ಹಾವೇರಿ: ಶ್ರೀಗಂಧದ ಮರ ಕಡಿದ ಆರೋಪಿ ಹಿರೂರ ಗ್ರಾಮದ ಸಿಖಂದರ ಅಬ್ದುಲಖಾದರ ಆಲೂರ ಎಂಬಾತನಿಗೆ ಆರು ವರ್ಷ ಕಠಿಣ ಕಾರಾವಾಸ ಶಿಕ್ಷೆ ಹಾಗೂ ೫೦ ಸಾವಿರ ರೂ., ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಿರಾದಾರ ದೇವೇಂದ್ರಪ್ಪ ಎನ್. ಅವರು ಸೋಮವಾರ ತೀರ್ಪು ನೀಡಿದ್ದಾರೆ.
ಆರೋಪಿತನು ೨೦೧೯ ಜೂ.೨೬ರಂದು ಸರ್ಕಾರದಿಂದ ಯಾವುದೇ ಅನುಮತಿ ಪಡೆಯದೆ ಶಿರಸಿ ತಾಲೂಕ ಬಿಸಲಕೊಪ್ಪ ಗ್ರಾಮದ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಬೆಳೆದ ಗಂಗಧ ಮರ ಕಡಿದು ಮೋಟಾರ ಸೈಕಲ್ ಮೇಲೆ ಸಾಗಾಟ ಮಾಡುವಾಗ ಸಿಕ್ಕ ಹಿನ್ನಲೆಯಲ್ಲಿ, ಹಾನಗಲ್ಲ ಪೊಲೀಸ್ ಠಾಣೆಯ ಆಗಿನ ಪಿ.ಎಸ್.ಐ. ಎ.ಆರ್.ಮುಂದಿನಮನಿ ಅವರು ತನಿಖೆ ಕೈಗೊಂಡು ಆರೋಪಿತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಆರೋಪಿ ಸಿಖಂದರ ಅಬ್ದುಲಖಾದರ ಆಲೂರ ಈತನ ಮೇಲಿನ ಆಪಾದನೆಗಳನ್ನು ಅಭಿಯೋಜನೆಯು ರುಜುವಾತು ಪಡಿಸಿದ ಹಿನ್ನಲೆಯಲ್ಲಿ ನ್ಯಾಯಾಧೀಶರು ಆರೋಪಿಗೆ ಮೇಲಿನ ಶಿಕ್ಷೆ ಹಾಗೂ ದಂಢ ವಿಧಿಸಿ ತೀರ್ಪು ನೀಡಿದ್ದಾರೆ. ಅಭಿಯೋಜನೆ ಪರವಾಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕರಾದ ಸಿದ್ಧಾರೂಢ ಎಂ ಗೆಜ್ಜಿಹಳ್ಳಿ ವಾದ ಮಂಡಿಸಿದ್ದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.