Home ಕ್ರೀಡೆ ಟೀಂ ಇಂಡಿಯಾದ ಬಹುಮಾನಗಳ ಸುರಿಮಳೆ: 15 ತಿಂಗಳಲ್ಲಿ 3 ಐಸಿಸಿ ಟ್ರೋಫಿಗಳು!

ಟೀಂ ಇಂಡಿಯಾದ ಬಹುಮಾನಗಳ ಸುರಿಮಳೆ: 15 ತಿಂಗಳಲ್ಲಿ 3 ಐಸಿಸಿ ಟ್ರೋಫಿಗಳು!

0

ಕಳೆದ ಹದಿನೈದು ತಿಂಗಳು ಭಾರತೀಯ ಕ್ರಿಕೆಟ್ ತಂಡಕ್ಕೆ ಸುವರ್ಣಾಕ್ಷರಗಳಲ್ಲಿ ಬರೆದಿಡುವ ಸಮಯ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಅವರಂತಹ ದಿಗ್ಗಜರ ಪ್ರದರ್ಶನದಿಂದ ಸ್ಫೂರ್ತಿ ಪಡೆದ ಟೀಂ ಇಂಡಿಯಾ, ಮೂರು ಪ್ರತಿಷ್ಠಿತ ಐಸಿಸಿ ಟೂರ್ನಮೆಂಟ್‌ಗಳನ್ನು ಗೆಲ್ಲುವುದರ ಮೂಲಕ ಕ್ರೀಡಾ ಲೋಕದಲ್ಲಿ ತಮ್ಮ ಪ್ರಾಬಲ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ಈ ಗೆಲುವುಗಳೊಂದಿಗೆ ಕೋಟ್ಯಾಂತರ ರೂಪಾಯಿ ಬಹುಮಾನದ ಮೊತ್ತವನ್ನು ಕೂಡಾ ಗಳಿಸಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಯಿಂದ ಭರ್ಜರಿ ಗೌರವಕ್ಕೆ ಪಾತ್ರವಾಗಿದೆ. 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದ ನಂತರ ಐಸಿಸಿ ಟ್ರೋಫಿಗಳ ಬರ ಎದುರಿಸುತ್ತಿದ್ದ ಭಾರತ, ಈ ಗೆಲುವುಗಳ ಮೂಲಕ ಆ ಕೊರತೆಯನ್ನು ನೀಗಿಸಿಕೊಂಡಿದೆ. ಸತತವಾಗಿ ಅಂತರರಾಷ್ಟ್ರೀಯ ಕ್ರಿಕೆಟ್ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ತೊಡಗಿಸಿಕೊಂಡಿರುವ ಆಟಗಾರರು ತಮ್ಮ ಅಸಾಧಾರಣ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿದ್ದಾರೆ.

ಟಿ20 ವಿಶ್ವಕಪ್ 2024: ಅಮೆರಿಕದಲ್ಲಿ ಇತಿಹಾಸ ಸೃಷ್ಟಿ: ಜೂನ್ 1, 2024 ರಂದು ಅಮೆರಿಕಾ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ಜಂಟಿಯಾಗಿ ನಡೆದ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಭಾರತ ತನ್ನ ಪರಾಕ್ರಮವನ್ನು ತೋರಿಸಿತು. ಡಲ್ಲಾಸ್‌ನಲ್ಲಿ ಐರ್ಲೆಂಡ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯದೊಂದಿಗೆ ಶುಭಾರಂಭ ಮಾಡಿತ್ತು.

ಭಾರತ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ನ್ನು 68 ರನ್‌ಗಳಿಂದ ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟಿತು. ರೋಚಕ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 7 ರನ್‌ಗಳಿಂದ ಮಣಿಸಿ, 125 ಕೋಟಿ ರೂಪಾಯಿ ಬಹುಮಾನದೊಂದಿಗೆ ಟಿ20 ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿತು.

ಚಾಂಪಿಯನ್ಸ್ ಟ್ರೋಫಿ 2025: ನ್ಯೂಜಿಲೆಂಡ್ ವಿರುದ್ಧ ಗೆಲುವು ಫೆಬ್ರವರಿ 19, 2025 ರಂದು ಪಾಕಿಸ್ತಾನ ಮತ್ತು ಯುಎಇನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮತ್ತೊಮ್ಮೆ ಚಾಂಪಿಯನ್ ಪಟ್ಟಕ್ಕೇರಿತು. ಬಾಂಗ್ಲಾದೇಶ ವಿರುದ್ಧ 6 ವಿಕೆಟ್‌ಗಳ ಜಯದೊಂದಿಗೆ ಶುಭಾರಂಭ ಮಾಡಿದ ಭಾರತ, ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 4 ವಿಕೆಟ್‌ಗಳ ಜಯ ಗಳಿಸಿತು.

ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ಬಲಿಷ್ಠ ನ್ಯೂಜಿಲೆಂಡ್ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿ, 58 ಕೋಟಿ ರೂಪಾಯಿ ಬಹುಮಾನದೊಂದಿಗೆ ಚಾಂಪಿಯನ್ಸ್ ಟ್ರೋಫಿಯನ್ನು ಎತ್ತಿ ಹಿಡಿಯಿತು. ರಾಜಕೀಯ ವಿವಿದ  ಕಾರಣಗಳಿಂದ ಪಾಕಿಸ್ತಾನದಲ್ಲಿ ಆಡಲು ನಿರಾಕರಿಸಿದ ಭಾರತದ ಪಂದ್ಯಗಳನ್ನು ಯುಎಇನಲ್ಲಿ ಆಯೋಜಿಸಲಾಗಿತ್ತು.

ಏಷ್ಯಾ ಕಪ್ 2025; ಪಾಕಿಸ್ತಾನದ ಮೇಲೆ ಮತ್ತೆ ಸವಾರಿ: ಕೆಲವೇ ದಿನಗಳ ಹಿಂದೆ, ಭಾರತ ತಂಡ ಏಷ್ಯಾ ಕಪ್ 2025 ಅನ್ನು ಗೆಲ್ಲುವ ಮೂಲಕ ತನ್ನ ಯಶಸ್ಸಿನ ಪಟ್ಟಿಗೆ ಮತ್ತೊಂದು ಸೇರ್ಪಡೆ ಮಾಡಿತು. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಫೈನಲ್‌ನಲ್ಲಿ 5 ವಿಕೆಟ್‌ಗಳಿಂದ ಸೋಲಿಸಿ, 21 ಕೋಟಿ ರೂಪಾಯಿ ಬಹುಮಾನ ಪಡೆಯಿತು.

ಈ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಆಡಿದ ಮೂರೂ ಪಂದ್ಯಗಳಲ್ಲಿ ಭಾರತ ಜಯಗಳಿಸಿತು. ಈ ಸರಣಿಯಲ್ಲಿ ಭಾರತದ ಆಟಗಾರರು ಪಾಕಿಸ್ತಾನದ ಸಚಿವರ ಕೈಯಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸುವ ಮೂಲಕ ತಮ್ಮ ವಿಶಿಷ್ಟ ನಿಲುವನ್ನು ಪ್ರದರ್ಶಿಸಿದರು. ಟೀಂ ಇಂಡಿಯಾ ಕಳೆದ 15 ತಿಂಗಳಲ್ಲಿ ಕ್ರೀಡಾಂಗಣದಲ್ಲಿ ಅದ್ಭುತ ಪ್ರದರ್ಶನ ನೀಡಿ, ಮೂರು ಐಸಿಸಿ ಟ್ರೋಫಿಗಳನ್ನು ಗೆಲ್ಲುವ ಮೂಲಕ ಭಾರತೀಯ ಕ್ರಿಕೆಟ್‌ನ ಶಕ್ತಿಯನ್ನು ಜಗತ್ತಿಗೆ ತೋರಿಸಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version