Home News ಪಾಳುಬಿದ್ದ ಯೋಗ ಕೇಂದ್ರದ ಕಟ್ಟಡಗಳು

ಪಾಳುಬಿದ್ದ ಯೋಗ ಕೇಂದ್ರದ ಕಟ್ಟಡಗಳು

ಯಾದಗಿರಿ: ರೋಗಿಗಳ ಮಾನಸಿಕ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಸರಕಾರ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿ ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಯೋಗ ಕೇಂದ್ರಗಳನ್ನು ಸ್ಥಾಪಿಸಿದೆಯಾದರೂ ಜಿಲ್ಲೆಯಲ್ಲಿ ಮಾತ್ರ ಅವುಗಳು ಬಹುತೇಕ ನಿರುಪಯುಕ್ತ ಕೇಂದ್ರಗಳಾಗಿ ಮಾರ್ಪಟ್ಟಿವೆ.
ಸರಿಯಾದ ನಿರ್ವಹಣೆ ಕೊರತೆ, ಯೋಗ ತರಬೇತಿದಾರರು ಇರದ ಕಾರಣ ಹಾಗೂ ಸಂಬಂಧಪಟ್ಟವರ ನಿರ್ಲಕ್ಷ್ಯದಿಂದ ಯೋಗ ಕೇಂದ್ರಗಳಲ್ಲಿ ಯಾವುದೇ ಚಟುವಟಿಕೆ ನಡೆಯುತ್ತಿಲ್ಲ. ಹೀಗಾಗಿ ಯೋಗ ಮಾಡಲೆಂದೇ ನಿರ್ಮಾಣ ಮಾಡಿರುವ ಕಟ್ಟಡಗಳು ಸಂಪೂರ್ಣವಾಗಿ ಪಾಳುಬಿದ್ದು ಸರಕಾರದ ಹಣ ನೀರುಪಾಲು ಮಾಡಿದಂತಾಗಿದೆ.
ಜಿಲ್ಲೆಯಲ್ಲಿ 41 ಯೋಗ ಕೇಂದ್ರಗಳು, 150 ಆರೋಗ್ಯ ಕ್ಷೇಮ ಕೇಂದ್ರಗಳಿದ್ದು, ಇವುಗಳಿಗೆ 9 ಜನ ಮಾತ್ರ ಯೋಗ ಶಿಕ್ಷಕರಿದ್ದಾರೆ. ಆದಾಗ್ಯೂ ಸಹ ಇದರಲ್ಲಿ ಬೆರಳಣಿಕೆಯಷ್ಟು ಮಾತ್ರ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ, ಉಳಿದವು ನಿರುಪಯುಕ್ತ ಕೇಂದ್ರಗಳಾಗಿ ಪಾಳುಬಿದ್ದಿವೆ.

ಮರಣೋತ್ತರ ಪರೀಕ್ಷೆ ಕೇಂದ್ರವಾಗಿದ್ದ ಯೋಗ ಕೇಂದ್ರ
ಜಿಲ್ಲೆಯ ಕೆಂಭಾವಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ನಿರ್ಮಾಣ ಮಾಡಲಾಗಿರುವ ಯೋಗ ಕೇಂದ್ರವನ್ನು ಮರಣೋತ್ತರ ಪರೀಕ್ಷೆ ಕೊಠಡಿ ಇಲ್ಲದ ಕಾರಣಕ್ಕೆ ಇಲ್ಲಿವರೆಗೂ ಬಳಸಿಕೊಳ್ಳಲಾಗಿತ್ತು. ಆದರೀಗ, ಪಟ್ಟಣದ ಹೊರವಲಯದಲ್ಲಿ ಪೋಸ್ಟ್ ಮಾರ್ಟಂ ರೂಮ್ ನಿರ್ಮಿಸಿರುವ ಸಲುವಾಗಿ ಮರಳಿ ಇಲ್ಲಿನ ಯೋಗ ಕೇಂದ್ರ ಬಣ್ಣ ಸುಣ್ಣದೊಂದಿಗೆ ಯೋಗ ಮಾಡಲು ಸಿದ್ಧವಾಗಿದೆ. ಇನ್ನೂ ಸುರಪುರ ತಾಲೂಕು ಆಸ್ಪತ್ರೆ ಆವರಣದಲ್ಲಿರುವ ಯೋಗ ಕೇಂದ್ರ ಉಪಯೋಗಿಸದ ಪರಿಣಾಮ ಕಸ ಕಡ್ಡಿಯಿಂದ ಆವೃತ್ತವಾಗಿದೆ. ಇನ್ನೂ ಹಲವು ಕಡೆಗಳಲ್ಲಿಯೂ ಸಹಿತ ಇದೆ ಪರಿಸ್ಥಿತಿ ನಿರ್ಮಾಣವಾಗಿದೆ.
ಸರಕಾರದ ರೋಗಿಗಳ ಹಿತದೃಷ್ಟಿಯಿಂದ ಲಕ್ಷಾಂತರ ಅನುದಾನ ವ್ಯಯಿಸಿ ಯೋಗ ಕೇಂದ್ರಗಳು ನಿರ್ಮಾಣ ಮಾಡಿದೆ. ಆದರೆ, ಅವುಗಳು ಈ ರೀತಿಯಾಗಿ ಬಳಕೆ ಮಾಡದ ಪರಿಣಾಮವಾಗಿ ಸಾರ್ವಜನಿಕರ ತೆರಿಗೆ ಹಣ ದುರುಪಯೋಗವಾಗುತ್ತಿದೆ ಎಂದು ಜನಾಕ್ರೋಶ ವ್ಯಕ್ತವಾಗಿದೆ. ಇನ್ನಾದರೂ ಸಂಬಂಧಪಟ್ಟವರು ಇತ್ತ ಗಮನಹರಿಸಿ ಪಾಳುಬಿದ್ದ ಕಟ್ಟಡವನ್ನು ಮರಳಿ ಯೋಗ ಕೇಂದ್ರವಾಗುವಂತೆ ಕ್ರಮವಹಿಸಿಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.

Exit mobile version