯಾಂನ ನೀರು ನಿರ್ವಹಣೆಗೆ ಇಲಾಖೆ ಜೊತೆ ರೈತರು ಸಹಕರಿಸಬೇಕು. ಅನಧಿಕೃತವಾಗಿ ನೀರು ಪಡೆದು ಭತ್ತ ಮತ್ತು ಇತರೆ ಬೆಳೆಗಳನ್ನು ಬೆಳೆದಲ್ಲಿ ನೀರಾವರಿ ಕಾಯ್ದೆಯನ್ವಯ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

124ನೇ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಧರಿಸಿದಂತೆ ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ಮೂಲಕ ಮುಂಗಾರು ಹಂಗಾಮಿಗೆ ಜಲಾಶಯದಲ್ಲಿ ಲಭ್ಯವಾಗಬಹುದಾದ ನೀರಿನ ಪ್ರಮಾಣ ಅಂದಾಜಿಸಿ ವಿವಿಧ ಕಾಲುವೆಗಳಿಗೆ ನೀರು ಹರಿಸಲಾಗುವುದು ಎಂದು ತಿಳಿಸಿದೆ. ಡ್ಯಾಂನಲ್ಲಿ 80 ಟಿಎಂಸಿ ನೀರನ್ನು ಮಾತ್ರ ಸಂಗ್ರಹಣೆ ಮಾಡಲು ನಿರ್ಧರಿಸಲಾಗಿದೆ.

ಡ್ಯಾಂನಿಂದ ಜುಲೈ 2 ರಿಂದ 15ರ ತನಕ ಸರಾಸರಿ 2000 ಕ್ಯೂಸೆಕ್‌ನಂತೆ, ಜುಲೈ 16 ರಿಂದ 31ರ ತನಕ 3000 ಕ್ಯೂಸೆಕ್‌ನಂತೆ ಮತ್ತು ಆಗಸ್ಟ್ 1 ರಿಂದ 30ರ ತನಕ 4100 ಕ್ಯೂಸೆಕ್ ನಂತೆ ಅಥವಾ ಈ ಕಾಲುವೆಯಡಿ ನೀರು ಲಭ್ಯತೆ ಇರುವವರೆಗೆ ಮಾತ್ರ ಇದರಲ್ಲಿ ಯಾವುದು ಮೊದಲು ಅದು ಅನ್ವಯವಾಗುತ್ತದೆ ಎಂದು ವಿವರ ನೀಡಲಾಗಿದೆ.

ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಕಾಲುವೆಯಿಂದ ಜುಲೈ 10 ರಿಂದ 31ರ ತನಕ ಸರಾಸರಿ 700 ಕ್ಯೂಸೆಕ್‌ನಂತೆ ಮತ್ತು ಆಗಸ್ಟ್ 1 ರಿಂದ 30ರ ತನಕ 1300 ಕ್ಯೂಸೆಕ್‌ನಂತೆ ಅಥವಾ ಈ ಕಾಲುವೆಯಡಿ ನೀರು ಲಭ್ಯತೆ ಇರುವವರೆಗೆ ಮಾತ್ರ ಇದರಲ್ಲಿ ಯಾವುದು ಮೊದಲು ಅದು ಅನ್ವಯ ಎಂದು ಸ್ಪಷ್ಟಪಡಿಸಲಾಗಿದೆ.

ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಯಿಂದ ನೀರು ಹರಿಸುವ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಜುಲೈ 10 ರಿಂದ 31ರ ತನಕ ಸರಾಸರಿ 500 ಕ್ಯೂಸೆಕ್‌ನಂತೆ ಮತ್ತು ಆಗಸ್ಟ್ 1 ರಿಂದ ನವೆಂಬರ್ 30ರ ತನಕ 650 ಕ್ಯೂಸೆಕ್‌ನಂತೆ ಅಥವಾ ಈ ಕಾಲುವೆಯಡಿ ನೀರು ಲಭ್ಯತೆ ಇರುವವರೆಗೆ ಮಾತ್ರ ನೀರು ಹರಿಸಲಾಗುತ್ತದೆ.

ರಾಯಬಸವಣ್ಣ ಕಾಲುವೆ ಮೂಲಕ ಈಗಾಗಲೇ ನೀರು ಹರಿಸಲಾಗಿದ್ದು, ನವೆಂಬರ್ 30ರ ತನಕ ಸರಾಸರಿ 220 ಕ್ಯೂಸೆಕ್‌ನಂತೆ ಅಥವಾ ಈ ಕಾಲುವೆಯಡಿ ನೀರು ಲಭ್ಯತೆ ಇರುವವರೆಗೆ ಮಾತ್ರ ಇದರಲ್ಲಿ ಯಾವುದು ಮೊದಲು ಅದು ಅನ್ವಯಿಸುತ್ತದೆ ಎಂದು ತಿಳಿಸಿದೆ.

ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆ ಮೂಲಕ ಜುಲೈ 1 ರಿಂದ 25ರ ತನಕ ಕ್ಯೂಸೆಕ್‌ನಂತೆ ಅಥವಾ ಜಲಾಶಯದ ನೀರಿನ ಮಟ್ಟ 1585 ಅಡಿಗಳವರೆಗೆ ಇದರಲ್ಲಿ ಯಾವುದು ಮೊದಲು ಅದು ಅನ್ವಯಿಸುತ್ತದೆ ಎಂದು ಮಾಹಿತಿ ನೀಡಲಾಗಿದೆ.

Exit mobile version