ಸಂಯುಕ್ತ ಕರ್ನಾಟಕ ದಿನಪತ್ರಿಕೆ ಶುಕ್ರವಾರದ ಸಂಪಾದಕೀಯ
ವಾಣಿಜ್ಯ ತೆರಿಗೆ ಇಲಾಖೆಯವರು ಬೀದಿ ವ್ಯಾಪಾರಿಗಳಿಗೆ ನೋಟಿಸ್ ನೀಡಿ ಕೋಲಾಹಲ ಏರ್ಪಟ್ಟ ಮೇಲೆ ಮುಖ್ಯಮಂತ್ರಿ ನೋಟಿಸ್ ಮೇಲೆ ಕ್ರಮಕೈಗೊಳ್ಳುವುದಿಲ್ಲ ಎಂದು ಹೇಳಿದ್ದರೂ ಅದು ಸಣ್ಣ ವರ್ತಕರಿಗೆ ತಲೆ ಮೇಲೆ ಇರುವ ತೂಗುಕತ್ತಿ ಎಂಬುದರಲ್ಲಿ ಸಂದೇಹವಿಲ್ಲ. ಯಾವಾಗ ಬೇಕಾದರೂ ಕೆಳಗೆ ಬರಬಹುದು. ಅದಕ್ಕೆ ಪರಿಹಾರ ಎಂದರೆ ಜಿಎಸ್‌ಟಿ ನೋಂದಣಿ ಮಾಡಿಕೊಂಡು ವಾರ್ಷಿಕ ಸಂಯೋಜಿತ ತೆರಿಗೆಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಪಾವತಿ ಮಾಡಿ ಪಾರಾಗುವುದು.
ವಾರ್ಷಿಕ 1.5 ಕೋಟಿ ರೂ. ವಹಿವಾಟು ನಡೆಸುವ ಎಲ್ಲರೂ ಇದರ ಲಾಭ ಪಡೆಯಬಹುದು. ಇದರಲ್ಲಿ ವಹಿವಾಟಿನ ಮೇಲೆ ಮಾತ್ರ ತೆರಿಗೆ. ಬೇರೆ ಯಾವುದೇ ವಿವರ ನೀಡಬೇಕಿಲ್ಲ. ನಿಮ್ಮ ವಹಿವಾಟಿನ ಒಟ್ಟು ಮೊತ್ತದ ಮೇಲೆ ಶೇ. 1ರಷ್ಟು ತೆರಿಗೆ ಕಟ್ಟಿದರೆ ಆಯಿತು. ಜಿಎಸ್‌ಟಿ ನೋಂದಣಿಗೆ ಶುಲ್ಕ ಇಲ್ಲ. ಹೋಟೆಲ್‌ಗೆ ಶೇ. 5 ಮತ್ತು ಸೇವಾವಲಯಕ್ಕೆ ಶೇ. 6ರಷ್ಟು ತೆರಿಗೆ ಸಲ್ಲಿಸಿದರೆ ಆಯಿತು. ಹಣ್ಣು, ಹಾಲು, ಹೂವು, ಮಾಂಸ. ಕೋಳಿ, ಬ್ರೆಡ್, ಬೇಕರಿ, ಬ್ರಾಂಡ್ ಇಲ್ಲದ ಆಹಾರ ಪದಾರ್ಥಗಳಿಗೆ ಜಿಎಸ್‌ಟಿ ಇಲ್ಲ.
ಆದರೆ ಇದರೊಂದಿಗೆ ಜಿಎಸ್‌ಟಿ ಪದಾರ್ಥ ಇದ್ದಲ್ಲಿ ತೆರಿಗೆ ಕೊಡುವುದು ಅನಿವಾರ್ಯ. ಈಗ ವಾಣಿಜ್ಯ ತೆರಿಗೆ ಇಲಾಖೆ 6 ಸಾವಿರಕ್ಕೂ ಹೆಚ್ಚು ವರ್ತಕರಿಗೆ ನೋಟಿಸ್ ನೀಡಿದೆ. ಅವುಗಳನ್ನು ಯಾವ ರೀತಿ ಮುಕ್ತಾಯಗೊಳಿಸಲಾಗುವುದು ಎಂಬುದನ್ನು ಇಲಾಖೆ ತಿಳಿಸಿಲ್ಲ. ಮುಖ್ಯಮಂತ್ರಿ ಈ ನೋಟಿಸ್‌ಗಳ ಮೇಲೆ ಮುಂದಿನ ಕ್ರಮ ಕೈಗೊಳ್ಳುವುದಿಲ್ಲ ಎಂದು ಹೇಳಿದ್ದರೂ ಅದು ಇಲಾಖೆಯ ಪ್ರಕಟಣೆಯಾಗಿ ಹೊರಬರಬೇಕು. ಅಲ್ಲಿಯವರೆಗೆ ಈ ನೋಟಿಸ್‌ಗಳಿಗೆ ಜೀವ ಇದ್ದೇ ಇರುತ್ತದೆ.
ಬಿಬಿಎಂಪಿ ಪ್ರಕಾರ 2 ಲಕ್ಷ ಬೀದಿ ವ್ಯಾಪಾರಿಗಳಿದ್ದಾರೆ. ಎಂಎಸ್‌ಎಂಇ ನೋಂದಾಯಿತರು 5 ಕೋಟಿ ಇದ್ದಾರೆ. 28 ಸಾವಿರ ಸಣ್ಣ ಉದ್ದಿಮೆದಾರರು ಇದ್ದಾರೆ. ಅವರೆಲ್ಲರೂ ಈಗ ಜಿಎಸ್‌ಟಿ ನೋಂದಣಿ ಪಡೆಯುವುದು ಅನಿವಾರ್ಯವಾಗಲಿದೆ. ವಾಣಿಜ್ಯ ಇಲಾಖೆ ಬ್ಯಾಂಕ್ ಖಾತೆಯನ್ನು ಆಧರಿಸಿ ನೋಟಿಸ್ ನೀಡಿದ್ದಾರೆ. ಇದರಿಂದ ಡಿಜಿಟಲ್ ವ್ಯವಹಾರದ ಮೇಲೆ ಈಗ ಪರಿಣಾಮ ಆಗಲಿದೆ. ನಗದು ವ್ಯಾಪಾರಕ್ಕೆ ಜನ ಬಯಸುವುದು ಸಹಜ. ಹೀಗಾಗಿ ಮತ್ತೆ ಚಿಲ್ಲರೆ ಸಮಸ್ಯೆ ತಲೆ ಎತ್ತಲಿದೆ.
ಡಿಜಿಟಲ್ ವ್ಯಾಪಾರ ಸುಲಭವಾಗಿ ಕಂಡಿದ್ದರಿಂದ ಬೀದಿಬದಿ ವ್ಯಾಪಾರಿಗಳು ಅದಕ್ಕೆ ಹೊಂದಿಕೊಂಡು. ಕಡ್ಲೆಕಾಯಿ ಮಾರುವವನ ಬಳಿಯೂ ಫೋನ್ ಪೇ ನಂಬರ್ ಇತ್ತು. ಈಗ ಇದು ಕಡಿಮೆಯಾಗಲಿದೆ. ಸಣ್ಣ ವ್ಯಾಪಾರಿಗಳು ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್‌ನಿಂದ ನಲುಗಿ ಹೋಗಿದ್ದಾರೆ. ಕೆಲವರಿಗಂತೂ ಲಕ್ಷಗಟ್ಟಲೆ ತೆರಿಗೆ ವಿಧಿಸಿರುವುದು ಕಂಡು ಬಂದಿದೆ. ಕಾನೂನು ರೀತ್ಯ ಈ ರೀತಿ ಮಾಡಲು ಬರುವುದಿಲ್ಲ. ಅವರಿಗೆ ಮೊದಲು ನೋಟಿಸ್ ಕೊಡಬೇಕು. ಅವರ ವ್ಯಾಪಾರ ವಹಿವಾಟಿನ ವಿವರ ಪಡೆದು ನಂತರ ತೆರಿಗೆ ವಿಧಿಸಬೇಕು.
ಬ್ಯಾಂಕ್ ಖಾತೆಯಲ್ಲಿ ಅವರ ಮನೆಯ ವ್ಯವಹಾರವೂ ಸೇರಿರುತ್ತದೆ. ಅವರ ಬೇರೆ ಹಣದ ವಿವರವೂ ಇರುತ್ತದೆ. ಎಲ್ಲವನ್ನು ವ್ಯಾಪಾರದ ವಹಿವಾಟಿಗೆ ಸೇರ್ಪಡೆ ಮಾಡುವುದು ಸರಿಯಲ್ಲ. ಇದುವರೆಗೆ ಜಿಎಸ್‌ಟಿ ಬಗ್ಗೆ ಬೀದಿ ವ್ಯಾಪಾರಿಗಳಿಗೆ ಅರಿವು ಮೂಡಿಸುವ ಒಂದು ಕಾರ್ಯಕ್ರಮವೂ ನಡೆದಿಲ್ಲ. ತೆರಿಗೆ ಬಗ್ಗೆ ನಮಗೆ ಗೊತ್ತಿಲ್ಲ ಎಂದರೆ ಅದನ್ನು ಸರ್ಕಾರ ಕೇಳುವುದಿಲ್ಲ. ತೆರಿಗೆ ಕಟ್ಟಲೇಬೇಕು ಎಂದು ಒತ್ತಾಯಿಸುತ್ತದೆ. ಜೆಎಸ್‌ಟಿ ತೆರಿಗೆಯ ನಿಯಮಗಳು ಕೂಡ ಅವಾಸ್ತವಿಕೆಯಿಂದ ಕೂಡಿದೆ. ಜಿಎಸ್‌ಟಿ ನೋಂದಣಿ ಆಗಿಲ್ಲ ಎಂದರೆ ಶೇ. 18ರಷ್ಟು ತೆರಿಗೆ, ತಡವಾಗಿ ಪಾವತಿಗೆ ಶೇ. 300ರಷ್ಟು ಬಡ್ಡಿ ವಿಧಿಸಲು ಅವಕಾಶವಿದೆ. ಇವುಗಳನ್ನು ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಸರಿಪಡಿಸುವಂತೆ ನಮ್ಮ ರಾಜ್ಯದ ಪ್ರತಿನಿಧಿ ಒತ್ತಾಯಿಸಬೇಕು.
ಈಗ ವಿದ್ಯುತ್ ಮೇಲೆ ಜಿಎಸ್‌ಟಿ ಇಲ್ಲ. ಆದರೆ ನಿಮ್ಮ ವಿದ್ಯುತ್ ವಾಹನವನ್ನು ರಿಚಾರ್ಜ್ ಮಾಡಲು ಹೋದರೆ ಜಿಎಸ್‌ಟಿ ಕೊಡಬೇಕು. ಅದೇ ವಾಹನವನ್ನು ನಿಮ್ಮ ಮನೆಯಲ್ಲೇ ರಿಚಾರ್ಜ್ ಮಾಡಿಕೊಂಡರೆ ಯಾವ ತೆರಿಗೆಯೂ ಇಲ್ಲ. ಇದು ವಿಚಿತ್ರವಾಗಿ ಕಂಡರೂ ನಿಜ. ರಿಚಾರ್ಜ್ ಕೇಂದ್ರಗಳು ಸೇವಾ ಕ್ಷೇತ್ರಕ್ಕೆ ಬರುವುದರಿಂದ ಜಿಎಸ್‌ಟಿ ಬೀಳುತ್ತದೆ. ಇದರ ಬಗ್ಗೆ ರಾಜ್ಯದ ಪ್ರತಿನಿಧಿ ಕೌನ್ಸಿಲ್ ಸಭೆಯಲ್ಲಿ ಪ್ರಶ್ನಿಸಬೇಕು. ಅದೇರೀತಿ ಈಗ ಬೀದಿಬದಿ ವರ್ತಕರ ಸಮಸ್ಯೆ ತಲೆಎತ್ತಿದೆ.
ಅದನ್ನೂ ನಮ್ಮ ಪ್ರತಿನಿಧಿ ಕೌನ್ಸಿಲ್ ಸಭೆಯಲ್ಲಿ ಪ್ರಸ್ತಾಪಿಸಿ ಪರಿಹಾರ ಹುಡುಕಬೇಕು. ಜಿಎಸ್‌ಟಿಯಲ್ಲಿ ಎರಡು ತೆರಿಗೆ ಅಡಗಿದೆ. ಒಂದು ಕೇಂದ್ರ ಸರ್ಕಾರಕ್ಕೆ ಹೋಗುವುದು, ಮತ್ತೊಂದು ರಾಜ್ಯಕ್ಕೆ ನೇರವಾಗಿ ತಲುಪುವುದು. ಕೇಂದ್ರಕ್ಕೆ ಹೋಗುವ ತೆರಿಗೆಯಲ್ಲಿ ಶೇ. 31ರಷ್ಟು ಹಣ ರಾಜ್ಯಕ್ಕೆ ಹಿಂತಿರುಗಿ ಬರುತ್ತದೆ. ಇದನ್ನು ಶೇ. 50ಕ್ಕೆ ಹೆಚ್ಚಿಸುವಂತೆ ರಾಜ್ಯ ಒತ್ತಾಯಿಸುತ್ತಲೇ ಬಂದಿದೆ. ತೆರಿಗೆ ವಿಚಾರದಲ್ಲಿ ರಾಜಕೀಯ ನುಸುಳಬಾರದು. ಹಣ ಕಾಸು ಪ್ರಪಂಚ ಪಾರದರ್ಶಕವಾಗಿರಬೇಕು. ತೆರಿಗೆ ಮೂಲಕ ಬಂದ ಹಣ ಅಭಿವೃದ್ಧಿ ಕೆಲಸಕ್ಕೆ ಮೀಸಲಾಗಬೇಕು. ಆಗ ತೆರಿಗೆ ನೀಡಿದವರಿಗೂ ಸಮಾಧಾನ.