Home News ಆಟೋದಲ್ಲೇ ನೇಣಿಗೆ ಶರಣಾದ ಪ್ರೇಮಿಗಳು

ಆಟೋದಲ್ಲೇ ನೇಣಿಗೆ ಶರಣಾದ ಪ್ರೇಮಿಗಳು

ಗೋಕಾಕ: ಪ್ರೇಮ ವಿವಾಹಕ್ಕೆ ಮನೆಯವರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮನನೊಂದು ಪ್ರೇಮಿಗಳಿಬ್ಬರೂ ಆಟೋರಿಕ್ಷಾದಲ್ಲಿಯೇ ನೇಣಿಗೆ ಶರಣಾದ ಘಟನೆ ಗೋಕಾಕ ತಾಲೂಕಿನ ಹಿರೇನಂದಿ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಸವದತ್ತಿ ತಾಲೂಕಿನ ಮುನ್ನೋಳಿಯ ನಾಗಲಿಂಗ ನಗರದ ನಿವಾಸಿಗಳಾದ ನಾರಾಯಣ ಜಾಧವ (28) ರಂಜಿತಾ ಅಡಿವೆಪ್ಪ ಚೌಬಾರಿ (25) ಎಂದು ಗುರುತಿಸಲಾಗಿದೆ. ಇವರಿಬ್ಬರೂ ಕಳೆದ ನಾಲ್ಕು ವರ್ಷಗಳಿಂದಲೂ ಪರಸ್ಪರ ಪ್ರೀತಿಸುತ್ತಿದ್ದರು. ಸ್ವಂತ ಆಟೋ ಓಡಿಸಿಕೊಂಡು ಬದುಕು ಸಾಗಿಸುತ್ತಿದ್ದ ರಾಘವೇಂದ್ರನ ಜತೆ ರಂಜಿತಾ ಪ್ರೀತಿಯಲ್ಲಿದ್ದುದು ಅವರ ಮನೆಯವರಿಗೆ ಸರಿ ಬಿದ್ದಿರಲಿಲ್ಲ. ಹಾಗಾಗಿಯೆ ಕಳೆದೊಂದು ವಾರದ ಹಿಂದೆ ಬೇರೊಬ್ಬ ಹುಡುಗನ ಜತೆ ರಂಜಿತಾಳ ಮದುವೆ ನಿಶ್ಚಯ ಮಾಡಿಕೊಳ್ಳಲಾಯಿತು.
ಮನೆಯವರ ನಿರ್ಧಾರದಿಂದ ದಿಕ್ಕು ತೋಚದಂತಾದ ಪ್ರೇಮಿಗಳು ಸಾವಿನಲ್ಲಿ ಒಂದಾಗುವ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ. ಹಾಗಾಗಿಯೇ ಮನೆಯಿಂದ ದೂರ ಆಟೋದಲ್ಲಿಯೇ ಬಂದು ನಿರ್ಜನ ಪ್ರದೇಶದಲ್ಲಿ ಆಟೋ ನಿಲ್ಲಿಸಿ ಆಟೋದೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಗೋಕಾಕ ಗ್ರಾಮೀಣ ಪಿಎಸ್‌ಐ ಕಿರಣ ಮೋಹಿತೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಲಾಗಿದ್ದು, ಇದು ಆತ್ಮಹತ್ಯೆಯೋ ಅಥವಾ ಯಾರಾದರೂ ಕೊಲೆ ಮಾಡಿ ಆತ್ಮಹತ್ಯೆ ಎಂಬಂತೆ ಬಿಂಬಿಸಲಾಗಿದೆಯೋ ಎಂಬುದು ಮರಣೋತ್ತರ ಪರೀಕ್ಷೆಯ ನಂತರವಷ್ಟೇ ಸ್ಪಷ್ಟವಾಗಿ ಗೊತ್ತಾಗಲಿದೆ.

Exit mobile version